ಮಂಗಳವಾರ, ಅಕ್ಟೋಬರ್ 27, 2020
22 °C
60 ಭದ್ರತಾ ಸಿಬ್ಬಂದಿ, ಎಂಟು ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಇಪ್ಪತ್ನಾಲ್ಕು ಗಂಟೆ ನಿಗಾ

ಹಾಥರಸ್‌: ಸಂತ್ರಸ್ತೆಯ ಮನೆಗೆ ಭದ್ರತೆ, ಸಿಸಿಟಿವಿ ಕಣ್ಗಾವಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹಾಥರಸ್‌ (ಉತ್ತರ ಪ್ರದೇಶ): ‘ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ಇಲ್ಲಿನ ದಲಿತ ಮಹಿಳೆಯ ಮನೆಯ ಸುತ್ತ 60 ಮಂದಿ ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸುವ ಜತೆಗೆ, ಎಂಟು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ‘ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಉಸ್ತುವಾರಿ ನೋಡಲ್ ಆಫೀಸರ್ ಪೊಲೀಸ್ ಮಹಾ ನಿರ್ದೇಶಕ ಶಲಭ್ ಮಾಥೂರ್, ‘ಅಗತ್ಯಬಿದ್ದರೆ ನಿಯಂತ್ರಣ ಕೊಠಡಿಯನ್ನು ತೆರೆಯಲಾಗುತ್ತದೆ‘ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘ಮಹಿಳೆ ಸೇರಿದಂತೆ 60 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 12 ಗಂಟೆಗೆ ಒಂದು ಪಾಳಿಯಂತೆ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಈ ಭದ್ರತಾ ಸಿಬ್ಬಂದಿಯ ಉಸ್ತುವಾರಿಗಾಗಿ ಹಿರಿಯ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಸಂತ್ರಸ್ತೆಯ ಮನೆಯ ಸುತ್ತ ದಿನದ ಇಪ್ಪತ್ನಾಲ್ಕು ಗಂಟೆಯೂ ನಿಗಾ ಇಡಲಾಗುತ್ತಿದೆ‘ ಎಂದು ಅವರು  ವಿವರಿಸಿದ್ದಾರೆ.

ಹಾಥರಸ್‌ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್‌, ‘ಸಂತ್ರಸ್ತೆಯ ಮನೆ ಹೊರಗಡೆ ಒಬ್ಬ ಪೊಲೀಸರನ್ನು ನಿಯೋಜಿಸಲಾಗಿದ್ದು, ಅವರು ಸಂತ್ರಸ್ತೆಯ ಮನೆಗೆ ಭೇಟಿ ನೀಡುವವರ ಹೆಸರು ಮತ್ತಿತರ ವಿವರಗಳನ್ನು ದಾಖಲಿಸಿಕೊಳ್ಳುತ್ತಾರೆ‘ ಎಂದು ತಿಳಿಸಿದ್ದಾರೆ.

ಸಂತ್ರಸ್ತೆ ಕುಟುಂಬದ ಪ್ರತಿ ಸದಸ್ಯರಿಗೆ ಇಬ್ಬರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರ ಜತೆಗೆ ಅಗ್ನಿಶಾಮಕ ದಳ, ಸ್ಥಳೀಯ ಇಂಟೆಲಿಜೆನ್ಸ್‌ ಘಟಕದ ಅಧಿಕಾರಿಗಳನ್ನೂ ನೇಮಿಸಲಾಗಿದೆ. 

ಮನೆಯ ಪ್ರಮುಖ ದ್ವಾರದಲ್ಲಿ ಲೋಹ ಪರಿಶೋಧಕ ಯಂತ್ರವನ್ನು ಅಳವಡಿಸಲಾಗಿದೆ. ಕ್ಷಿಪ್ರ ಕಾರ್ಯಪಡೆ ತಂಡದವರು ಅಲ್ಲಿದ್ದು, ಯಂತ್ರದ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಸಿಸಿಟಿವಿ ಕ್ಯಾಮೆರಾದ ನೆರವಿನಿಂದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ‘ ಎಂದು ಎಸ್‌ಪಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು