ಫಡಣವೀಸ್ ಆದೇಶದ ಮೇರೆಗೆ ತನಿಖಾ ಸಂಸ್ಥೆಗಳು ಕೆಲಸ ಮಾಡುತ್ತಿವೆ: ನವಾಬ್ ಮಲಿಕ್

ಮುಂಬೈ: ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಅವರ ಆದೇಶದ ಮೇರೆಗೆ ವಿರೋಧ ಪಕ್ಷಗಳ ನಾಯಕರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಸೋಮವಾರ ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಅವರು, 'ಕಳೆದ ಏಳು ವರ್ಷಗಳಿಂದ ಫಡಣವೀಸ್ ಅವರು ಬಿಜೆಪಿಯ ವಿರೋಧಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತನಿಖಾ ಸಂಸ್ಥೆಗಳಿಗೆ ನಿರ್ದೇಶನ ನೀಡುತ್ತಿದ್ದಾರೆ. ಈಗ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ನೋಟಿಸ್ ನೀಡಲಾಗಿದೆ. ಈ ಸಂಸ್ಥೆಗಳು ನನ್ನನ್ನೂ ಸಹ ಗುರಿಯಾಗಿಸಿವೆ. ನಾನು ಏಜೆನ್ಸಿಗಳ ಕಿರುಕುಳಕ್ಕೆ ಹೆದರುವುದಿಲ್ಲ‘ ಎಂದು ಮಲಿಕ್ ಹೇಳಿದ್ದಾರೆ.
‘ಈ ಏಜೆನ್ಸಿಗಳಿಗೆ ಫಡಣವೀಸ್ ಅವರನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ‘ ಎಂದು ಮಲಿಕ್ ವ್ಯಂಗ್ಯವಾಡಿದ್ದಾರೆ.
‘ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭಯವಿದೆ. ಆ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ನಾಯಕರ ವಿರುದ್ಧ ಕಾರ್ಯನಿರ್ವಹಿಸಲು ತನಿಖಾ ಸಂಸ್ಥೆಗಳ ಮೇಲೆ ಪ್ರಭಾವ ಬೀರಲಾಗಿದೆ‘ ಎಂದೂ ಮಲಿಕ್ ಹೇಳಿದ್ದಾರೆ.
ಭೂಹಗರಣವೊಂದರಲ್ಲಿ ಸಚಿವ ಮಲಿಕ್, ಅವರ ಕುಟುಂಬದ ಸದಸ್ಯರು ಮತ್ತು 1993ರ ಮುಂಬೈನ ಸರಣಿ ಸ್ಫೋಟದ ಇಬ್ಬರು ಆರೋಪಿಗಳು ಭಾಗಿಯಾಗಿದ್ದಾರೆ ಎಂದು ಫಡಣವಿಸ್ ಈ ಹಿಂದೆ ಆರೋಪಿಸಿದ್ದರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.