ಶನಿವಾರ, ಆಗಸ್ಟ್ 20, 2022
21 °C
ಸಾಮೂಹಿಕ ಲಸಿಕಾ ಕಾರ್ಯಕ್ರಮ, ನೋಂದಣಿಗಾಗಿ ಕೋವಿನ್‌ ವೆಬ್‌ಸೈಟ್‌

ಕೋವಿಡ್‌ ಲಸಿಕೆಗೆ ನೋಂದಣಿ ಕಡ್ಡಾಯ; ಸರ್ಕಾರದ ಮಾರ್ಗಸೂಚಿ ಪ್ರಕಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್ ಲಸಿಕೆ ಸದ್ಯದಲ್ಲೇ ದೊರೆಯುವ ಸಾಧ್ಯತೆಯಿದ್ದು, ಸಾಮೂಹಿಕ ಲಸಿಕಾ ಕಾರ್ಯಕ್ರಮದ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಕಳುಹಿಸಿಕೊಟ್ಟಿದೆ. ಮುಂಗಡವಾಗಿ ನೋಂದಾಯಿಸಿಕೊಂಡವರಿಗೆ ಮಾತ್ರ ಕೋವಿಡ್ ನಿರೋಧಕ ಲಸಿಕೆ ಹಾಕಲಾಗುತ್ತದೆ. ಲಸಿಕಾ ಕೇಂದ್ರದಲ್ಲಿ ನೋಂದಣಿಗೆ ಅವಕಾಶವಿಲ್ಲ ಎಂದು ಮಾರ್ಗೂಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಕೋವಿನ್‌ (ಕೋವಿಡ್‌ ವ್ಯಾಕ್ಸಿನ್‌ ಇಂಟೆಲಿಜೆನ್ಸ್‌ ನೆಟ್‌ವರ್ಕ್‌) ಎಂಬ ವೆಬ್‌ಸೈಟ್‌ನಲ್ಲಿ ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಬೇಕು. 

ಲಭ್ಯ ಇರುವ ವಿವಿಧ ಕಂಪನಿಗಳ ಲಸಿಕೆಗಳನ್ನು ಎಲ್ಲ ಜಿಲ್ಲೆಗಳಿಗೂ ಹಂಚುವ ಬದಲು, ಒಂದು ಜಿಲ್ಲೆಗೆ ಒಂದೇ ಕಂಪನಿಯ ಲಸಿಕೆ ಪೂರೈಕೆ ಆಗುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯಗಳಿಗೆ ಸೂಚಿಸಲಾಗಿದೆ. 

ಲಸಿಕೆಯಲ್ಲಿ ಬಳಕೆ ಅವಧಿ ಮುಕ್ತಾಯದ ದಿನಾಂಕವು (ಎಕ್ಸ್‌ಪೈರಿ) ಇರುವುದಿಲ್ಲ. ದಿನಾಂಕ ಇಲ್ಲ ಎಂಬ ಕಾರಣಕ್ಕೆ ಲಸಿಕೆ ಹಾಕುವವರು ಗೊಂದಲಕ್ಕೆ ಒಳಗಾಗಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. 

ಲಸಿಕೆ: ಎಲ್ಲಿ, ಹೇಗೆ?

* ಪ್ರತಿ ದಿನದ ಒಂದು ಅವಧಿಯಲ್ಲಿ (ಸೆಷನ್) 100–200 ಜನರಿಗೆ ಲಸಿಕೆ ನೀಡಿಕೆ

*ಲಸಿಕಾ ಕೇಂದ್ರಕ್ಕೆ ಒಮ್ಮೆಗೆ ಒಬ್ಬರಿಗೆ ಮಾತ್ರ ಪ್ರವೇಶ

‍‍‍*ಲಸಿಕೆ ಹಾಕಿಸಿಕೊಂಡ ವ್ಯಕ್ತಿಯ ಮೇಲೆ 30 ನಿಮಿಷ ನಿಗಾ

*ಲಸಿಕೆ ಯಾವುದೇ ಅಡ್ಡಪರಿಣಾಮ ಉಂಟುಮಾಡಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶ

*ಒಂದು ಲಸಿಕಾ ತಂಡದಲ್ಲಿ ಐವರು ಸಿಬ್ಬಂದಿ ಇರುತ್ತಾರೆ 

ನೋಂದಣಿ ಮುಖ್ಯ

*ಮೊದಲ ಹಂತದಲ್ಲಿ ಸುಮಾರು 30 ಕೋಟಿ ಜನರಿಗೆ ಲಸಿಕೆ ಹಾಕುವ ಗುರಿ

*ಮತದಾರರ ಪಟ್ಟಿಯ ಆಧಾರದಲ್ಲಿ 50 ವರ್ಷ ದಾಟಿದ ವ್ಯಕ್ತಿಗಳನ್ನು ಗುರುತಿಸಲಾಗುವುದು

* ಕೋವಿನ್‌ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌, ಚಾಲನಾ ಪರವಾನಗಿ, ಪಾಸ್‌ಪೋರ್ಟ್‌, ಪಿಂಚಣಿ ದಾಖಲೆ ಸೇರಿದಂತೆ ಭಾವಚಿತ್ರ ಇರುವ 12 ದಾಖಲೆಗಳನ್ನು ಪಟ್ಟಿ ಮಾಡಲಾಗಿದೆ. ಯಾವುದಾದರೂ ಒಂದನ್ನು ಬಳಸಿ ನೋಂದಣಿ ಮಾಡಿಕೊಳ್ಳಬಹುದು

50 ವರ್ಷ ಮೇಲ್ಪಟ್ಟವರಿಗೆ ಲಸಿಕೆ

ಆರೋಗ್ಯ ಕಾರ್ಯಕರ್ತರು, ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುವವರು (ಪೊಲೀಸ್‌, ಅರೆಸೇನಾಪಡೆ ಸಿಬ್ಬಂದಿ ಮುಂತಾದವರು) 50 ವರ್ಷ ಮೇಲ್ಪಟ್ಟವರು ಮತ್ತು ರೋಗದಿಂದ ಬಳಲುತ್ತಿರುವ ಐವತ್ತು ವರ್ಷದ ಒಳಗಿನವರಿಗೆ ಆರಂಭಿಕ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ. ವಯಸ್ಸಿನ ಆಧಾರದ ಮೇಲೆ ಆದ್ಯತಾ ಗುಂಪುಗಳನ್ನು ರಚಿಸಲಾಗಿದೆ. 50–60 ವರ್ಷದವರು ಮತ್ತು 60 ವರ್ಷ ಮೇಲ್ಪಟ್ಟವರು ಎಂಬ ಎರಡು ಹಂತದ ವಿಂಗಡಣೆ ಮಾಡಲಾಗಿದೆ. ಕೋವಿಡ್‌ ಹರಡುವಿಕೆ ಮತ್ತು ಲಸಿಕೆ ಲಭ್ಯತೆಯ ಆಧಾರದ ಮೇಲೆ ಉಳಿದ ಜನರಿಗೆ ಲಸಿಕೆ ಒದಗಿಸಲಾಗುತ್ತದೆ.

ಲಸಿಕೆ ನಿರ್ವಹಣೆ ನಿಯಮಗಳು

*ಲಸಿಕೆ ಸಾಗಿಸುವ ಪೆಟ್ಟಿಗೆ, ಲಸಿಕೆ ಬಾಟಲುಗಳು ಅಥವಾ ಐಸ್ ಪ್ಯಾಕ್‌ಗಳಿಗೆ ನೇರವಾಗಿ ಸೂರ್ಯನ ಬೆಳಕು ತಾಗದಂತೆ ನೋಡಿಕೊಳ್ಳಬೇಕು. ಲಸಿಕೆ ಹಾಕುವಾಗ ಮಾತ್ರ ಮುಚ್ಚಳವನ್ನು ತೆರೆಯಬೇಕು  

*ಲಸಿಕೆ ನೀಡುವ ಅವಧಿ ಮುಗಿದ ಕೂಡಲೇ, ಎಲ್ಲ ಐಸ್ ಪ್ಯಾಕ್‌ಗಳು ಮತ್ತು ಬಳಕೆಯಾಗದ ಲಸಿಕೆ ಬಾಟಲುಗಳನ್ನು ನಿಗದಿತ ಪೆಟ್ಟಿಗೆಯಲ್ಲಿರಿಸಿ ಹಿಂತಿರುಗಿಸಬೇಕು

*ವಿಶಾಲವಾದ ಕೊಠಡಿ, ಜನರ ನಿರ್ವಹಣಾ ವ್ಯವಸ್ಥೆ ಇದ್ದಲ್ಲಿ ಮಾತ್ರ, ಹೆಚ್ಚುವರಿ ಅಧಿಕಾರಿಯನ್ನು ನಿಯೋಜಿಸಿ ಒಂದು ಅವಧಿಯಲ್ಲಿ 200 ಜನರವರೆಗೆ ಲಸಿಕೆ ಹಾಕಲು ಅವಕಾಶವಿದೆ

ಏನೇನು ಸವಾಲುಗಳು

*ಲಸಿಕೆ ಕಾರ್ಯಕ್ರಮದ ಪ್ರಗತಿ, ಪ್ರಯೋಜನಗಳ ಕುರಿತು ವಾಸ್ತವಿಕ ಮತ್ತು ಸಮಯೋಚಿತ ಮಾಹಿತಿಯನ್ನು 130 ಕೋಟಿ ಜನರಿಗೆ ತಲುಪಿಸುವುದು

*ಲಸಿಕೆಯನ್ನು ಮೊದಲು ಯಾರಿಗೆ ನೀಡಲಾಗುತ್ತದೆ ಎಂದು ಸರ್ಕಾರ ಗೊತ್ತುಪಡಿಸಿರುವ ಆದ್ಯತಾ ವಲಯದ ಕುರಿತಾದ ಸಾರ್ವಜನಿಕರ ಪ್ರಶ್ನೆಗಳು ಮತ್ತು ಆತಂಕಗಳು

*ಸಣ್ಣ ಪ್ರಮಾಣದ ಪ್ರಯೋಗದ ನಂತರ ಪರಿಚಯಿಸಲಾದ ಲಸಿಕೆಗಳ ಬಗ್ಗೆ ಜನರ ಆತಂಕ, ಸುರಕ್ಷತಾ ಕಾಳಜಿ, ಎದುರಾಗಬಹುದಾದ ಪ್ರತಿಕೂಲ ಪರಿಣಾಮಗಳ ಬಗ್ಗೆ ಭಯ

*ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ತಪ್ಪು ಕಲ್ಪನೆ, ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ವದಂತಿಗಳು ಮತ್ತು ನಕಾರಾತ್ಮಕ ಸುದ್ದಿಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು