ಬುಧವಾರ, ಡಿಸೆಂಬರ್ 2, 2020
16 °C

ಪ್ರವಾಹ | ರಾಜ್ಯಕ್ಕೆ ₹ 577 ಕೋಟಿ ನೆರವು; ಕೇಂದ್ರದಿಂದ ಆರು ರಾಜ್ಯಗಳಿಗೆ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರವಾಹದಿಂದ ತತ್ತರಿಸಿರುವ ಕರ್ನಾಟಕದ ಸಂತ್ರಸ್ತರ ನೆರವಿಗಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌)ಯಿಂದ ₹ 577.84 ಕೋಟಿ ಮುಂಗಡ ಪರಿಹಾರ ಮಂಜೂರು ಮಾಡಿದೆ.

ಕೇಂದ್ರದ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ, ಕರ್ನಾಟಕ ಹೊರತುಪಡಿಸಿ ಇತರ ಐದು ರಾಜ್ಯಗಳಿಗೂ ನೈಸರ್ಗಿಕ ವಿಕೋಪ ಪರಿಹಾರ ಒದಗಿಸಲು ನಿರ್ಧರಿಸಲಾಗಿದೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಾಜ್ಯದಾದ್ಯಂತ ಭಾರಿ ಮಳೆಯಿಂದ ಪ್ರವಾಹ ತಲೆದೋರಿ ಉಂಟಾಗಿದ್ದ ಭೂಕುಸಿತ ಮತ್ತು ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಒಳಗಾಗಿರುವ ಸಂತ್ರಸ್ತರಿಗೆ ಈ ಮೂಲಕ ನೆರವು ದೊರೆಯಲಿದೆ.

ಕಳೆದ ಮೇ ತಿಂಗಳಲ್ಲಿ ಬೀಸಿದ್ದ ಅಂಪನ್‌ ಚಂಡಮಾರುತದಿಂದ ತತ್ತರಿಸಿರುವ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಿಗೆ ಕ್ರಮವಾಗಿ  ₹ 2707.77 ಹಾಗೂ ₹ 128.33 ಕೋಟಿ ಒದಗಿಸಿರುವ ಸಮಿತಿಯು, ಪ್ರವಾಹದಿಂದ ಸಮಸ್ಯೆಗೆ ಒಳಗಾಗಿರುವ ಮಧ್ಯಪ್ರದೇಶಕ್ಕೆ ₹ 611.61 ಕೋಟಿ ಒದಗಿಸಲು ತೀರ್ಮಾನಿಸಿದೆ.

ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿರುವ ಮಹಾರಾಷ್ಟ್ರ, ಸಿಕ್ಕಿಂ ರಾಜ್ಯಗಳಿಗೂ ಪರಿಹಾರ ಮಂಜೂರು ಮಾಡಲಾಗಿದ್ದು, ಎಲ್ಲ ರಾಜ್ಯಗಳಿಗೂ ಸೇರಿ ಒಟ್ಟು ₹ 4381.88 ಕೋಟಿ ಒದಗಿಸಲಾಗುತ್ತಿದೆ.

ಈಗಾಗಲೇ ಎಲ್ಲ 28 ರಾಜ್ಯಗಳಿಗೆ ಪ್ರಸಕ್ತ ಸಾಲಿನ ರಾಜ್ಯಗಳ ನೈಸರ್ಗಿಕ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್‌) ಅಡಿ ಒಟ್ಟು 15,524.43 ಕೋಟಿ ಪರಿಹಾರವನ್ನು ಒದಗಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು