ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ: ‘ಆಂಧ್ರ’ ಸರ್ಕಾರದ ನಿರ್ಧಾರಕ್ಕೆ ಕೇಂದ್ರದ ವಿರೋಧ

Last Updated 27 ಸೆಪ್ಟೆಂಬರ್ 2020, 15:44 IST
ಅಕ್ಷರ ಗಾತ್ರ

ನವದೆಹಲಿ: ಒಂದನೇ ತರಗತಿಯಿಂದ ಆರನೇ ತರಗತಿಯವರೆಗೆ ಶಿಕ್ಷಣದ ಮಾಧ್ಯಮವಾಗಿ ಇಂಗ್ಲೀಷ್ ಆಯ್ಕೆ ಮಾಡಿಕೊಳ್ಳಲು ಎಲ್ಲ ಸರ್ಕಾರಿ ಶಾಲೆಗಳಿಗೆ ಆಂಧ್ರ ಪ್ರದೇಶ ಸರ್ಕಾರ ಸೂಚಿಸಿರುವುದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ‌

ರಾಷ್ಟ್ರೀಯ ಶಿಕ್ಷಣ ನೀತಿ 2020ರ(ಎನ್‌ಇಪಿ) ಪ್ರಕಾರ, ‘ಎಲ್ಲೆಲ್ಲಿ ಸಾಧ್ಯವಿದೆಯೊ ಅಲ್ಲಿ, ಕನಿಷ್ಠ ಐದನೇ ತರಗತಿಯವರೆಗೆ ಅಥವಾ ಮೇಲಾಗಿ ಎಂಟನೇ ತರಗತಿಯವರೆಗೆ ಮಾತೃಭಾಷೆ, ಸ್ಥಳೀಯ ಅಥವಾ ಪ್ರಾದೇಶಿಕ ಭಾಷೆಯಲ್ಲೇ ಶಿಕ್ಷಣ ನೀಡಬೇಕು’ ಎನ್ನುವುದನ್ನು ಸರ್ಕಾರ ಉಲ್ಲೇಖಿಸಿದೆ. ‘ಸಂವಿಧಾನದಲ್ಲಿರುವ ಅವಕಾಶ, ಜನರ ಆಕಾಂಕ್ಷೆ, ಪ್ರದೇಶ ಹಾಗೂ ರಾಷ್ಟ್ರೀಯ ಐಕ್ಯತೆಯನ್ನುಗಮನದಲ್ಲಿ ಇರಿಸಿಕೊಂಡು ತ್ರಿಭಾಷಾ ಸೂತ್ರದ ಅನುಷ್ಠಾನ ಮುಂದುವರಿಯಲಿದೆ’ ಎಂದು ಎನ್ಇಪಿಯನ್ನು ಉಲ್ಲೇಖಿಸಿ ಅಫಿಡಾವಿಟ್‌ನಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯ ಹೇಳಿದೆ.

‘ಆದರೆ, ತ್ರಿಭಾಷಾ ಸೂತ್ರದಲ್ಲಿ ಹೆಚ್ಚಿನ ನಮ್ಯತೆ ಇರಲಿದೆ ಹಾಗೂ ಯಾವುದೇ ರಾಜ್ಯದ ಮೇಲೆ ಯಾವ ಭಾಷೆಯನ್ನೂ ಹೇರಿಕೆ ಮಾಡುವುದಿಲ್ಲ’ ಎಂದೂ ಸಚಿವಾಲಯ ತಿಳಿಸಿದೆ. ‘ಎನ್‌ಇಪಿ–2020ರ ಅನುಷ್ಠಾನಕ್ಕೆ ಪ್ರಕ್ರಿಯೆ ಆರಂಭಿಸುವಂತೆ ಕೋರಿ ಎಲ್ಲ ರಾಜ್ಯಗಳಿಗೆ, ಸಿಬಿಎಸ್‌ಇ, ಎನ್‌ಸಿಇಆರ್‌ಟಿಗೆ ಸೆ.10ರಂದು ಪತ್ರ ರವಾನಿಸಲಾಗಿದೆ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಮಾತೃಭಾಷೆಯಲ್ಲೇ ಶಿಕ್ಷಣದ ಮಹತ್ವವನ್ನು ತಿಳಿಸಿದ ಯುನೆಸ್ಕೊದ ಮಾರ್ಗಸೂಚಿಗಳನ್ನೂ’ ಸಚಿವಾಲಯ ಉಲ್ಲೇಖಿಸಿದೆ.

‘ಆಂಧ್ರಪ್ರದೇಶ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2010ರಲ್ಲಿ ಮಗುವಿನ ಮಾತೃಭಾಷೆಯಲ್ಲೇ ಶಿಕ್ಷಣದ ಮಾಧ್ಯಮವಿರಬೇಕು ಎಂದು ಉಲ್ಲೇಖಿಸಲಾಗಿದೆ’ ಎಂದು ಸಚಿವಾಲಯ ತಿಳಿಸಿದೆ.

ಆಂಧ್ರ ಪ್ರದೇಶ ಸರ್ಕಾರದ ಈ ನಿರ್ಧಾರದ ವಿರುದ್ಧ ಆಂಧ್ರ ಪ್ರದೇಶ ವಿಧಾನಸಭೆ ಮಾಜಿ ಉಪಸಭಾಧ್ಯಕ್ಷ ಎಂ.ಬುದ್ಧ ಪ್ರಸಾದ್‌ ಸೇರಿದಂತೆ ಹಲವು ಖ್ಯಾತ ವಿದ್ವಾಂಸರು, ಸಾಹಿತಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT