ಗುರುವಾರ , ಅಕ್ಟೋಬರ್ 29, 2020
19 °C

ಅಸಂಘಟಿತ ವಲಯ ನಾಶಗೊಳಿಸಿ, ಜನರನ್ನು ಗುಲಾಮರನ್ನಾಗಿಸುವ ಪ್ರಯತ್ನ: ರಾಹುಲ್ ಗಾಂಧಿ

ಎಎನ್ಐ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ನವದೆಹಲಿ: ಕಳೆದ 6 ವರ್ಷಗಳಿಂದಲೂ ಎನ್‌ಡಿಎ ಸರ್ಕಾರವು ಅನೌಪಚಾರಿಕ ವಲಯದ ಮೇಲೆ ದಾಳಿ ನಡೆಸುತ್ತಿದೆ ಎಂದು ದೂರಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ನೋಟು ಅಮಾನ್ಯೀಕರಣ, 'ತಪ್ಪು' ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ಲಾಕ್‌ಡೌನ್‌ನಿಂದಾಗಿ ಈ ವಲಯವು ನಾಶವಾಗಿದೆ ಎಂದು ಆರೋಪಿಸಿದ್ದಾರೆ.

ಇಂದು ಬಿಡುಗಡೆಯಾದ 'ಮೋದಿ ಸರ್ಕಾರ ಭಾರತೀಯ ಆರ್ಥಿಕತೆಯನ್ನು ಹೇಗೆ ನಾಶಪಡಿಸಿದೆ' ಎಂಬ ಹೊಸ ಸರಣಿಯ ಮೊದಲ ವಿಡಿಯೊದಲ್ಲಿ ಅವರು ಹೀಗೆ ತಿಳಿಸಿದ್ದಾರೆ. 

ದೇಶ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದ ದುರದೃಷ್ಟಕರ ಸತ್ಯವು ಇಂದು ದೃಢವಾಗಿದೆ: 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ಆರ್ಥಿಕತೆಯು ಭಾರಿ ಆರ್ಥಿಕ ಹಿಂಜರಿಕೆನ್ನು ಎದುರಿಸುತ್ತಿದೆ. ಇದಕ್ಕಾಗಿ 'ಅಸತ್ಯಾಗ್ರಹಿ' ದೇವರನ್ನು ದೂಷಿಸುತ್ತಿದ್ದಾರೆ. ಸತ್ಯವನ್ನು ಕಂಡುಹಿಡಿಯಲು ಈ ವಿಡಿಯೊ ನೋಡಿ ಎಂದು ಟ್ವೀಟ್ ಮಾಡಿದ್ದಾರೆ. 

ಕೋವಿಡ್-19 ಸಾಂಕ್ರಾಮಿಕ ರೋಗವು 'ದೇವರ ಆಟ' ಎಂದು ಹೇಳಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ರಾಹುಲ್ ಗಾಂಧಿಯವರು, 'ಅಸತ್ಯಾಗ್ರಹಿ' ಎಂಬ ಪದವನ್ನು ಉಲ್ಲೇಖಿಸಿದ್ದಾರೆ.

'ಕಳೆದ ಆರು ವರ್ಷಗಳಿಂದಲೂ ಬಿಜೆಪಿ ಸರ್ಕಾರವು ಅನೌಪಚಾರಿಕ ವಲಯದ ಮೇಲೆ ದಾಳಿ ಮಾಡಿದೆ. ನಿಮ್ಮನ್ನು ಗುಲಾಮರನ್ನಾಗಿ ಮಾಡುವ ಪ್ರಯತ್ನವಿದು... ನಾನು ಇದೀಗ ನಿಮಗೆ ಮೂರು ದೊಡ್ಡ ಉದಾಹರಣೆಗಳನ್ನು ನೀಡುತ್ತಿದ್ದೇನೆ- ನೋಟು ಅಮಾನ್ಯೀಕರಣ, ತಪ್ಪಾದ ಜಿಎಸ್‌ಟಿ ಮತ್ತು ಲಾಕ್‌ಡೌನ್. ಲಾಕ್‌ಡೌನ್ ಘೋಷಣೆ ಯೋಜಿತವಲ್ಲ, ಇದು ಕೊನೆಯ ಗಳಿಗೆಯಲ್ಲಿ ಘೋಷಿಸಿದ್ದು ಎಂದು ಭಾವಿಸಬೇಡಿ. ಅನೌಪಚಾರಿಕ ವಲಯವನ್ನು ನಾಶಪಡಿಸುವುದೇ ಈ ಮೂರು ನಿರ್ಧಾರಗಳ ಹಿಂದಿನ ಗುರಿಯಾಗಿತ್ತು' ಎಂದು ವಿಡಿಯೊದಲ್ಲಿ ತಿಳಿಸಿದ್ದಾರೆ.

ದೇಶದ ಅನೌಪಚಾರಿಕ ವಲಯವು ಪ್ರಬಲವಾಗಿರುವ ತನಕ ಯಾವುದೇ ಆರ್ಥಿಕ ಚಂಡಮಾರುತವು ಕೂಡ ಭಾರತವನ್ನು ಮುಟ್ಟಲು ಸಾಧ್ಯವಿಲ್ಲ ಎಂದಿರುವ ಅವರು, ಅನೌಪಚಾರಿಕ ವಲಯ ಬಹಳಷ್ಟು ಹಣವನ್ನು ಹೊಂದಿದೆ. ಆದರೆ ಸರ್ಕಾರ ಇದನ್ನು ಮುಟ್ಟಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಸರ್ಕಾರವು ಈ ವಲಯವನ್ನು ನಾಶಪಡಿಸಲು ಮತ್ತು ಈ ಹಣವನ್ನು ಅವರಿಂದ ಸುಲಿಗೆ ಮಾಡಲು ಬಯಸುತ್ತಿದೆ ಎಂದು ದೂರಿದ್ದಾರೆ.

ಅನೌಪಚಾರಿಕ ವಲಯದ ಮೇಲಿನ ಈ ದಾಳಿಯ ಪರಿಣಾಮಗಳು ಶೀಘ್ರದಲ್ಲೇ ಕಂಡುಬರುತ್ತವೆ. ಈ ಪರಿಣಾಮದ ಭಾಗವಾಗಿಯೇ ಅನೌಪಚಾರಿಕ ವಲಯವು ಶೇ 90 ರಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಒಮ್ಮೆ ಅನೌಪಚಾರಿಕ ವಲಯವು ನಾಶವಾದ ನಂತರ ಭಾರತವು ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

ಈ ದೇಶವನ್ನು ನಡೆಸುವವರು ನೀವೇ. ನೀವೇ ನಮ್ಮನ್ನು ಮುಂದೆ ಕರೆದೊಯ್ಯಿರಿ ಮತ್ತು ನಿಮ್ಮ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ. ನಿಮ್ಮನ್ನು ಮೋಸ ಮಾಡಲಾಗುತ್ತಿದೆ ಮತ್ತು ನಿಮ್ಮನ್ನು ಗುಲಾಮರನ್ನಾಗಿ ಮಾಡುವ ಪ್ರಯತ್ನದ ಭಾಗವಿದು. ಈ ದಾಳಿಯನ್ನು ನಾವು ಅರ್ಥಮಾಡಿಕೊಳ್ಳಬೇಕು ಮತ್ತು ಇದರ ವಿರುದ್ಧ ಹೋರಾಡಲು ಇಡೀ ದೇಶವೇ ಒಂದಾಗಬೇಕು ಎಂದಿದ್ದಾರೆ.

2008ರಲ್ಲಿ ಉಂಟಾಗಿದ್ದ ಆರ್ಥಿಕ ಹಿಂಜರಿತವು ಇಡೀ ಜಗತ್ತಿಗೇ ಅಪ್ಪಳಿಸಿತ್ತು. ಅಮೆರಿಕ, ಜಪಾನ್, ಚೀನಾ ಸೇರಿ ಇಡೀ ಪ್ರಪಂಚದಾದ್ಯಂತ ಪರಿಣಾಮ ಬೀರಿತು. ಯುಎಸ್ ಬ್ಯಾಂಕುಗಳು, ನಿಗಮಗಳು ಕುಸಿತ ಕಂಡವು ಮತ್ತು ಕಂಪನಿಗಳು ಮುಚ್ಚಲ್ಪಟ್ಟವು. ಯೂರೋಪಿನಲ್ಲಿಯೂ ಬ್ಯಾಂಕುಗಳು ಕುಸಿತ ಕಂಡವು. ಆದರೆ ಭಾರತಕ್ಕೆ ಮಾತ್ರ ಇದು ಪರಿಣಾಮ ಬೀರಲಿಲ್ಲ. ಏಕೆಂದರೆ ಆ ಸಮಯದಲ್ಲಿ ಭಾರತದಲ್ಲಿ ಯುಪಿಎ ಸರ್ಕಾರವನ್ನು ಹೊಂದಿತ್ತು ಎಂದರು.

ಯುಪಿಎ ಸರ್ಕಾರದ ಅವಧಿಯಲ್ಲಿ ನಾನು ಸ್ವಲ್ಪ ಆಶ್ಚರ್ಯದಿಂದಲೇ ಪ್ರಧಾನಿ ಅವರ ಬಳಿಗೆ ಹೋದೆ, ಡಾ.ಮನಮೋಹನ್ ಸಿಂಗ್ ಅವರನ್ನು ಕೇಳಿದೆ, ನೀವು ಈ ವಿಷಯಗಳನ್ನು ಅರ್ಥಮಾಡಿಕೊಂಡಿದ್ದೀರಾ? ಇಡೀ ಜಗತ್ತಿನಲ್ಲಿ ಆರ್ಥಿಕ ನಷ್ಟ ಸಂಭವಿಸಿದೆ ಆದರೆ ಭಾರತದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕಾರಣವೇನು? ಎಂದು ಕೇಳಿದೆ.

ಅದಕ್ಕವರು, 'ಭಾರತದ ಆರ್ಥಿಕತೆಯನ್ನು ರಾಹುಲ್ ಅರ್ಥಮಾಡಿಕೊಳ್ಳಬೇಕೆಂದರೆ, ಭಾರತದಲ್ಲಿ ಎರಡು ಆರ್ಥಿಕತೆಗಳಿವೆ ಎಂಬುದನ್ನು ಮೊದಲು ಅವರು ಅರ್ಥಮಾಡಿಕೊಳ್ಳಬೇಕು. ಮೊದಲನೆಯದು ಅಸಂಘಟಿತ ಆರ್ಥಿಕತೆ ಮತ್ತು ಎರಡನೆಯದು ಸಂಘಟಿತ ಆರ್ಥಿಕತೆ' ಎಂದು ಮನಮೋಹನ್ ಸಿಂಗ್ ಜಿ ಹೇಳಿದರು.

ಸಂಘಟಿತ ವಲಯಗಳ ದೊಡ್ಡ ಕಂಪನಿಗಳು ನಿಮಗೆ ತಿಳಿದಿವೆ. ಆದರೆ ರೈತರು, ಕಾರ್ಮಿಕರು, ಸಣ್ಣ ಅಂಗಡಿಗಳ ವ್ಯಾಪಾರಸ್ತರು, ಮಧ್ಯಮ ಗಾತ್ರದ ಕಂಪನಿಗಳನ್ನು ಅಸಂಘಟಿತ ವಲಯ ಹೊಂದಿದೆ. ಔಪಚಾರಿಕ ವಲಯದ ದೊಡ್ಡ ಕಂಪನಿಗಳು ನಿಮಗೆ ತಿಳಿದಿವೆ. ಅನೌಪಚಾರಿಕ ವಲಯವು ರೈತರು, ಕಾರ್ಮಿಕರು, ಎಂಎಸ್‌ಎಂಇಗಳನ್ನು ಒಳಗೊಂಡಿದೆ. ಭಾರತದ ಅನೌಪಚಾರಿಕ ವಲಯವು ಪ್ರಬಲವಾಗಿರುವವರೆಗೂ, ಯಾವುದೇ ಆರ್ಥಿಕ ಹೊಡೆತವು ಭಾರತವನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಸಿಂಗ್ ಹೇಳಿದ್ದರು ಎಂದು ರಾಹುಲ್ ತಿಳಿಸಿದ್ದಾರೆ.

ಸರ್ಕಾರವನ್ನು ನಡೆಸಲು ಪ್ರಧಾನ ಮಂತ್ರಿಗೆ ಮಾಧ್ಯಮ ಮತ್ತು ಪ್ರಚಾರದ ಅಗತ್ಯವಿದೆ. ಈ ಮಾಧ್ಯಮ ನಿರ್ವಹಣೆ ಮತ್ತು ಪ್ರಚಾರವನ್ನು 15 ರಿಂದ 20 ಜನರು ಮಾಡುತ್ತಾರೆ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು