ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2021ರ ಜುಲೈ ವೇಳೆಗೆ 25 ಕೋಟಿ ಜನರಿಗೆ ‘ಕೋವಿಡ್–19’ ಲಸಿಕೆ ಗುರಿ: ಹರ್ಷವರ್ಧನ್

Last Updated 4 ಅಕ್ಟೋಬರ್ 2020, 19:46 IST
ಅಕ್ಷರ ಗಾತ್ರ

ನವದೆಹಲಿ:ಕೋವಿಡ್–19 ಚಿಕಿತ್ಸೆಗಾಗಿ 2021ರ ಜುಲೈ ವೇಳೆಗೆ ಅಂದಾಜು 40ರಿಂದ 50 ಕೋಟಿ ಡೋಸ್‌ ಲಸಿಕೆ ಲಭ್ಯವಿರಲಿದ್ದು, ಇದನ್ನು 20ರಿಂದ 25 ಕೋಟಿ ಜನರಿಗೆ ನೀಡಬಹುದಾಗಿದೆ ಎಂದು ಕೇಂದ್ರ ಸರ್ಕಾರ ಅಂದಾಜು ಮಾಡಿದೆ.

ಅಲ್ಲದೆ, ಕೋವಿಡ್–19 ಲಸಿಕೆಯನ್ನು ಆದ್ಯತೆಯ ಮೇರೆಗೆ ನೀಡಬೇಕಾಗಿರುವ ಜನರ ಪಟ್ಟಿಯನ್ನು ಅಕ್ಟೋಬರ್ ಅಂತ್ಯದೊಳಗೇ ಸಲ್ಲಿಸಬೇಕು ಎಂದೂ ರಾಜ್ಯಗಳಿಗೆ ಸೂಚನೆ ನೀಡಿದೆ.

‘ಕೋವಿಡ್‌–19 ನಿರ್ವಹಣೆಯಲ್ಲಿ ನಿರತರಾಗಿರುವ ಆರೋಗ್ಯ ಸೇವೆಯ ಕಾರ್ಯಕರ್ತರುಗಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತದೆ. ಲಸಿಕೆಯನ್ನು ಎಲ್ಲ ಆಯಾಮಗಳಿಂದಲೂ ಉನ್ನತ ಮಟ್ಟದ ಪರಿಣಿತರ ಸಮೂಹ ಪರಿಶೀಲಿಸಲಿದೆ. ರಾಜ್ಯಗಳು ನೀಡಬೇಕಾಗಿರುವ ಜನರ ಪಟ್ಟಿಯ ನಮೂನೆಯನ್ನು ಕೇಂದ್ರ ರೂಪಿಸುತ್ತಿದೆ’ ಎಂದುಆರೋಗ್ಯ ಸಚಿವ ಹರ್ಷವರ್ಧನ್ ಭಾನುವಾರ ತಿಳಿಸಿದರು.

‘ಸಂಡೇ ಸಂವಾದ’ ಕಾರ್ಯಕ್ರಮದಡಿ ಸಾಮಾಜಿಕ ಜಾಲತಾಣಗಳ ಬೆಂಬಲಿಗರ ಜೊತೆಗೆ ನಡೆದ ಚರ್ಚೆಯಲ್ಲಿ ಅವರು ಈ ಮಾಹಿತಿ ನೀಡಿದರು.

‘ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವವರಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯದ ವೈದ್ಯರು, ನರ್ಸ್‌ಗಳು, ಅರೆವೈದ್ಯಕೀಯ ಸಿಬ್ಬಂದಿ, ಸ್ವಚ್ಛತಾ ಕಾರ್ಮಿಕರು, ಆಶಾ ಕಾರ್ಯಕರ್ತರು, ಕಣ್ಗಾವಲು ಅಧಿಕಾರಿಗಳು ಸೇರಿರುತ್ತಾರೆ’ ಎಂದು ತಿಳಿಸಿದರು.

‘ಪಟ್ಟಿ ತಯಾರಿಸುವ ಪ್ರಕ್ರಿಯೆ ಈ ತಿಂಗಳ ಅಂತ್ಯದೊಳಗೆ ಮುಗಿಯಲಿದೆ. ಅಲ್ಲದೆ, ಬ್ಲಾಕ್ ಮಟ್ಟದಲ್ಲಿ ಲಭ್ಯವಿರುವ ಮೂಲಸೌಲಭ್ಯಗಳ ಬಗ್ಗೆಯೂ ಮಾಹಿತಿ ಒದಗಿಸಬೇಕು ಎಂದು ರಾಜ್ಯಗಳಿಗೆ ತಿಳಿಸಲಾಗಿದೆ’ ಎಂದು ಹೇಳಿದರು.

ಲಸಿಕೆಯನ್ನು ನೀಡುವ ಮೊದಲು ರೋಗ ನಿರೋಧಕ ಶಕ್ತಿ ಕುರಿತ ಅಂಕಿ ಅಂಶಗಳನ್ನೂ ಕೇಂದ್ರವು ಗಮನಿಸಲಿದೆ. ಲಸಿಕೆಯು ನ್ಯಾಯಸಮ್ಮತವಾಗಿ, ಪಾರದರ್ಶಕವಾಗಿ ವಿತರಿಸಲು ಆಗುವಂತೆ ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಬ್ಬರಿಗೂ ಲಸಿಕೆ ಸಿಗಬೇಕು ಎಂಬುದೇ ಸರ್ಕಾರದ ಪ್ರಥಮ ಆದ್ಯತೆ ಎಂದು ವಿವರಿಸಿದರು.

ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪೌಲ್ ಅವರ ನೇತೃತ್ವದಲ್ಲಿ ಇಡೀ ಪ್ರಕ್ರಿಯೆ ನಡೆಯುತ್ತಿದೆ. ಲಸಿಕೆ ಖರೀದಿಸುವ ಕಾರ್ಯ ಕೇಂದ್ರೀಕೃತವಾಗಿ ನಡೆಯುತ್ತಿದೆ. ಸಕಾಲದಲ್ಲಿ ನಿಗದಿತ ಗುರಿ ತಲುಪುವಂತೆ ಸಮಯ ಪರಿಪಾಲನೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

‘ಮಾತುಕತೆ ನಡೆದಿಲ್ಲ’

ಲಸಿಕೆಯ ಮೂಲದ ಬಗ್ಗೆ ಸಚಿವ ಹರ್ಷವರ್ಧನ್‌ ಅವರು ಸಂವಾದದಲ್ಲಿ ಯಾವುದೇ ಸ್ಪಷ್ಟನೆ ನೀಡಲಿಲ್ಲ. ‘ಲಸಿಕೆ ತಯಾರಿಸುವ ಯಾವ ಸಂಸ್ಥೆಯೂ ಸರ್ಕಾರವನ್ನು ಸಂಪರ್ಕಿಸಿ ಮಾತುಕತೆ ನಡೆಸಿಲ್ಲ. ಆದ್ದರಿಂದ ಈ ವಿಚಾರವಾಗಿ ಈಗಲೇ ಪ್ರತಿಕ್ರಿಯೆ ನೀಡುವುದು ಸರಿಯಲ್ಲ’ ಎಂದು ಸರ್ಕಾರದ ಮೂಲಗಳು ಹೇಳಿವೆ. ಕೋವಿಡ್‌ ಲಸಿಕೆ ಖರೀದಿಗೆ ಬೇಕಾದಷ್ಟು ಹಣ ಇದೆಯೇ ಎಂಬ ಪ್ರಶ್ನೆಗೆ, ‘ಸರ್ಕಾರವು ಈಚೆಗೆ ವಿಶ್ವಬ್ಯಾಂಕ್‌, ಏಷ್ಯನ್‌ ಇನ್‌ಫ್ರಾಸ್ಟ್ರಕ್ಚರ್‌ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕ್‌ ಹಾಗೂ ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ಗಳಿಂದ ಒಟ್ಟು ₹15,000 ಕೋಟಿ ಸಾಲ ಪಡೆದಿದೆ ಎಂದು ಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT