ಭಾನುವಾರ, ಜೂನ್ 13, 2021
21 °C

ರೈತರ ಕಲ್ಯಾಣಕ್ಕಾಗಿ ಕೇಂದ್ರದಿಂದ ಸಮಗ್ರ ಕ್ರಮ: ಜೆ.ಪಿ. ನಡ್ಡಾ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರವು ಸಮಗ್ರ ಕ್ರಮಗಳನ್ನು ಕೈಗೊಂಡಿದೆ. ಆದಾಗ್ಯೂ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ವಿಪಕ್ಷಗಳು ಅವರ‌ನ್ನು ದಾರಿ ತಪ್ಪಿಸುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕಿಡಿ ಕಾರಿದ್ದಾರೆ.

ಕೋವಿಡ್‌-19 ಮತ್ತು ಅದರ ಪರಿಣಾಮವನ್ನು ನಿಭಾಯಿಸುವುದಕ್ಕೆ ಸಂಬಂಧಿಸಿದಂತೆ ಪಕ್ಷದ ಕಿಸಾನ್ ಮೋರ್ಚಾದ ಪ್ರತಿನಿಧಿಗಳು ನಡೆಸುತ್ತಿರುವ ʼಮೇರಾ ಬೂತ್‌ ಕೊರೊನಾ ಮುಕ್ತ್‌ʼ ಅಭಿಯಾನವನ್ನುದ್ದೇಶಿಸಿ ನಡ್ಡಾ ಮಾತನಾಡಿದ್ದಾರೆ. ನರೇಂದ್ರ ಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ರೈತರ ಕಲ್ಯಾಣಕ್ಕಾಗಿ ಸಮರ್ಪಿತವಾಗಿದೆ. ರೈತರ ಕಲ್ಯಾಣಕ್ಕಾಗಿ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ʼಹಲವು ರಾಜಕೀಯ ಪಕ್ಷಗಳು ರೈತರ ಬಗ್ಗೆ ಮಾತನಾಡುತ್ತಿವೆ. ಆದರೆ, ಅವರಿಗಾಗಿ ಏನನ್ನೂ ಮಾಡಿಲ್ಲ. ಕಿಸಾನ್‌ ಸಮ್ಮಾನ್‌, ಕಿಸಾನ್‌ ಕ್ರೆಡಿಟ್‌ ಕಾರ್ಡ್‌, ಮಣ್ಣಿನ ಫಲವತ್ತತೆ ಕಾರ್ಡ್, ಬೇವು ಲೇಪಿತ ಯೂರಿಯಾ ಮುಂತಾದ ಯೋಜನೆಗಳನ್ನು ಕೇಂದ್ರ ಸರ್ಕಾರವು ರೈತರಿಗಾಗಿ ಜಾರಿಗೊಳಿಸಿದೆʼ ಎಂದಿದ್ದಾರೆ. ಮುಂದುವರಿದು, ಸರ್ಕಾರದ ಸಂಸ್ಥೆಗಳು ಕನಿಷ್ಠ ಬೆಂಬಲ ಬೆಲೆಗೆ ಬೆಳೆ ಖರೀದಿಸುವುದನ್ನು ಮುಂದುವರಿಸುತ್ತವೆ. ಪಂಜಾಬ್‌ನಲ್ಲಿಯೂ ಗಣನೀಯ ಪ್ರಮಾಣದ ಖರೀದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ʼನಮ್ಮ ವಿರೋಧ ಪಕ್ಷಗಳು ಎಂಎಸ್‌ಪಿ ವಿಚಾರವಾಗಿ ಅಳುತ್ತಿವೆ. ಪ್ರಧಾನಿ ಮೋದಿ ಅವರು ಎಂಎಸ್‌ಪಿ ಮುಂದುವರಿಯುತ್ತದೆ ಎಂದು ಮತ್ತೆ ಮತ್ತೆ ಹೇಳಿದ್ದಾರೆ. ಇದೀಗ ಮಧ್ಯವರ್ತಿಗಳು ರೈತರಿಗೆ ಮೋಸ ಮಾಡದಂತೆ ಕೇಂದ್ರ ಸರ್ಕಾರವು ಖಾತ್ರಿಪಡಿಸುತ್ತಿದೆʼ ಎಂದು ಸ್ಪಷ್ಟಪಡಿಸಿದ್ದಾರೆ.

ರೈತರ ಆದಾಯ ಹೆಚ್ಚಿಸುವ ಸಲುವಾಗಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಅಡಿಯಲ್ಲಿ ಸುಮಾರು 9.5 ಕೋಟಿ ಫಲಾನುಭವಿಗಳಿಗೆ ಮೇ  14ರಂದು ರೂ. 20,000 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು