ಬುಧವಾರ, ಮಾರ್ಚ್ 29, 2023
32 °C

'ಝೈಕೋವ್‌-ಡಿ' ಲಸಿಕೆ: ಒಂದು ಕೋಟಿ ಡೋಸ್ ಖರೀದಿಗೆ ಕೇಂದ್ರದ ಕ್ರಮ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 'ಝೈಡಸ್ ಕ್ಯಾಡಿಲಾ ಕಂಪನಿಯು ಅಭಿವೃದ್ಧಿಪಡಿಸಿರುವ ಕೋವಿಡ್‌ ಲಸಿಕೆ 'ಝೈಕೋವ್‌-ಡಿ'ಯ ಒಂದು ಕೋಟಿ ಡೋಸ್ ಖರೀದಿಗೆ ಕೇಂದ್ರ ಸರ್ಕಾರ ಆದೇಶಿಸಿದೆ. ಈ ಲಸಿಕೆಯನ್ನು ಇದೇ ತಿಂಗಳು ಸಾರ್ವಜನಿಕವಾಗಿ ನೀಡಲು ಲಸಿಕೆ ಅಭಿಯಾನ ಪಟ್ಟಿಗೆ ಸೇರುವ ಸಂಭವವಿದೆ.

ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ ವಿಶ್ವದ ಮೊದಲ ಡಿಎನ್‌ಎ ಆಧರಿತ ಈ ಕೋವಿಡ್‌ ಲಸಿಕೆಯನ್ನು ಮೊದಲಿಗೆ ವಯಸ್ಕರಿಗೆ ಲಸಿಕೆ ಅಭಿಯಾನದಡಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ವಯಸ್ಕರು ಮತ್ತು 12 ವರ್ಷ ಮೇಲ್ಪಟ್ಟ ಮಕ್ಕಳಲ್ಲಿ ತುರ್ತು ಸಂದರ್ಭದಲ್ಲಿ ಬಳಸಲು ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಜಿಸಿಐ) ಈಚೆಗೆ ಅನುಮೋದನೆ ನೀಡಿತ್ತು.

ಕೇಂದ್ರ ಈಗಾಗಲೇ ಝೈಡಸ್‌ ಕ್ಯಾಡಿಲಾದಿಂದ ಲಸಿಕೆ ಖರೀದಿಗೆ ಆದೇಶ ನೀಡಿದೆ. ಪ್ರತಿ ಡೋಸ್‌ಗೆ ತೆರಿಗೆ ಹೊರತುಪಡಿಸಿ ₹ 358 ಆಗಿದ್ದು, ಇದರಲ್ಲಿ ಲಸಿಕೆ ನೀಡಲು ಬಯಸುವ ನೋವು ರಹಿತವಾದ, ಬಳಸಿ ಬಿಸಾಡಬಹುದಾದ ಜೆಟ್‌ ಅಪ್ಲಿಕೇಟರ್‌ ಕೂಡಾ ಸೇರಿದೆ ಎಂದು ಮೂಲಗಳು ತಿಳಿಸಿವೆ.

ಉತ್ಪಾದನೆ ಪ್ರಮಾಣ ಸೀಮಿತವಾಗಿರುವ ಕಾರಣ ಮೊದಲು ಈ ಲಸಿಕೆಯನ್ನು ವಯಸ್ಕರಿಗೆ ನೀಡಲಾಗುತ್ತದೆ. ಝೈಡಸ್‌ ಕ್ಯಾಡಿಲಾ ಸಂಸ್ಥೆ ಮಾಸಿಕ ಒಂದು ಕೋಟಿ ಡೋಸ್‌ ಲಸಿಕೆ ಒದಗಿಸುವ ಸಾಮರ್ಥ್ಯ ಹೊಂದಿದೆ. ಇದನ್ನು ಸಚಿವಾಲಯಕ್ಕೂ ಮನವರಿಕೆ ಮಾಡಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸೂಜಿ ರಹಿತ ಜೆಟ್‌ ಅಪ್ಲಿಕೇಟರ್ ಬಳಸಿ ಲಸಿಕೆ ನೀಡುವ ಕ್ರಮ ಕುರಿತು ಮೊದಲು ಮುಂಚೂಣಿ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತದೆ. ಈ ಲಸಿಕೆಯ ಮೂರು ಡೋಸ್ ಅನ್ನು 28 ದಿನಗಳ ಅಂತರದಲ್ಲಿ ನೀಡಬೇಕಿದೆ.

ಈ ಮಧ್ಯೆ, ಮಕ್ಕಳಿಗೆ ಲಸಿಕೆ ನೀಡಲು ಸಮಗ್ರ ಕಾರ್ಯಕ್ರಮವನ್ನು ರಾಷ್ಟ್ರೀಯ ತಾಂತ್ರಿಕ ಸಲಹಾ ಮಂಡಳಿ ರೂಪಿಸುತ್ತಿದೆ. ಭಾರತ್‌ ಬಯೊಟೆಕ್‌ನ ಕೋವ್ಯಾಕ್ಸಿನ್ ಅನ್ನು 2 ರಿಂದ 18 ವರ್ಷದವವರಿಗೆ ನೀಡಲು ತುರ್ತು ಬಳಕೆಗೆ ಅನುಮೋದನೆ ನೀಡುವ ಕುರಿತು ಪರಿಣತರ ಅಭಿಪ್ರಾಯ ನಿರೀಕ್ಷಿಸಲಾಗಿದೆ.

ಕೋವಿಡ್-19 ಕುರಿತ ವಿಷಯ ಪರಿಣತರ ಸಮಿತಿಯು ಅಕ್ಟೋಬರ್‌ 12ರ ಸಭೆಯಲ್ಲಿ 2–18ವರ್ಷದವರಿಗೆ ಲಸಿಕೆ ನೀಡುವ ಬಗ್ಗೆ ಅನುಮೋದನೆ ನೀಡುವಂತೆ ಶಿಫಾರಸು ಮಾಡಿತ್ತು. ಪ್ರಸ್ತುತ, 18 ವರ್ಷ ಮೀರಿದವರು ಲಸಿಕೆ ಪಡೆಯಲು ಅರ್ಹರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು