ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಮಂಜೂರಾತಿಯ ರಾಜ್ಯಗಳ ಅಧಿಕಾರ ಮೊಟಕು: ಗಣಿ ನಿಧಿಗೆ ಕೇಂದ್ರದ ಕಣ್ಣು

Last Updated 29 ಆಗಸ್ಟ್ 2021, 20:58 IST
ಅಕ್ಷರ ಗಾತ್ರ

ನವದೆಹಲಿ:ಜಿಲ್ಲಾ ಖನಿಜ ನಿಧಿಯಿಂದ (ಡಿಎಂಎಫ್‌) ಹಣ ಮಂಜೂರು ಮಾಡುವ ಅಥವಾ ಈ ನಿಧಿಯಿಂದ ಯಾವುದೇ ವೆಚ್ಚಕ್ಕೆ ಅನುಮೋದನೆ ನೀಡುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ರದ್ದುಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಗಣಿ ಗುತ್ತಿಗೆದಾರರಿಂದ ಪಡೆಯುವ ಕಡ್ಡಾಯ ದೇಣಿಗೆಯ ಮೂಲಕ ಈ ನಿಧಿ ರೂಪುಗೊಳ್ಳುತ್ತದೆ. ‘ಈ ನಿಧಿಯ ಎಲ್ಲ ಹಕ್ಕುಗಳನ್ನು ಕೇಂದ್ರ ಸರ್ಕಾರವು ತನ್ನ ವಶಕ್ಕೆ ಪಡೆಯುವುದು ರಾಜ್ಯಗಳ ಹಕ್ಕುಗಳ ಉಲ್ಲಂಘನೆ. ಇದು ದೇಶದ ಒಕ್ಕೂಟ ವ್ಯವಸ್ಥೆಯನ್ನೇ ಬಾಧಿಸಲಿದೆ’ ಎಂದು ವಿರೋಧ ಪಕ್ಷಗಳು ಆಕ್ಷೇಪಿಸುವ ಸಾಧ್ಯತೆ ಇದೆ. ಹಾಗಾಗಿ, ಕೇಂದ್ರದ ನಿರ್ಧಾರವು ರಾಜಕೀಯ ಬಿರುಗಾಳಿ ಎಬ್ಬಿಸಬಹುದು ಎನ್ನಲಾಗಿದೆ.

ಆದರೆ, ಖನಿಜ ಸಚಿವಾಲಯವು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಈ ಹಣವನ್ನು ಯಾವ ಉದ್ದೇಶಕ್ಕಾಗಿ ಬಳಸಬೇಕಿತ್ತೋ ಅದರ ಬದಲಿಗೆ ಬೇರೆ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ ಎಂದು ದೂರುಗಳು ಬಂದಿವೆ. ಹಾಗಾಗಿ, ಈ ಹೆಜ್ಜೆ ಇಡುವುದು ಕೇಂದ್ರ ಸರ್ಕಾರಕ್ಕೆ ಅಗತ್ಯವಾಗಿತ್ತು ಎಂದು ಹೇಳಿದೆ.

ಜಿಲ್ಲಾ ಖನಿಜ ನಿಧಿ ಆರಂಭವಾದ 2015–16ರಿಂದ ಇಲ್ಲಿಯವರೆಗೆ ₹ 50,499 ಕೋಟಿ ಹಣ ಸಂಗ್ರಹವಾಗಿದೆ. ಆದರೆ, ಆ ಪೈಕಿ ₹ 47,288 ಕೋಟಿ ಮೊತ್ತ ಬಿಡುಗಡೆಯಾಗಿದೆ. ಅದರಲ್ಲಿ ₹24,499 ಕೋಟಿ ಮೊತ್ತವು ಬೇರೆ ಯೋಜನೆಗಳಿಗೆ ಖರ್ಚಾಗಿದೆ ಎಂದು ಖನಿಜ ಸಚಿವಾಲಯ ತಿಳಿಸಿದೆ.

ಒಡಿಶಾದಲ್ಲಿ ಗರಿಷ್ಠ ಪ್ರಮಾಣದಲ್ಲಿ ಡಿಎಂಎಫ್‌ ಸಂಗ್ರಹವಾಗಿದೆ (₹13,728 ಕೋಟಿ). ಛತ್ತೀಸಗಡದಲ್ಲಿ ₹ 7,151 ಕೋಟಿ, ಜಾರ್ಖಂಡ್‌ನಲ್ಲಿ ₹ 6,974 ಕೋಟಿ ನಿಧಿ ಸಂಗ್ರಹವಾಗಿದೆ. ಕರ್ನಾಟಕದಲ್ಲಿ ಒಟ್ಟು 2,712 ಕೋಟಿ ನಿಧಿ ಸಂಗ್ರಹವಾಗಿದೆ. ಇದುವರೆಗೆ ₹ 944 ಕೋಟಿ ಖರ್ಚಾಗಿದ್ದು, ಬೇರೆ ಯೋಜನೆಗಳಿಗೆ ಬಳಕೆಯಾಗಿದೆ ಎಂದು ಹೇಳಿದೆ.

ಸಚಿವಾಲಯವುಜುಲೈ 12ರಂದು ಹೊರಡಿಸಿದ ಆದೇಶದಲ್ಲಿ, ‘ನಿಧಿಯನ್ನು ಯಾವುದೇ ರೂಪದಲ್ಲಿ ರಾಜ್ಯದ ಬೊಕ್ಕಸಕ್ಕೆ ವರ್ಗಾಯಿಸುವಂತಿಲ್ಲ ಅಥವಾ ಮುಖ್ಯಮಂತ್ರಿಗಳ ಪರಿಹಾರ ನಿಧಿಯಾಗಲೀ ಇಲ್ಲವೇ ಇತರ ಯೋಜನೆಗಳಿಗಾಗಲೀ ನೀಡುವಂತಿಲ್ಲ’ ಎಂದು ಹೇಳಿತ್ತು.

ರಾಜ್ಯ ಸರ್ಕಾರವಾಗಲಿ ಅಥವಾ ರಾಜ್ಯಮಟ್ಟದ ಸಂಸ್ಥೆಯಾಗಲಿ, ಈ ನಿಧಿಯ ಬಳಕೆಗೆ ಅನುಮತಿ ನೀಡುವಂತಿಲ್ಲ ಎಂದೂ ಹೇಳಿತ್ತು.

ಆದರೆ, ಈ ನಿಧಿಯ ಉದ್ದೇಶವನ್ನೇ ಕೈಬಿಟ್ಟು ರಾಜ್ಯದ ಅನ್ಯ ಯೋಜನೆಗಳಿಗೆ ಹಣವು ವರ್ಗಾವಣೆಯಾಗುತ್ತಿರುವ ನಿದರ್ಶನಗಳು ಕಂಡುಬಂದಿದ್ದರಿಂದ ಈ ಹೆಜ್ಜೆ ಇಡಬೇಕಾಯಿತು ಎಂದು ಖನಿಜ ಸಚಿವಾಲಯದ ಆದೇಶ ತಿಳಿಸಿದೆ.

ಗಣಿ ಪ್ರದೇಶ ಅಭಿವೃದ್ಧಿಗೆ ಬಳಕೆ: ಎಂಎಂಡಿಆರ್‌ (ತಿದ್ದುಪಡಿ) ಕಾಯ್ದೆ 2015ರ ಪ್ರಕಾರ, ರಾಜ್ಯ ಸರ್ಕಾರವು ಎಲ್ಲ ಜಿಲ್ಲೆಗಳಲ್ಲಿ ಕಡ್ಡಾಯವಾಗಿ ಜಿಲ್ಲಾ ಖನಿಜ ಪ್ರತಿಷ್ಠಾನಗಳನ್ನು ಸ್ಥಾಪಿಸಬೇಕು. ಗಣಿ ಗುತ್ತಿಗೆದಾರರು ಸರ್ಕಾರಕ್ಕೆ ನೀಡುವ ರಾಯಧನದ ಹೊರತಾಗಿ, ಡಿಎಂಎಫ್‌ ಗೆ ಕೊಡುಗೆ ನೀಡಬೇಕು. ಹೀಗೆ ಸಂಗ್ರಹಿಸಿದ ಹಣವು ಗಣಿಬಾಧಿತ ಪ್ರದೇಶ ಹಾಗೂ ಜನರ ಅಭಿವೃದ್ಧಿ/ ಪುನರ್ವಸತಿಗೆ ಬಳಕೆಯಾಗಬೇಕು. ಗಣಿ ಬಾಧಿತ ಪ್ರದೇಶದಲ್ಲಿ ಕುಡಿಯುವ ನೀರು, ಶಾಲೆ ಹಾಗೂ ಇತರ ಮೂಲಸೌಕರ್ಯ ಕಲ್ಪಿಸಲು ಬಳಸಬೇಕು.

ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆಯ ಅಡಿಯಲ್ಲಿ, ಡಿಎಂಎಫ್‌ ನಿಧಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT