ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತು ರಾಜ್ಯಗಳಲ್ಲಿ ಹಕ್ಕಿ ಜ್ವರ: ಮುಂಜಾಗ್ರತೆಗೆ ಕೇಂದ್ರ ಸರ್ಕಾರ ಸೂಚನೆ

Last Updated 11 ಜನವರಿ 2021, 14:21 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದ ಹತ್ತು ರಾಜ್ಯಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ. ಹೀಗಾಗಿ ಜಲಮೂಲಗಳು, ಕೋಳಿ ಮಾರುಕಟ್ಟೆ, ಮೃಗಾಲಯಗಳು ಹಾಗೂ ಕೋಳಿ ಫಾರಂಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ’ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.

‘ಜನವರಿ 10ರವರೆಗೆ ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್‌ ಮತ್ತು ಉತ್ತರ ಪ್ರದೇಶದಲ್ಲಷ್ಟೇ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಸೋಮವಾರ ನವದೆಹಲಿ, ಉತ್ತರಾಖಂಡ ಮತ್ತು ಮಹಾರಾಷ್ಟ್ರದಲ್ಲೂ ರೋಗ ಪತ್ತೆಯಾಗಿದೆ’ ಎಂದು ಪಶುಸಂಗೋಪನೆ ಮತ್ತು ಹೈನುಗಾರಿಕಾ ಇಲಾಖೆಯ ಪ್ರಕಟಣೆ ತಿಳಿಸಿದೆ.

‘ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಈ ರೋಗದ ನಿಯಂತ್ರಣಕ್ಕೆ ಮುಂದಾಗುವಂತೆ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ಜಲಮೂಲಗಳು, ಮೃಗಾಲಯಗಳ ಮೇಲೆ ನಿಗಾ ಇಡುವಂತೆಯೂ ನಿರ್ದೇಶಿಸಲಾಗಿದೆ. ಸತ್ತ ಪಕ್ಷಿಗಳ ವಿಲೇವಾರಿ ವೇಳೆ ಸಿಬ್ಬಂದಿಗೆ ಪಿಪಿಇ ಕಿಟ್‌ಗಳ ಅಗತ್ಯವಿದ್ದು ಅವುಗಳ ದಾಸ್ತಾನು ಇಟ್ಟುಕೊಳ್ಳುವಂತೆಯೂ ಹೇಳಲಾಗಿದೆ. ಆರೋಗ್ಯ ಇಲಾಖೆಗಳ ಜೊತೆ ಪರಿಣಾಮಕಾರಿ ಸಂವಹನ ಇಟ್ಟುಕೊಂಡು ಈ ರೋಗವು ಮನುಷ್ಯರಿಗೆ ತಗುಲದಂತೆ ಜಾಗ್ರತೆ ವಹಿಸಬೇಕೆಂದು ರಾಜ್ಯ ಪಶುಸಂಗೋಪನಾ ಇಲಾಖೆಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ’ ಎಂದೂ ಪ್ರಕಟಣೆ ವಿವರಿಸಿದೆ.

ಎಂಟು ಮಾದರಿಗಳಲ್ಲಿ ಸೋಂಕು ಪತ್ತೆ: ‘ದೆಹಲಿಯ ಮಯೂರ ವಿಹಾರ ಮೂರನೇ ಹಂತದ ನಾಲ್ಕು, ಸಂಜಯ್‌ ಕೆರೆಯ ಮೂರು ಹಾಗೂ ದ್ವಾರಕದ ಒಂದು ಮಾದರಿಯನ್ನು ಭೋಪಾಲ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಎಂಟು ಮಾದರಿಗಳಲ್ಲಿ ಹಕ್ಕಿ ಜ್ವರದ ಸೋಂಕು ಪತ್ತೆಯಾಗಿದೆ’ ಎಂದು ನವದೆಹಲಿಯ ಪಶುಸಂಗೋಪನಾ ಅಧಿಕಾರಿ ರಾಕೇಶ್‌ ಸಿಂಗ್‌ ಹೇಳಿದ್ದಾರೆ.

‘ಸಂಜಯ್‌ ಕೆರೆಯಲ್ಲಿ ಭಾನುವಾರ ಮತ್ತೆ 17ಕ್ಕೂ ಅಧಿಕ ಹೆಬ್ಬಾತುಗಳು ಸತ್ತಿವೆ. ಹಿಂದಿನ ಕೆಲ ದಿನಗಳಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ) 14 ಉದ್ಯಾನಗಳಲ್ಲಿ 91 ಕಾಗೆಗಳು ಸತ್ತಿವೆ. ಕೆಲ ಮಾದರಿಗಳನ್ನು ಜಲಂಧರ್‌ನ ಪ್ರಯೋಗಾಲಯಕ್ಕೂ ಕಳುಹಿಸಲಾಗಿದೆ. ಅವುಗಳ ವರದಿ ಬರಬೇಕಿದೆ’ ಎಂದು ಡಿಡಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಹೆಬ್ಬಾತುಗಳಿಗಷ್ಟೇ ಸೋಂಕು: ‘ಸಂಜಯ್‌ ಕೆರೆಯಲ್ಲಿ ಸತ್ತಿದ್ದ ಮೂರು ಹೆಬ್ಬಾತುಗಳಲ್ಲಷ್ಟೇ ಹಕ್ಕಿ ಜ್ವರದ ಸೋಂಕು ಪತ್ತೆಯಾಗಿದೆ. ಉಳಿದ ಮಾದರಿಗಳ ಫಲಿತಾಂಶ ಬರಬೇಕಿದೆ’ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಹೇಳಿದ್ದಾರೆ.

‘ಮುಂಜಾಗ್ರತಾ ದೃಷ್ಟಿಯಿಂದ ನಗರದ ಹೊರಭಾಗದಿಂದ ಬರುವ ಸಂಸ್ಕರಿತ ಮಾಂಸಗಳ ಮಾರಾಟವನ್ನು ನಿಷೇಧಿಸಲಾಗಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರಿಂದ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ’ ಎಂದಿದ್ದಾರೆ.

8,000 ಹಕ್ಕಿಗಳನ್ನು ಕೊಲ್ಲಲು ನಿರ್ಧಾರ

ಥಾಣೆ/ಮುಂಬೈ: ಮಹಾರಾಷ್ಟ್ರದ ಪರಭಾನಿ ಜಿಲ್ಲೆಯ ಮುರುಂಬ ಗ್ರಾಮದಲ್ಲಿ ಇತ್ತೀಚೆಗೆ ಸತ್ತಿದ್ದ ಸುಮಾರು 900 ಕೋಳಿಗಳಿಗೆ ಎಚ್–5 ಸೋಂಕು ತಗುಲಿದ್ದು ದೃಢಪಟ್ಟಿದೆ.

‘ಸತ್ತ ಕೋಳಿಗಳು, ಗ್ರಾಮದ ಸ್ವ ಸಹಾಯ ಗುಂಪು ನಡೆಸುತ್ತಿದ್ದ ಕೋಳಿ ಫಾರಂನವು. ಅವುಗಳಿಂದ ಮಾದರಿಯನ್ನು ಸಂಗ್ರಹಿಸಿ ಭೋಪಾಲ್‌ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸೋಂಕು ಖಾತರಿಯಾದ ಹಿನ್ನೆಲೆಯಲ್ಲಿ ಗ್ರಾಮದ ಸುತ್ತಲಿನ 1 ಕಿ.ಮೀ.ವ್ಯಾಪ್ತಿಯಲ್ಲಿ ಒಟ್ಟು 8,000 ಹಕ್ಕಿಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ದೀಪಕ್‌ ಮುಗಳಿಕರ್‌ ಹೇಳಿದ್ದಾರೆ.

‘ಗ್ರಾಮದ ಸುತ್ತಲಿನ 10 ಕಿ.ಮೀ.ಪ್ರದೇಶವನ್ನು ನಿಷೇಧಿತ ವಲಯವೆಂದು ಘೋಷಿಸಲಾಗಿದೆ. ಆ ಭಾಗದಿಂದ ಬೇರೆಡೆಗೆ ಹಕ್ಕಿಗಳನ್ನು ಸಾಗಿಸದಂತೆ ಆದೇಶಿಸಲಾಗಿದೆ. ವೈದ್ಯಕೀಯ ತಂಡವು ಗ್ರಾಮಕ್ಕೆ ಭೇಟಿ ನೀಡಿ ಎಲ್ಲರ ಆರೋಗ್ಯ ತಪಾಸಣೆ ನಡೆಸಲಿದೆ’ ಎಂದೂ ಅವರು ನುಡಿದಿದ್ದಾರೆ.

‘ಮುಂಬೈ, ಥಾಣೆ, ಬೀಡ್‌, ದಪೋಲಿಯಲ್ಲೂ ಹಕ್ಕಿ ಜ್ವರ ಪತ್ತೆಯಾಗಿದೆ. ಮುಂಬೈನಲ್ಲಿ ಎರಡು ಕಾಗೆಗಳು, ಥಾಣೆಯಲ್ಲಿ ಮೂರು ಕೊಕ್ಕರೆ ಮತ್ತು ಎರಡು ಗಿಳಿಗಳು ಸೋಂಕಿನಿಂದ ಸತ್ತಿವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಮೊಟ್ಟೆ ಹಾಗೂ ಕೋಳಿ ಮಾಂಸ ಚೆನ್ನಾಗಿ ಬೇಯಿಸಿ ತಿನ್ನುವುದರಿಂದ ಯಾವುದೇ ಅಪಾಯವಿಲ್ಲ. ಹಕ್ಕಿ ಜ್ವರದಿಂದ ಜನಸಾಮಾನ್ಯರಿಗೆ ತೊಂದರೆಯಾಗುವುದು ತೀರಾ ವಿರಳ. ಹೀಗಾಗಿ ಯಾರೂ ಆತಂಕ ಪಡಬೇಕಿಲ್ಲ. ಹಕ್ಕಿಗಳನ್ನು ಕೊಲ್ಲುವ ಕಾರ್ಯ ಮಂಗಳವಾರದಿಂದ ಶುರುವಾಗಲಿದೆ’ ಎಂದು ಪಶುಸಂಗೋಪನೆ ಇಲಾಖೆಯ ಕಾರ್ಯದರ್ಶಿ ಅನೂಪ್‌ ಕುಮಾರ್‌ ತಿಳಿಸಿದ್ದಾರೆ.

ಕಾಗೆಗಳಮಾದರಿಯಲ್ಲಿ ಸೋಂಕು ಪತ್ತೆ

ಅಹಮದಾಬಾದ್‌: ‘ಗುಜರಾತ್‌ನ ಸೂರತ್‌ ಮತ್ತು ವಡೋದರದಲ್ಲಿ ಮೃತಪಟ್ಟಿದ್ದ ಕಾಗೆಗಳ ಮಾದರಿಗಳಲ್ಲಿ ಹಕ್ಕಿ ಜ್ವರದ ಸೋಂಕು ಪತ್ತೆಯಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಸೂರತ್‌ನ ಬಾರ್ದೋಲಿ ತಾಲೂಕಿನಲ್ಲಿ ಸಂಗ್ರಹಿಸಿದ್ದ ನಾಲ್ಕು ಕಾಗೆಗಳ ಮಾದರಿಗಳು, ವಡೋದರದ ವಸಂತಪುರ ಗ್ರಾಮದಲ್ಲಿ ಸತ್ತಿದ್ದ ಐದು ಕಾಗೆಗಳ ಪೈಕಿ ಮೂರು ಕಾಗೆಗಳ ಮಾದರಿಗಳಲ್ಲಿ ಸೋಂಕು ಇದ್ದದ್ದು ಖಾತರಿಯಾಗಿದೆ. ವಡೋದರದ ಕಿಯಾ ಗ್ರಾಮದಲ್ಲಿ ಭಾನುವಾರ 57 ಪಾರಿವಾಳಗಳು ಮೃತಪಟ್ಟಿದ್ದು ಅವುಗಳ ಮಾದರಿಗಳನ್ನೂ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಡೆಹ್ರಾಡೂನ್‌ನಲ್ಲಿ 200 ಹಕ್ಕಿಗಳ ಸಾವು

‘ಉತ್ತರಾಖಂಡದ ಡೆಹ್ರಾಡೂನ್‌ ಮತ್ತು ರಿಷಿಕೇಶದಲ್ಲಿ ಸುಮಾರು200 ಪಕ್ಷಿಗಳು ಸತ್ತಿವೆ. ಇವುಗಳಲ್ಲಿ ಕಾಗೆಗಳೇ ಹೆಚ್ಚಿವೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಡೆಹ್ರಾಡೂನ್‌ನ ವಿವಿಧ ಭಾಗಗಳಲ್ಲಿ ಭಾನುವಾರ 162 ಹಕ್ಕಿಗಳು ಮೃತಪಟ್ಟಿವೆ. ಭಂಡಾರಿ ಭಾಗ್‌ ಪ್ರದೇಶದಲ್ಲೇ 121 ಕಾಗೆಗಳು ಸತ್ತಿವೆ. ಜೊತೆಗೆ ಎರಡು ಪಾರಿವಾಳಗಳು ಹಾಗೂ ಒಂದು ಹದ್ದು ಕೂಡ ಮೃತಪಟ್ಟಿದೆ’ ಎಂದು ಡಿಎಫ್‌ಒ ರಾಜೀವ್‌ ಧಿಮಾನ್‌ ತಿಳಿಸಿದ್ದಾರೆ.

‘ರಿಷಿಕೇಶದ ಏಮ್ಸ್‌ ಆವರಣದಲ್ಲಿ ಒಟ್ಟು 28ಕಾಗೆಗಳು ಹಾಗೂ ಒಂದು ಪಾರಿವಾಳ ಸತ್ತಿದೆ. ಮುಂಜಾಗ್ರತಾ ಕ್ರಮವಾಗಿ ಈ ಭಾಗದಲ್ಲಿ ತಾತ್ಕಾಲಿಕವಾಗಿ ಮಾಂಸ ಮಾರಾಟ ಸ್ಥಗಿತಗೊಳಿಸಲಾಗಿದೆ’ ಎಂದು ಪಶುವೈದ್ಯಾಧಿಕಾರಿ ರಾಜೇಶ್‌ ರಾತೂರಿ ಹೇಳಿದ್ದಾರೆ.

***

ಸರ್ಕಾರವು ಎಲ್ಲಾ ಬಗೆಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಹಕ್ಕಿ ಜ್ವರ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ. ಹಾಗಾಗಿ ಯಾರೂ ಭಯಪಡಬೇಕಿಲ್ಲ

–ಮನೀಷ್‌ ಸಿಸೋಡಿಯಾ, ದೆಹಲಿ ಉಪ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT