ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ್ರೋಹ ಕಾನೂನಿನ ಮರುಪರಿಶೀಲನೆಗೆ ನಿರ್ಧಾರ: ಸುಪ್ರೀಂಗೆ ಕೇಂದ್ರದ ಅಫಿಡವಿಟ್

Last Updated 9 ಮೇ 2022, 13:19 IST
ಅಕ್ಷರ ಗಾತ್ರ

ನವದೆಹಲಿ: ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪರೀಕ್ಷಿಸಲು ನ್ಯಾಯಾಲಯವು ಸಮಯ ವ್ಯಯಿಸುವ ಅಗತ್ಯವಿಲ್ಲ. ಸರ್ಕಾರವೇ ಈ ಕುರಿತಂತೆ ಮರು ಪರಿಶೀಲನೆ ನಡೆಸಲು ನಿರ್ಧರಿಸಿದೆ ಎಂದು ಕೇಂದ್ರ ಸರ್ಕಾರವು ಸೋಮವಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ.

ಮೇ 5 ರಂದು ಈ ಕುರಿತಂತೆ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು, ವಸಾಹತು ಕಾಲದ ಭಾರತೀಯ ದಂಡ ಸಂಹಿತೆಯ ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಮೇ 10ರಂದು ವಾದಗಳನ್ನು ಆಲಿಸುವುದಾಗಿ ಹೇಳಿತ್ತು. 1962ರ ಕೇದಾರನಾಥ್ ಸಿಂಗ್ ಪ್ರಕರಣದಲ್ಲಿ ಐವರು ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠವು ನೀಡಿರುವ ತೀರ್ಪಿನ ಮರುಪರಿಶೀಲನೆಗೆ ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕೆ ಎಂಬ ಬಗ್ಗೆ ನಿರ್ಧರಿಸುವುದಾಗಿಯೂ ತಿಳಿಸಿತ್ತು.

ಈ ಮಧ್ಯೆ, ಸೋಮವಾರ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ, ‘ಸೂಕ್ತ ವೇದಿಕೆಯಲ್ಲಿ ಮಾತ್ರ ಮಾಡಬಹುದಾದ ಭಾರತೀಯ ದಂಡ ಸಂಹಿತೆಯ 124ಎ ವಿಧಿಯ ಸಿಂಧುತ್ವದ ಮರುಪರಿಶೀಲನೆಗೆ ಸರ್ಕಾರ ನಿರ್ಧರಿಸಿದೆ' ಎಂದು ತಿಳಿಸಲಾಗಿದೆ.

'ಈ ಗೌರವಾನ್ವಿತ ನ್ಯಾಯಾಲಯವು ಮತ್ತೊಮ್ಮೆ ಐಪಿಸಿಯ 124ಎ ವಿಧಿಯ ಸಿಂಧುತ್ವವನ್ನು ಪರಿಶೀಲಿಸಲು ಸಮಯವನ್ನು ಕೊಡುವ ಅಗತ್ಯವಿಲ್ಲ. ಸರ್ಕಾರವು ಈ ರೀತಿಯ ಕಾನೂನುಗಳ ಮರುಪರಿಶೀಲನೆಗೆ ಸಂವಿಧಾನಾತ್ಮಕವಾಗಿ ಅವಕಾಶವಿರುವ ಸೂಕ್ತ ವೇದಿಕೆಯಲ್ಲಿ ಮರುಪರಿಶೀಲನೆ ನಡೆಸಲು ನಿರ್ಧರಿಸಿದೆ’ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಕಳೆದ ಶನಿವಾರ ಸಲ್ಲಿಸಿದ್ದ ಮತ್ತೊಂದು ಲಿಖಿತ ಹೇಳಿಕೆಯಲ್ಲಿ ಕೇಂದ್ರವು ದೇಶದ್ರೋಹ ಕಾನೂನು ಮತ್ತು ಅದರ ಸಿಂಧುತ್ವವನ್ನು ಎತ್ತಿಹಿಡಿಯುವ 1962ರ ಸಾಂವಿಧಾನಿಕ ಪೀಠದ ತೀರ್ಪನ್ನು ಸಮರ್ಥಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT