ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 ಲಸಿಕೆ ಆಮದು ನಿರ್ಧಾರ ರಾಜ್ಯಗಳಿಗೆ ಬಿಡಲಿರುವ ಕೇಂದ್ರ: ವರದಿ

Last Updated 26 ಏಪ್ರಿಲ್ 2021, 13:50 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್–19 ಲಸಿಕೆಯ ಆಮದು ನಿರ್ಧಾರ ಕೈಗೊಳ್ಳುವುದನ್ನು ರಾಜ್ಯಗಳ ಆಡಳಿತ ಮತ್ತು ಕಂಪನಿಗಳಿಗೆ ಬಿಟ್ಟುಕೊಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಲಸಿಕೆ ಆಮದು ಮಾಡಿಕೊಳ್ಳುವ ಬದಲು ದೇಶೀಯ ಉತ್ಪಾದಕರಿಗೆ ಖರೀದಿಯ ಖಾತರಿ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸುವುದು ನರೇಂದ್ರ ಮೋದಿ ಸರ್ಕಾರದ ಉದ್ದೇಶವಾಗಿದೆ. ಭಾರತೀಯ ಲಸಿಕೆ ಉತ್ಪಾದಕರಿಗೆ ಇದೇ ಮೊದಲ ಬಾರಿಗೆ ಈ ತಿಂಗಳು ಸರ್ಕಾರ ಮುಂಗಡ ಪಾವತಿಸಿದೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್ ಅಲೆ ತೀವ್ರಗೊಂಡಿರುವುದು ಮತ್ತು ಅದನ್ನು ನಿಯಂತ್ರಿಸಲು ವಿಫಲವಾದ ಆರೋಪ ಕೇಳಿಬಂದ ಬೆನ್ನಲ್ಲೇ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವುದಾಗಿ ಕೇಂದ್ರ ಇತ್ತೀಚೆಗೆ ಘೋಷಿಸಿತ್ತು. ಆದರೆ, ಲಸಿಕೆ ಪೂರೈಕೆ ಈಗಾಗಲೇ ಕಡಿಮೆಯಾಗಿದೆ.

ಈ ತಿಂಗಳ ಆರಂಭದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ಫೈಜರ್, ಮಾಡರ್ನಾ, ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆಗಳ ಉತ್ಪಾದಕರಿಗೆ ಭಾರತದಲ್ಲಿ ಮಾರಾಟಕ್ಕೆ ಅನುಮೋದನೆ ಕೋರಿ ಮನವಿ ಸಲ್ಲಿಸುವಂತೆ ಸರ್ಕಾರ ಒತ್ತಾಯಿಸಿತ್ತು. ಅವುಗಳಿಗಾಗಿ ನಿಯಮಗಳನ್ನೂ ಸಡಿಲಿಸಿತ್ತು.

ಆದರೆ, ಇದೀಗ ಲಸಿಕೆ ಆಮದು ಒಪ್ಪಂದಗಳಿಗೆ ಸಹಿ ಮಾಡುವ ನಿರ್ಧಾರವನ್ನು ರಾಜ್ಯಗಳಿಗೆ ಬಿಡಲು ನಿರ್ಧರಿಸಿದೆ. ಕೇಂದ್ರವು ದೇಶೀಯವಾಗಿ ಉತ್ಪಾದನೆಯಾಗುತ್ತಿರುವ ಲಸಿಕೆಯ ಅರ್ಧದಷ್ಟನ್ನು ಈಗಾಗಲೇ ಖರೀದಿಸುತ್ತಿದೆ. ಸೀರಂ ಇನ್‌ಸ್ಟಿಟ್ಯೂಟ್ ಉತ್ಪಾದಿಸುವ ಆಸ್ಟ್ರಾಜೆನೆಕಾದ ಲಸಿಕೆ ಹಾಗೂ ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌ ಅನ್ನು ಖರೀದಿಸಲಾಗುತ್ತಿದೆ.

ದೇಶದಲ್ಲಿ ಸೋಮವಾರ ಕೂಡ ದಾಖಲೆ ಮಟ್ಟದಲ್ಲಿ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಈ ಮಧ್ಯೆ ಬ್ರಿಟನ್, ಅಮೆರಿಕ, ಜರ್ಮನಿ ಸೇರಿದಂತೆ ಅನೇಕ ರಾಷ್ಟ್ರಗಳು ಭಾರತಕ್ಕೆ ಅಗತ್ಯ ನೆರವು ಒದಗಿಸಲು ಮುಂದಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT