ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕಾ ಅಭಿಯಾನ ದೇಶದಲ್ಲಿ ಎರಡು ವರ್ಗದ ನಾಗರಿಕರನ್ನು ಸೃಷ್ಟಿಸಿದೆ: ಕೇರಳ ಹೈಕೋರ್ಟ್

Last Updated 2 ನವೆಂಬರ್ 2021, 8:29 IST
ಅಕ್ಷರ ಗಾತ್ರ

ಕೊಚ್ಚಿ: 'ಕೇಂದ್ರದ ಲಸಿಕೆ ಯೋಜನೆಯು ಭಾರತದಲ್ಲಿ ಎರಡು ವರ್ಗದ ನಾಗರಿಕರನ್ನು ಸೃಷ್ಟಿಸಿದೆ. ಒಂದು COVAXIN ಪಡೆದವರು, ಅವರ ಓಡಾಟವನ್ನು ನಿರ್ಬಂಧಿಸಲಾಗಿದೆ ಮತ್ತು ಇನ್ನೊಂದು COVISHIELD ಪಡೆದವರು, ಇವರು ಎಲ್ಲಿಗೆ ಬೇಕಾದರೂ ಹೋಗಬಹುದು' ಎಂದು ಕೇರಳ ಹೈಕೋರ್ಟ್ ಮಂಗಳವಾರ ಹೇಳಿದೆ.

ಕೆಲಸಕ್ಕಾಗಿ ವಿದೇಶಕ್ಕೆ ತೆರಳಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಲಸಿಕೆಯ ಮೂರನೇ ಡೋಸ್‌ ಪಡೆಯಲು ವ್ಯಕ್ತಿಯ ಮನವಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಪಿ.ವಿ.ಕುನ್ಹಿಕೃಷ್ಣನ್ ಅವರು ಈ ರೀತಿ ಅಸಮಾಧಾನ ಹೊರಹಾಕಿದ್ದಾರೆ.

ಸೌದಿ ಅರೇಬಿಯಾದಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ, ತಾವು ಸ್ವೀಕರಿಸಿರುವ ಎರಡು ಡೋಸ್ ಕೋವ್ಯಾಕ್ಸಿನ್ ಲಸಿಕೆಗೆ ಗಲ್ಫ್ ರಾಷ್ಟ್ರದಲ್ಲಿ ಮಾನ್ಯತೆ ನೀಡಿಲ್ಲ. ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಲಸಿಕೆ ಪಡೆಯದೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಅಲ್ಲಿ ತಮ್ಮ ಕೆಲಸ ಕಳೆದುಕೊಳ್ಳುವಂತಾಗಿದೆ. ಹೀಗಾಗಿ ಅಲ್ಲಿ ಮಾನ್ಯತೆ ನೀಡಿರುವ ಕೋವಿಡ್ ಲಸಿಕೆಯ ಮೂರನೇ ಡೋಸ್ ನೀಡುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು.

'ಕೇಂದ್ರ ಸರ್ಕಾರದ ಪ್ರಾಯೋಜಿತ ಲಸಿಕೆ ಅಭಿಯಾನದಿಂದಾಗಿ ದೇಶದಲ್ಲಿ ಎರಡು ರೀತಿಯ ನಾಗರಿಕರಿದ್ದಾರೆ- ಕೋವ್ಯಾಕ್ಸಿನ್ ಪಡೆದವರು ಮತ್ತು ಕೋವಿಶೀಲ್ಡ್ ಪಡೆದವರು. ಕೋವ್ಯಾಕ್ಸಿನ್ ಪಡೆದವರ ಓಡಾಟವನ್ನು ನಿರ್ಬಂಧಿಸಲಾಗಿದೆ, ಆದರೆ ಕೋವಿಶೀಲ್ಡ್ ಪಡೆದವರು ಎಲ್ಲಿಗೆ ಬೇಕಾದರೂ ಹೋಗಬಹುದು. ಎರಡು ವರ್ಗದ ನಾಗರಿಕರ ಸೃಷ್ಟಿಯು 'ಅರ್ಜಿದಾರರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ' ಎಂದು ನ್ಯಾಯಾಲಯ ಹೇಳಿದೆ.

'ಕೋವ್ಯಾಕ್ಸಿನ್ ಪಡೆದಿದ್ದ ವ್ಯಕ್ತಿಯ ಓಡಾಟವನ್ನು ನಿರ್ಬಂಧಿಸಲಾಗಿದೆ. ಲಸಿಕೆ ಅಭಿಯಾನದಿಂದಾಗಿ ನಾಗರಿಕನು ಸಂಕಷ್ಟಕ್ಕೆ ಸಿಲುಕಿದ್ದಾನೆ. ಇದು ಅರ್ಜಿದಾರರ ಮೂಲಭೂತ ಹಕ್ಕುಗಳ ಉಲ್ಲಂಘನೆಯ ಸ್ಪಷ್ಟ ಪ್ರಕರಣವಾಗಿದೆ' ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಅರ್ಜಿದಾರರಿಗೆ ಮೂರನೇ ಡೋಸ್ ಅನ್ನು ನೀಡಬೇಕೆ ಎಂದು ತಾನು ಆದೇಶಿಸುವುದಿಲ್ಲ, ಆದರೆ ಒಂದು ತಿಂಗಳೊಳಗೆ ಅವರ ಕುಂದುಕೊರತೆಗಳನ್ನು ಪರಿಹರಿಸಲು ಕೇಂದ್ರಕ್ಕೆ ನಿರ್ದೇಶಿಸುತ್ತೇನೆ' ಎಂದು ನ್ಯಾಯಾಧೀಶರು ಹೇಳಿದ್ದಾರೆ.

ನ್ಯಾಯಾಧೀಶರು ವ್ಯಕ್ತಪಡಿಸಿರುವ ಅಭಿಪ್ರಾಯದ ಬಗ್ಗೆ ಕೇಂದ್ರದ ಪ್ರತಿಕ್ರಿಯೆಗಾಗಿ ನ್ಯಾಯಾಲಯ ನವೆಂಬರ್ 5ಕ್ಕೆ ಪ್ರಕರಣವನ್ನು ಮುಂದೂಡಿದೆ. ವಿಚಾರಣೆಯ ಸಂದರ್ಭದಲ್ಲಿ, ಇದೇ ರೀತಿಯ ವಿಚಾರ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು, ಈ ವಿಷಯದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ನಿರ್ಧಾರಕ್ಕಾಗಿ ಕಾಯುವುದಾಗಿ ಕೇಂದ್ರವು ನ್ಯಾಯಾಲಯಕ್ಕೆ ಹೇಳಿದೆ.

ಈ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳಬೇಕೆಂದು ಕೇಂದ್ರ ಬಯಸಿದರೆ, ಅರ್ಜಿದಾರರಿಗೆ ವಿದೇಶದಲ್ಲಿ ಕೆಲಸ ಮಾಡುವಾಗ ಪಡೆಯುತ್ತಿದ್ದ ಸಂಬಳದ ಮೊತ್ತವನ್ನು ಪಾವತಿಸಲು ನಿರ್ದೇಶನ ನೀಡಬಹುದು. ನ್ಯಾಯಾಲಯವು ಕೇವಲ ಪ್ರೇಕ್ಷಕರಂತೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಕೋವಿಡ್ ಲಸಿಕೆಯ ಮೂರನೇ ಡೋಸ್ ನೀಡುವ ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳಲು ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ ಮತ್ತು ಇದು ಪೂರ್ಣಗೊಳ್ಳಲು ಹಲವಾರು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂದು ಕೇಂದ್ರವು ಆಗಸ್ಟ್‌ನಲ್ಲಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT