ಸೋಮವಾರ, ಅಕ್ಟೋಬರ್ 18, 2021
22 °C
ಮೊದಲ ದಲಿತ ಸಿ.ಎಂ ಅಧಿಕಾರಕ್ಕೆ

ಪಂಜಾಬ್‌ನ 16ನೇ ಮುಖ್ಯಮಂತ್ರಿಯಾಗಿ ಚರಣ್‌ಜಿತ್ ಸಿಂಗ್ ಚನ್ನಿ ಪ್ರಮಾಣ ವಚನ ಸ್ವೀಕಾರ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಚಂಡೀಗಡ: ಕಾಂಗ್ರೆಸ್‌ ನಾಯಕ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ಪಂಜಾಬ್‌ನ 16ನೇ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ಹುದ್ದೆಗೇರಿದ ದಲಿತ ಸಮುದಾಯದ ಮೊದಲ ವ್ಯಕ್ತಿ ಅವರು. ರಾಜ್ಯಪಾಲ ಭನ್ವಾರಿಲಾಲ್‌ ಪುರೋಹಿತ್‌ ಅವರು ಪ್ರಮಾಣವಚನ ಬೋಧಿಸಿದರು.

ಸುಖ್‌ಜಿಂದರ್‌ ಸಿಂಗ್‌ ರಂಧಾವ ಮತ್ತು ಒ.ಪಿ. ಸೋನಿ ಅವರಿಗೆ ಹೊಸ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ. ಅಮರಿಂದರ್‌ ಸಿಂಗ್‌ ನೇತೃತ್ವದ ಈ ಹಿಂದಿನ ಸರ್ಕಾರದಲ್ಲಿ ಈ ಇಬ್ಬರೂ ಸಚಿವರಾಗಿದ್ದರು. 

ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಚನ್ನಿ ಅವರು ಒತ್ತಾಯಿಸಿದ್ದಾರೆ. ‘ಕರಾಳ’ ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವ ರೈತರ ಜತೆಗೆ ಕಾಂಗ್ರೆಸ್ ಪಕ್ಷವು ಗಟ್ಟಿಯಾಗಿ ನಿಲ್ಲಲಿದೆ ಎಂದಿದ್ದಾರೆ. 

ಸೋಮವಾರ ಬೆಳಿಗ್ಗೆ 11 ಗಂಟೆಗೆ ಪ್ರಮಾಣವಚನ ನಿಗದಿಯಾಗಿತ್ತು. ಆದರೆ, ಸ್ವಲ್ಪ ತಡವಾಗಿ ಕಾರ್ಯಕ್ರಮ ನಡೆಯಿತು. ಸೋನಿ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಿಕೆ ಬಗ್ಗೆ ಸಮಾರಂಭಕ್ಕೆ ಅಲ್ಪ ಮೊದಲು ನಿರ್ಧಾರ ಕೈಗೊಳ್ಳಲಾಯಿತು ಎಂದು ಹೇಳಲಾಗಿದೆ.  ಕಾಂಗ್ರೆಸ್ ಸಂಸದ ರಾಹುಲ್‌ ಗಾಂಧಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಪಂಜಾಬ್ ಕಾಂಗ್ರೆಸ್‌ ಘಟಕದ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಅವರು ಸಮಾರಂಭದಲ್ಲಿ ಇದ್ದರು. ಆದರೆ, ಭಿನ್ನಮತದ ಕಾರಣಕ್ಕೆ ಮುಖ್ಯಮಂತ್ರಿ ಹುದ್ದೆಗೆ ಶನಿವಾರ ರಾಜೀನಾಮೆ ನೀಡಿದ ಅಮರಿಂದರ್‌ ಅವರು ಗೈರುಹಾಜರಾಗಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು