ಶುಕ್ರವಾರ, ಜುಲೈ 1, 2022
24 °C

ಛೋಟಾ ರಾಜನ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಸಿಬಿಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಕಾರ್ಮಿಕ ಸಂಘಟನೆಯ ನಾಯಕ ದತ್ತ ಸಾಮಂತ್‌ ಹತ್ಯೆ ಪ್ರಕರಣದಲ್ಲಿ ನಂಟು ಹೊಂದಿರುವ ಆರೋಪದಡಿ ಭೂಗತ ಪಾತಕಿ ಛೋಟಾ ರಾಜನ್‌ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಯು (ಸಿಬಿಐ) ಚಾರ್ಜ್‌ಶೀಟ್‌ ಸಲ್ಲಿಸಿದೆ.

1982ರಲ್ಲಿ ಮುಂಬೈನಲ್ಲಿ ನಡೆದಿದ್ದ ಜವಳಿ ಮುಷ್ಕರದ ಮುಂಚೂಣಿ ನಾಯಕರಾಗಿದ್ದ ದತ್ತ ಅವರನ್ನು 1997ರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

‘ಛೋಟಾ ರಾಜನ್‌, ಸಾಮಂತ್‌ ಹತ್ಯೆಗೆ ಸಂಚು ರೂಪಿಸಿದ್ದ ಬಗ್ಗೆ ಅನುಮಾನಗಳಿವೆ. ಹೀಗಾಗಿ ಆತನ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಮೂರು ಸಂಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ’ ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪ್ರದೀಪ್‌ ಘರತ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಸಾಮಂತ್‌ ಅವರು ‘ಡಾಕ್ಟರ್‌ ಸಾಬ್‌’ ಎಂದೇ ಚಿರಪರಿಚಿತರಾಗಿದ್ದರು. ಅವರನ್ನು 1997ರ ಜನವರಿ 16ರಂದು ಅವರ ಮನೆಯ ಹೊರಭಾಗದಲ್ಲೇ ಹತ್ಯೆ ಮಾಡಲಾಗಿತ್ತು. ಬಂದೂಕುಧಾರಿಗಳು ಅವರ ತಲೆ, ಎದೆ ಹಾಗೂ ಹೊಟ್ಟೆಯ ಭಾಗವನ್ನು ಗುರಿಯಾಗಿಟ್ಟುಕೊಂಡು 17 ಸುತ್ತು ಗುಂಡು ಹಾರಿಸಿದ್ದರು. ಸಾವಂತ್‌ ಹತ್ಯೆಯು ಮುಂಬೈಯನ್ನು ಬೆಚ್ಚಿ ಬೀಳಿಸಿತ್ತು. ಬಿಜೆಪಿ–ಶಿವಸೇನಾ ಮೈತ್ರಿಕೂಟದ ಸರ್ಕಾರ ಆಗ ಅಸ್ತಿತ್ವದಲ್ಲಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ವಿಫಲಾಗಿದೆ ಎಂಬ ಟೀಕೆಗಳೂ ಆಗ ವ್ಯಕ್ತವಾಗಿದ್ದವು.

ಭಾರತದ ಅಧಿಕಾರಿಗಳು 2015ರಲ್ಲಿ ಇಂಡೊನೇಷ್ಯಾದಲ್ಲಿ ರಾಜನ್‌ನನ್ನು ಬಂಧಿಸಿ ಅಲ್ಲಿ ಕರೆದುಕೊಂಡು ಬಂದಿದ್ದರು. ಆತನನ್ನು ಸದ್ಯ ನವದೆಹಲಿಯ ತಿಹಾರ್‌ ಜೈಲಿನಲ್ಲಿಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು