ಭಾನುವಾರ, ಸೆಪ್ಟೆಂಬರ್ 26, 2021
28 °C

ಹಣ ಅಕ್ರಮ ವರ್ಗಾವಣೆ: ಚಾರ್ಟರ್ಡ್ ಅಕೌಂಟೆಂಟ್‌ ಬಂಧಿಸಿದ ಇ.ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಶಕ್ತಿ ಭೋಗ್ ಫುಡ್ಸ್ ಲಿಮಿಟೆಡ್ ವಿರುದ್ಧದ ₹3,269.42 ಕೋಟಿ ಬ್ಯಾಂಕ್ ಸಾಲ ವಂಚನೆಯ ಹಣ ವರ್ಗಾವಣೆ ಪ್ರಕರಣ ಸಂಬಂಧ ಚಾರ್ಟರ್ಡ್ ಅಕೌಂಟೆಂಟ್‌ ಒಬ್ಬರನ್ನು ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.

ರಾಮನ್ ಭುರಾರಿಯಾ ಅವರನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಕೋರ್ಟ್‌ ಇದೇ 20ರವರೆಗೆ ಅವರನ್ನು ಬಂಧನಕ್ಕೆ ಒಪ್ಪಿಸಿದೆ.

ನ್ಯಾಯಾಲಯವು ಭುರಾರಿಯಾಗೆ ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ನಂತರ, ವಂಚನೆ ಆರೋಪ ಪ್ರಕರಣದಲ್ಲಿ ‘ಸಹಾಯ ಮತ್ತು ಸಹಭಾಗಿತ್ವ’ ನೀಡಿದ್ದಕ್ಕಾಗಿ ಅವರನ್ನು ಶುಕ್ರವಾರ ಬಂಧಿಸಲಾಯಿತು. ಅಲ್ಲದೇ ಭುರಾರಿಯಾಗೆ ಸಂಬಂಧಿಸಿದ ಹಲವು ಜಾಗಗಳಲ್ಲಿ ಶೋಧ ನಡೆಸಲಾಯಿತು. ವಿವಿಧ ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ವಶಕ್ಕೆ ಪಡೆಯಲಾಯಿತು ಎಂದು ಇ.ಡಿ ಹೇಳಿದೆ.

ಈ ಪ್ರಕರಣ ಸಂಬಂಧ ಶಕ್ತಿ ಭೋಗ್ ಫುಡ್ಸ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಕೇವಲ್ ಕ್ರಿಶನ್ ಕುಮಾರ್ ಅವರನ್ನು ಇ.ಡಿ ಜುಲೈನಲ್ಲಿ ಬಂಧಿಸಿತ್ತು.

ಶಕ್ತಿ ಭೋಗ್ ಫುಡ್ಸ್ ಲಿಮಿಟೆಡ್ ಮತ್ತು ಇತರರ ವಿರುದ್ಧ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಕ್ರಿಮಿನಲ್ ದುರ್ನಡತೆಗಾಗಿ ಸಿಬಿಐ ಎಫ್ಐಆರ್ ದಾಖಲಿಸಿದ ನಂತರ ಇ.ಡಿ, ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು.

ಶಕ್ತಿ ಭೋಗ್ ಫುಡ್ಸ್ ಲಿಮಿಟೆಡ್ ವಹಿವಾಟು 2008ರಲ್ಲಿ ₹1,411.87 ಕೋಟಿಯಿಂದ 2013-14ರ ವೇಳೆಗೆ ₹6,000 ಕೋಟಿಗೆ ಏರಿದೆ. ಆದಾಗ್ಯೂ, ಖಾತೆಯು ಕಾರ್ಯನಿರ್ವಹಿಸದ ಸ್ವತ್ತಾಗಿ (ಎನ್‌ಪಿಎ) ಬದಲಾಯಿತು. ಇದನ್ನು 2019ರಲ್ಲಿ ವಂಚನೆ ಎಂದು ಘೋಷಿಸಲಾಯಿತು ಎಂದು ಎಸ್‌ಬಿಐ ತನ್ನ ದೂರಿನಲ್ಲಿ ಹೇಳಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು