ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕತ್ವದ ಚರ್ಚೆ: ವಾರದಲ್ಲಿ 2ನೇ ಬಾರಿಗೆ ದೆಹಲಿ ನಾಯಕರ ಭೇಟಿಯಾದ ಛತ್ತೀಸಗಡದ ಸಿಎಂ

Last Updated 27 ಆಗಸ್ಟ್ 2021, 9:45 IST
ಅಕ್ಷರ ಗಾತ್ರ

ರಾಯಪುರ: ಛತ್ತೀಸಗಡದಲ್ಲಿ ನಾಯಕತ್ವ ಬದಲಾವಣೆ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿರುವ ನಡುವೆಯೇ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಶುಕ್ರವಾರ ಪಕ್ಷದ ಕೇಂದ್ರ ನಾಯಕರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದಾರೆ.

ಇತ್ತೀಚೆಗೆ ಆರೋಗ್ಯ ಸಚಿವ ಸಚಿವ ಟಿ.ಎಸ್. ಸಿಂಗ್ ದಿಯೋ ಅವರೊದಿಗೆ ಜಟಾಪಟಿ ನಡೆದ ನಂತರ, ಮುಖ್ಯಮಂತ್ರಿ ಬಘೇಲ್ ಅವರು ಈ ವಾರದಲ್ಲಿ ಎರಡನೇ ಬಾರಿಗೆ ದೆಹಲಿಯ ಪಕ್ಷದ ಕೇಂದ್ರ ನಾಯಕರನ್ನು ಭೇಟಿಯಾಗುತ್ತಿದ್ದಾರೆ.

ಶುಕ್ರವಾರ ದೆಹಲಿಗೆ ತೆರಳುವ ಮುನ್ನ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಭೂಪೇಶ್ ಬಘೇಲ್, ‘ಪಕ್ಷದ ಹೈಕಮಾಂಡ್ ಕರೆಯ ಮೇರೆಗೆ ದೆಹಲಿಗೆ ಹೋಗುತ್ತಿದ್ದೇನೆ‘ ಎಂದು ಹೇಳಿದರು.

‘ಎಐಸಿಸಿ ಪ್ರಧಾನ ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವಂತೆ ಸಂದೇಶ ಕಳುಹಿಸಿದ್ದರು. ಅವರ ನಿರ್ದೇಶನದಂತೆ ನಾನು ದೆಹಲಿಗೆ ತೆರಳುತ್ತಿದ್ದೇನೆ. ಇದು ಬಿಟ್ಟು ನನ್ನಲ್ಲಿ ಬೇರೆ ಯಾವುದೇ ಮಾಹಿತಿ ಇಲ್ಲ‘ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್‌ನ ಮೂಲಗಳ ಪ್ರಕಾರ, ಮುಖ್ಯಮಂತ್ರಿ ಬಘೇಲ್‌ ಅವರಿಗೆ ಆತ್ಮೀಯರಾಗಿರುವ ಕೆಲವು ಶಾಸಕರು ಮತ್ತು ಸಚಿವರು ಗುರುವಾರವೇ ದೆಹಲಿ ತಲುಪಿದ್ದಾರೆ. ಕೆಲವು ಶಾಸಕರು ಮತ್ತು ಸಚಿವರು ಮತ್ತು ಹಿರಿಯ ನಾಯಕರು ಶುಕ್ರವಾರ ಬೆಳಿಗ್ಗೆ ರಾಜಧಾನಿಯನ್ನು ತಲುಪಿದ್ದಾರೆ.

ಕಾಂಗ್ರೆಸ್‌ ಶಾಸಕರು ಮತ್ತು ಸಚಿವರ ದೆಹಲಿ ಭೇಟಿ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರು ಯಾಕೆ ಪಕ್ಷದ ನಾಯಕರನ್ನು ಭೇಟಿಯಾಗಬೇಕು. ನನಗೆ ಕರೆ ಬಂದಿದೆ. ಅದಕ್ಕೆ ನಾನು ಹೋಗುತ್ತಿದ್ದೇನೆ. ಪಕ್ಷದ ಮುಖಂಡರು ಅವರ‍್ಯಾರನ್ನೂ ಕರೆದಿಲ್ಲ. ಕೊರೊನಾ ಸಾಂಕ್ರಾಮಿಕದಿಂದಾಗಿ ಬಹಳ ದಿನಗಳಿಂದ ಪಕ್ಷದ ನಾಯಕ ರನ್ನು ಭೇಟಿಯಾಗಿರಲಿಲ್ಲ. ಆ ಕಾರಣಕ್ಕೆ ಈಗ ಭೇಟಿಯಾಗಲು ದೆಹಲಿಗೆ ತೆರಳಿರಬಹುದು‘ ಎಂದು ಹೇಳಿದರು.

ಇದಕ್ಕೂ ಮುನ್ನ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರು, ಛತ್ತೀಸಗಡದಲ್ಲಿ ಕಾಂಗ್ರೆಸ್‌ನ ಈ ಇಬ್ಬರು ಹಿರಿಯ ನಾಯಕರ ನಡುವೆ ಉಂಟಾಗಿರುವ ಜಗಳವನ್ನು ಬಗೆಹರಿಸುವ ಸಂಬಂಧ ಸಚಿವ ಟಿ.ಎಸ್. ಸಿಂಗ್ ದಿಯೋ ಅವರೊಂದಿಗೆ ಸಭೆ ನಡೆಸಿದ್ದರು. ಇದಾದ ಒಂದು ದಿನದ ನಂತರ ಬುಧವಾರ ಸಂಜೆ ಮುಖ್ಯಮಂತ್ರಿ ದೆಹಲಿಯಿಂದ ರಾಯಪುರಕ್ಕೆ ಮರಳಿದ್ದರು.

ಈಗ ಮುಖ್ಯಮಂತ್ರಿಯವರು ಪುನಃ ದೆಹಲಿಗೆ ತೆರಳುತ್ತಿದ್ದಾರೆ. ಇವರಿಗಿಂತ ಮುಂಚೆ ಕೃಷಿ ಸಚಿವ ರವೀಂದ್ರ ಚೌಬೆ ಹಾಗೂ ಅರಣ್ಯ ಸಚಿವ ಮೊಹಮ್ಮದ್ ಅಕ್ಬರ್ ಕೂಡ ವಿಮಾನ ನಿಲ್ದಾಣವನ್ನು ಪ್ರವೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT