ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಾವಲಾ ಗ್ಯಾಂಗ್ ರೇಪ್: ಮರು‍ಪರಿಶೀಲನಾ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು

Last Updated 8 ಫೆಬ್ರುವರಿ 2023, 11:34 IST
ಅಕ್ಷರ ಗಾತ್ರ

ನವದೆಹಲಿ: ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದ ಮೂವರನ್ನು ಖುಲಾಸೆಗೊಳಿಸಿದ್ದ ತೀರ್ಪನ್ನು ಪುನರ್‌ ಪರಿಶೀಲಿಸಬೇಕು ಎಂದು ಕೋರಿ ದೆಹಲಿ ಪೊಲೀಸರು ಸಲ್ಲಿದ್ದ ಅರ್ಜಿಯನ್ನು ಮಾನ್ಯಮಾಡಿರುವ ಸುಪ್ರೀಂ ಕೋರ್ಟ್‌, ವಿಚಾರಣೆಗೆ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ರಚಿಸುವುದಾಗಿ ಹೇಳಿದೆ.

ದೆಹಲಿಯ ಛಾವಲಾ ಪ್ರದೇಶದಲ್ಲಿ 2012ರಲ್ಲಿ 19 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ‘ಖುಲಾಸೆಗೊಂಡಿದ್ದ ಮೂವರಲ್ಲಿ ವಿನೋದ್‌ ಎಂಬುವವರು ಕಳೆದ ತಿಂಗಳು ದ್ವಾರಕಾ ಪ್ರದೇಶದಲ್ಲಿ ಆಟೊ ಚಾಲಕರೊಬ್ಬರ ಕತ್ತು ಸೀಳಿ ಕೊಲೆ ಮಾಡಿದ್ದಾರೆ’ ಎಂದು ಸಾಲಿಸಿಟರಲ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಹಾಗೂ ನ್ಯಾಯಮೂರ್ತಿಗಳಾದ ಪಿ.ಎಸ್‌. ನರಸಿಂಹ ಹಾಗೂ ಜೆ.ಬಿ. ಪಾರ್ದಿವಾಲ ಅವರಿದ್ದ ಪೀಠಕ್ಕೆ ತಿಳಿಸಿದರು.

‘ಖುಲಾಸೆಗೊಂಡಿರುವ ಮೂವರೂ ದೊಡ್ಡ ಕ್ರಿಮಿನಲ್‌ಗಳಾಗಿದ್ದಾರೆ. ಆದ್ದರಿಂದ ನ್ಯಾಯಾಲಯವು ಕಳೆದ ವರ್ಷ ನೀಡಿದ ತೀರ್ಪನ್ನು ಪುನರ್‌ ಪರಿಶೀಲಿಸುವಂತೆ ಕೋರುತ್ತೇವೆ’ ಎಂದರು. ಅಂದಿನ ಮುಖ್ಯ ನಾಯಮೂರ್ತಿ ಯು.ಯು. ಲಲಿತ್‌ ಅವರ ನೇತೃತ್ವದ ಪೀಠವು ಮೂವರನ್ನು ಆರೋಪಮುಕ್ತರನ್ನಾಗಿಸಿತ್ತು.

ನ್ಯಾಯಮೂರ್ತಿಗಳಾದ ಎಸ್‌. ರವೀಂದ್ರ ಭಟ್‌, ಬೇಲಾ ಎಂ. ತ್ರಿವೇದಿ ಹಾಗೂ ನನ್ನನ್ನು ಒಳಗೊಂಡ ಪೀಠ ರಚಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಹೇಳಿದರು.

ದ್ವಾರಕಾ ಜಿಲ್ಲಾ ಉಪ ಪೊಲೀಸ್‌ ವರಿಷ್ಠಾಧಿಕಾರಿ ಎಂ. ಹರ್ಷವರ್ಧನ್‌ ಅವರು ತೀರ್ಪಿನ ಮರು ಪರಿಶೀಲನೆಗೆ ಹೊಸ ಅರ್ಜಿ ಸಲ್ಲಿಸಿದ್ದರು. ಅತ್ಯಾಚಾರಕ್ಕೊಳಗಾದ ಯುವತಿಯ ತಂದೆ ಕೂಡ ಈ ಹಿಂದೆಯೇ ಅರ್ಜಿ ಸಲ್ಲಿಸಿದ್ದರು.

ಪ್ರಕರಣವೇನು?: 19 ವರ್ಷದ ಯುವತಿಯ ಮೇಲೆ ಮೂವರು ಅತ್ಯಾಚಾರ ಎಸಗಿ, ಆಕೆಯನ್ನು ಕೊಲೆ ಮಾಡಿದ್ದರು. ಸ್ಕ್ರೂಡ್ರೈವರ್‌ ಹಾಗೂ ಇತರ ಕಾರಿನ ಟೂಲ್ಸ್‌ಗಳನ್ನು ಬಳಸಿ ಆಕೆಯ ದೇಹವನ್ನು ಕೊಚ್ಚಿದ್ದರು. ವಿಚಾರಣಾ ನ್ಯಾಯಾಲಯವು ಮೂವರಿಗೆ 2014ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿತ್ತು. ದೆಹಲಿ ಹೈಕೋರ್ಟ್‌ ಕೂಡ ಈ ತೀರ್ಪನ್ನು ಎತ್ತಿಹಿಡಿದಿತ್ತು. ಆದರೆ, ಕಳೆದ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಮೂವರನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT