ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯೋತ್ಸವ ಪೋಸ್ಟರ್‌ನಿಂದ ನೆಹರು ಚಿತ್ರ ಕೈಬಿಟ್ಟ ಐಸಿಎಚ್‌ಆರ್‌: ಆಕ್ಷೇಪ

Last Updated 29 ಆಗಸ್ಟ್ 2021, 19:40 IST
ಅಕ್ಷರ ಗಾತ್ರ

ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ರೂಪಿಸಿರುವ ಡಿಜಿಟಲ್ ಪೋಸ್ಟರ್‌ಗಳಲ್ಲಿ ಜವಾಹರಲಾಲ್‌ ನೆಹರೂ ಅವರ ಭಾವಚಿತ್ರವನ್ನು ಕೈಬಿಟ್ಟಿರುವ ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ (ಐಸಿಎಚ್‌ಆರ್‌) ಕ್ರಮವನ್ನು ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಖಂಡಿಸಿದ್ದಾರೆ.

ಈ ಬಗ್ಗೆ ಐಸಿಎಚ್‌ಆರ್‌ನ ಸದಸ್ಯ ಕಾರ್ಯದರ್ಶಿ ನೀಡಿರುವ ವಿವರಣೆ ಹಾಸ್ಯಾಸ್ಪದವಾಗಿದೆ. ಇಂಥ ವಿವರಣೆ ನೀಡುವ ಬದಲು ಅವರು ತಮ್ಮ ಬಾಯಿ ಮುಚ್ಚಿಕೊಂಡಿರುವುದು ಒಳ್ಳೆಯದು’ ಎಂದೂ ಟ್ವೀಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಸಿಎಚ್‌ಆರ್‌ನ ಸದಸ್ಯ ಕಾರ್ಯ ದರ್ಶಿ ದ್ವೇಷ ಹಾಗೂ ಪೂರ್ವಗ್ರಹಕ್ಕೆ ಮಣಿದಿದ್ದಾರೆ ಎಂದು ಆರೋಪಿಸಿರುವ ಅವರು, ‘ಮೋಟಾರು ಕಾರು ಸಂಶೋಧನೆಯಾದ ದಿನ ವನ್ನು ಆಚರಿಸುವ ವೇಳೆ ಹೆನ್ರಿ ಫೋರ್ಡ್‌ ಚಿತ್ರವನ್ನು ಕೈಬಿಡುತ್ತೀರಾ? ವಿಮಾನವನ್ನು ಕಂಡು ಹಿಡಿದ ದಿನವನ್ನು ಆಚರಿಸುವಾಗರೈಟ್ ಸಹೋದರರ ಚಿತ್ರವನ್ನು ಕೈಬಿಡುತ್ತೀರಾ’ ಎಂದು ಪ್ರಶ್ನಿಸಿದ್ದಾರೆ.

‘ಆಜಾದಿ ಕಾ ಅಮೃತ ಮಹೋತ್ಸವ’ ಆಚರಣೆ ಅಂಗವಾಗಿ ರೂಪಿಸಿದ ಪೋಸ್ಟರ್‌ಗಳಲ್ಲಿ ನೆಹರೂ ಅವರ ಭಾವಚಿತ್ರವನ್ನು ಕೈಬಿಟ್ಟಿರುವ
ಐಸಿಎಚ್‌ ಆರ್‌ ಕ್ರಮವು ವಿವಾದಕ್ಕೀಡಾಗಿದೆ. ಇದಕ್ಕಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ವಿರೋಧ ಪಕ್ಷಗಳು, ಇದನ್ನು ‘ಕ್ಷುಲ್ಲಕ ಹಾಗೂ ಅಸಹ್ಯಕರ’ ಎಂದಿವೆ.

ಭಾರತದ ಮೊದಲ ಪ್ರಧಾನಿಯ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡಲಾಗಿದೆ ಎಂದು ಕಾಂಗ್ರೆಸ್‌ ಮುಖಂಡರು ಹರಿಹಾಯ್ದಿದ್ದಾರೆ.

ಪಕ್ಷದ ಮುಖಂಡರಾದ ಜೈರಾಂ ರಮೇಶ್‌, ಶಶಿ ತರೂರ್‌ ಹಾಗೂ ಪವನ್‌ ಖೇರಾ ಅವರು, ಐಸಿಎಚ್‌ಆರ್‌ ವೆಬ್‌ಸೈಟ್‌ನಲ್ಲಿ ನೆಹರೂ ಹೊರತುಪಡಿಸಿ ಮಹಾತ್ಮ ಗಾಂಧಿ, ನೇತಾಜಿ ಸುಭಾಷ್‌ಚಂದ್ರಬೋಸ್, ಭಗತ್‌ ಸಿಂಗ್‌, ಬಿ.ಆರ್.ಅಂಬೇಡ್ಕರ್‌, ಸರ್ದಾರ್‌ ವಲ್ಲಭಬಾಯಿ ಪಟೇಲ್, ರಾಜೇಂದ್ರ ಪ್ರಸಾದ್‌, ಮದನ್‌ ಮೋಹನ ಮಾಳವೀಯ ಮತ್ತು ವೀರ ಸಾವರ್ಕರ್‌ ಭಾವಚಿತ್ರಗಳ ಸ್ಕ್ರೀನ್‌ಶಾಟ್‌ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಭಾರತದ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ದನಿಯಾಗಿದ್ದ ನೆಹರೂ ಅವರ ಭಾವಚಿತ್ರ ಕೈಬಿಡುವ ಮೂಲಕ ಐಸಿಎಚ್‌ಆರ್‌ ತನ್ನನ್ನು ತಾನೇ ಅವಮಾನಿಸಿಕೊಂಡಿದೆ ಎಂದು ಶಶಿ ತರೂರ್‌ ಟೀಕಿಸಿದ್ದಾರೆ.

‘ಈ ಸರ್ಕಾರದ ಅವಧಿಯಲ್ಲಿ ಇಂಥದ್ದು ಅಚ್ಚರಿಯೇನಲ್ಲ. ಛದ್ಮವೇಷದಲ್ಲಿರುವ ಸರ್ಕಾರದ ಹೊಗಳುಭಟ್ಟರು ವಿದ್ವಾಂಸರೆನಿಸಿಕೊಂಡು ಕ್ರೌರ್ಯ ಮೆರೆಯವುದು ಇಲ್ಲಿ ಸಹಜ’ ಎಂದು ಜೈರಾಂ ರಮೇಶ್‌ ಹೇಳಿದ್ದಾರೆ

‘ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಿಜೆಪಿ ಅಸ್ತಿತ್ವದಲ್ಲಿಯೇ ಇರಲಿಲ್ಲ. ಆರ್‌ಎಸ್‌ಎಸ್ ಕೂಡ ಭಾಗಿಯಾಗಿರಲಿಲ್ಲ. ಹೀಗಾಗಿ ಬಿಜೆಪಿಯು ಇತಿಹಾಸವನ್ನು ಬದಲಿಸಲು ಮುಂದಾಗಬಾರದು’ ಎಂದು ಎನ್‌ಸಿಪಿಯ ಮಜೀದ್‌ ಮೆಮನ್‌ಹೇಳಿದ್ದಾರೆ.

‘ಮುಂದಿನ ಪೋಸ್ಟರ್‌ಗಳಲ್ಲಿ ನೆಹರೂ ಚಿತ್ರ ಇರಲಿದೆ’
ನೆಹರೂ ಚಿತ್ರವನ್ನು ಕೈಬಿಟ್ಟಿರುವುದಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೊಳಗಾಗಿರುವ ಐಸಿಎಚ್ಆರ್‌, ಈ ವಿವಾದವು ಅನಗತ್ಯ ಎಂದು ಹೇಳಿದೆ. ಅಲ್ಲದೇ ಮುಂದೆ ಬಿಡುಗಡೆಯಾಗಲಿರುವ ಪೋಸ್ಟರ್‌ಗಳಲ್ಲಿ ನೆಹರೂ ಚಿತ್ರ ಇರಲಿದೆ ಎಂದು ತಿಳಿಸಿದೆ.

‘ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿದ್ದ ಯಾರ ಪಾತ್ರವನ್ನೂ ನಾವು ಗೌಣ ಮಾಡಲು ಯತ್ನಿಸುತ್ತಿಲ್ಲ’ ಎಂದಿರುವ ಐಸಿಎಚ್‌ಆರ್‌ ಅಧಿಕಾರಿಯೊಬ್ಬರು, ‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಈಗ ಒಂದು ಪೋಸ್ಟರ್‌ ಮಾತ್ರ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿಹಲವಾರು ಪೋಸ್ಟರ್‌ಗಳು ಬಿಡುಗಡೆಯಾಗಲಿದ್ದು, ಅವುಗಳಲ್ಲಿ ನೆಹರೂ ಅವರ ಚಿತ್ರವೂ ಇರಲಿದೆ. ಹೀಗಾಗಿ ವಿವಾದ ಅನಗತ್ಯ’ ಎಂದು ಹೇಳಿದ್ದಾರೆ.

ಐಸಿಎಚ್‌ಆರ್‌, ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾಗಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಸ್ವಾತಂತ್ರ್ಯ ಹೋರಾಟದ ಬಗೆಗಿನ ಸರಣಿ ಉಪನ್ಯಾಸ ಹಾಗೂ ಗೋಷ್ಠಿಗಳನ್ನು ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT