ಬುಧವಾರ, ಜನವರಿ 20, 2021
28 °C

ದಾರಿತಪ್ಪಿ ಬಂದಿದ್ದ ಚೀನಿ ಯೋಧ ಹಸ್ತಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತೀಯ ಸೇನೆಯಿಂದ ಇತ್ತೀಚೆಗೆ ಬಂಧನಕ್ಕೊಳಗಾದ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸೈನಿಕ ‘ಕತ್ತಲೆ ಮತ್ತು ಸಂಕೀರ್ಣ ಭೂಪ್ರದೇಶ’ದ ಕಾರಣ ನಾಪತ್ತೆಯಾಗಿದ್ದ ಎಂದು ಚೀನಾ ಸೇನೆ ಸೋಮವಾರ ಹೇಳಿಕೊಂಡಿದೆ.

ಉಭಯ ರಾಷ್ಟ್ರಗಳ ನಡುವಿನ ವಾಸ್ತವಿಕ ನಿಯಂತ್ರಣ ಗಡಿಯನ್ನು (ಎಲ್‌ಎಸಿ) ಉಲ್ಲಂಘಿಸಿ ಬಂದಿದ್ದ ಚೀನಾ ಸೈನಿಕನನ್ನು ಭಾರತೀಯ ಸೇನೆಯು ಕಳೆದ ಶುಕ್ರವಾರ ಮುಂಜಾನೆ ಲಡಾಖ್‌ನ ಪಾಂಗಾಂಗ್‌ ಸರೋವರ ಸಮೀಪ ಬಂಧಿಸಿತ್ತು. ಸೈನಿಕನನ್ನು ಸೋಮವಾರ ಎಲ್‌ಎಸಿಯ ಚುಶುಲ್‌ನಲ್ಲಿರುವ ಚೀನಾ ಸೇನೆಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಚೀನಾದ ಯೋಧ ಎಲ್‌ಎಸಿ ದಾಟಿ ಭಾರತದ ಭೂಪ್ರದೇಶಕ್ಕೆ ಅತಿಕ್ರಮಣ ಮಾಡಿದ ಸಂದರ್ಭಗಳ ಬಗ್ಗೆ ಭಾರತೀಯ ಸೇನೆ ತನಿಖೆ ನಡೆಸಿತು. ನೆರೆಯ ದೇಶದ ಮಿಲಿಟರಿ ಅಧಿಕಾರಿಗಳಿಗೆ ಹಸ್ತಾಂತರಿಸುವ ಮೊದಲು ಸೈನಿಕನನ್ನು ಪ್ರಶ್ನಿಸಲಾಯಿತು.

‘ಕತ್ತಲೆ ಮತ್ತು ಸಂಕೀರ್ಣ ಭೂಪ್ರದೇಶದಿಂದಾಗಿ ದಾರಿತಪ್ಪಿ ಬಂದಿದ್ದ ಚೀನಾದ ಗಡಿ ಪಡೆಯ ಸೈನಿಕನನ್ನು ಚೀನಾ ಮತ್ತು ಭಾರತದ ನಡುವಿನ ಒಪ್ಪಂದದ ಪ್ರಕಾರ ಜನವರಿ 11ರ ಮಧ್ಯಾಹ್ನ ಚೀನಾದ ಗಡಿ ಪಡೆಗೆ ಹಸ್ತಾಂತರಿಸಲಾಗಿದೆ’ ಚೀನಾ
ಮಿಲಿಟರಿ ಆನ್‌ಲೈನ್ ಎಂದು ವರದಿ ಮಾಡಿದೆ.

ಕಳೆದ ವರ್ಷದ ಏಪ್ರಿಲ್, ಮೇ ತಿಂಗಳಲ್ಲಿ ಚೀನೀ ಸೈನಿಕರು ಮುಂಚೂಣಿ ನೆಲೆಗಳಲ್ಲಿ ಜಮಾಯಿಸಿದ ಕಾರಣ ಉಭಯ ದೇಶಗಳ ನಡುವೆ ಬಿಕ್ಕಟ್ಟು ಶುರುವಾಗಿತ್ತು. ಕಳೆದ ಎಂಟು ತಿಂಗಳುಗಳಲ್ಲಿ ರಾಜತಾಂತ್ರಿಕರು ಮತ್ತು ಹಿರಿಯ ಮಿಲಿಟರಿ ಕಮಾಂಡರ್‌ಗಳು ಹಲವಾರು ಸುತ್ತಿನ ಮಾತುಕತೆ ನಡೆಸಿದ್ದರೂ, ಬಿಕ್ಕಟ್ಟು ಪರಿಹಾರವಾಗಿಲ್ಲ.

ಭಾರತೀಯ ಸೇನಾ ಸಿಬ್ಬಂದಿ ಈ ಹಿಂದೆ ಅಕ್ಟೋಬರ್‌ನಲ್ಲಿ ಪೂರ್ವ ಲಡಾಖ್‌ನ ಡೆಮ್‌ಚಾಕ್‌ನಲ್ಲಿ ಮತ್ತೊಬ್ಬ ಚೀನಾದ ಸೈನಿಕನನ್ನು ಬಂಧಿಸಿದ್ದರು. ಬಳಿಕ ಸೈನಿಕನನ್ನು ಹಸ್ತಾಂತರಿಸಲಾಗಿತ್ತು.

ಚೀನಾ ಕೂಡ 2020ರ ಸೆಪ್ಟೆಂಬರ್‌ನಲ್ಲಿ ಈಶಾನ್ಯ ಭಾರತದ ಅರುಣಾಚಲ ಪ್ರದೇಶದ ಐವರು ಯುವಕರನ್ನು ಬಂಧಿಸಿತ್ತು. ಅವರು ಆಕಸ್ಮಿಕವಾಗಿ ಮೆಕ್‌ಮೋಹನ್ ರೇಖೆಯನ್ನು ದಾಟಿದ್ದರು. ಕೆಲವು ದಿನಗಳ ನಂತರ ಅವರನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿತ್ತು. ಉತ್ತರ ಸಿಕ್ಕಿಂನ ಚೀನಾ-ಭಾರತ ಗಡಿ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದ ಮೂವರು ನಾಗರಿಕರನ್ನು ಪತ್ತೆಹಚ್ಚಲು ಭಾರತೀಯ ಸೇನೆ ಈ ಹಿಂದೆ ಸಹಾಯ ಮಾಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು