ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಕ್ರಮದಿಂದ ಗಡಿಯಲ್ಲಿ ಶಾಂತಿ ಕದಡಿದೆ: ವಿ.ಮುರಳೀಧರನ್

Last Updated 4 ಫೆಬ್ರುವರಿ 2021, 11:52 IST
ಅಕ್ಷರ ಗಾತ್ರ

ನವದೆಹಲಿ: ಪೂರ್ವ ಲಡಾಖ್‌ನಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್ಎಸಿ) ಯಥಾಸ್ಥಿತಿ ಬದಲಿಸುವ ಚೀನಾ ಸೇನೆಯ ಯತ್ನವು ಗಡಿ ಭಾಗದಲ್ಲಿ ಶಾಂತಿ, ನೆಮ್ಮದಿಯನ್ನು ಗಂಭೀರ ಸ್ವರೂಪದಲ್ಲಿ ಕದಡಿದೆ ಎಂದು ಸರ್ಕಾರ ಹೇಳಿದೆ.

ರಾಜ್ಯಸಭೆಯಲ್ಲಿ ಗುರುವಾರ ಈ ಕುರಿತು ಹೇಳಿಕೆ ನೀಡಿದ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್ ಅವರು, ‘ಭಾರತೀಯ ಸೇನೆಯು ಇದಕ್ಕೆ ತಕ್ಕುದಾದ ಉತ್ತರವನ್ನು ನೀಡಿದೆ. ಯಥಾಸ್ಥಿತಿಯನ್ನು ಬದಲಿಸುವ ಯಾವುದೇ ಯತ್ನವನ್ನು ಸಹಿಸಲಾಗದು ಎಂದು ಚೀನಾಗೆ ಸ್ಪಷ್ಟ ಮಾತುಗಳಲ್ಲಿ ತಿಳಿಸಲಾಗಿದೆ’ ಎಂದು ಹೇಳಿದರು.

ಚೀನಾ ಜೊತೆಗಿನ ಗಡಿ ವಿವಾದ ಕುರಿತು ಲಿಖಿತ ಉತ್ತರ ನೀಡಿದ ಅವರು ಉಭಯ ಕಡೆಯಿಂದಲೂ ನ್ಯಾಯಯುತ, ಸಕಾರಾತ್ಮಕ, ಪರಸ್ಪರ ಒಪ್ಪಿತವಾಗುವ ಪರಿಹಾರವನ್ನು ಮಾತುಕತೆ ಮೂಲಕ ಕಂಡುಕೊಳ್ಳಲು ಯತ್ನಿಸಲಾಗಿದೆ ಎಂದರು.

ಅಲ್ಲದೆ, ಗಡಿ ಪ್ರಶ್ನೆ ಕುರಿತು ಬಾಕಿ ಇರುವ ವಿವಾದಗಳನ್ನು ಇತ್ಯರ್ಥಪಡಿಸಿಕೊಳ್ಳಲು, ಗಡಿ ಭಾಗದಲ್ಲಿ ಶಾಂತಿ ಪರಿಸ್ಥಿತಿ ಕಾಯ್ದುಕೊಳ್ಳಲು ಹಾಗೂ ದ್ವಿಪಕ್ಷೀಯ ಒಪ್ಪಂದದ ಆಧಾರದಲ್ಲಿ ಅಭಿವೃದ್ಧಿಗೆ ಒತ್ತುನೀಡಲು ಒಪ್ಪಲಾಗಿತ್ತು ಎಂದು ತಿಳಿಸಿದರು.

ಆದರೆ, 2020ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚೀನಾ ಸೇನೆಯು ಯಥಾಸ್ಥಿತಿ ಕಾಯ್ದುಕೊಳ್ಳುವ ನಿಯಮ ಉಲ್ಲಂಘಿಸಲು ಅನೇಕ ಬಾರಿ ಯತ್ನಿಸಿತು. ಈ ಯತ್ನಗಳಿಗೆ ಸಮರ್ಪಕವಾಗಿ ಉತ್ತರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಚೀನಾದ ಜೊತೆಗಿನ ಭಾರತದ ಬಾಂಧವ್ಯ ಸಂಕೀರ್ಣವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಉಭಯ ಕಡೆಯಿಂದಲೂ ತಮ್ಮ ಭಿನ್ನಾಭಿಪ್ರಾಯಗಳು ವಿವಾದವಾಗಿ ಪರಿಣಮಿಸಲು ಒತ್ತುನೀಡಬಾರದು ಎಂದು ಒಪ್ಪಲಾಗಿತ್ತು. ಆದರೆ, ಪೂರ್ವ ಲಡಾಖ್‌ ಭಾಗದಲ್ಲಿ ಚೀನಾ ಈ ನಿಯಮವನ್ನು ಉಲ್ಲಂಘಿಸಿತು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT