ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಸುಳುವಿಕೆ ಚೀನಾದ ವ್ಯವಸ್ಥಿತ ಕಾರ್ಯತಂತ್ರ: ನೂತನ ಅಧ್ಯಯನ ವರದಿ

Last Updated 10 ನವೆಂಬರ್ 2022, 20:08 IST
ಅಕ್ಷರ ಗಾತ್ರ

ನವದೆಹಲಿ:ಗಡಿಯಲ್ಲಿನ ಪಶ್ಚಿಮ ಮತ್ತು ಕೇಂದ್ರ ವಲಯದ ಪ್ರದೇಶಗಳ ಮೇಲೆ ಹತೋಟಿ ಸಾಧಿಸಲು ಚೀನಾವು ವ್ಯವಸ್ಥಿತ ಯೋಜನೆ ಮತ್ತು ಸಹಕಾರದಿಂದ ಒಳನುಸುಳುವಿಕೆ ಕಾರ್ಯದಲ್ಲಿ ತೊಡಗಿದೆ ಎಂದು ನೂತನ ಅಧ್ಯಯನ ವರದಿ ತಿಳಿಸಿದೆ.

ಗಡಿಯಲ್ಲಿ ಚೀನಾದ ಒಳನುಸುಳುವಿಕೆಯು ಆಕಸ್ಮಿಕವಲ್ಲ. ಅದು, ವ್ಯವಸ್ಥಿತ ಯೋಜನೆ ಎಂದು ಈ ಕುರಿತು ಜಂಟಿ ಅಧ್ಯಯನ ನಡೆಸಿದ ನಾರ್ಥ್‌ ವೆಸ್ಟರನ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮತ್ತು ನೆದರ್‌ಲ್ಯಾಂಡ್‌ ಯೂನಿವರ್ಸಿಟಿ, ರಕ್ಷಣಾ ಅಕಾಡೆಮಿಯ ಸದಸ್ಯರು ವರದಿಯಲ್ಲಿ ತಿಳಿಸಿದ್ದಾರೆ.

ಭಾರತದ ಗಡಿಯೊಳಗೆ ಚೀನಾದ ಒಳನುಸುಳುವಿಕೆ ಕುರಿತಂತೆ 2006 ರಿಂದ 2020ರವರೆಗಿನ ಅಂಕಿ ಅಂಶಗಳು ಮತ್ತು ಆ ನಂತರದಲ್ಲಿ ಬಳಸಲಾಗಿರುವ ಕಾರ್ಯವಿಧಾನ ಹಾಗೂ ಸಾಂಖ್ಯಿಕ ಸೂತ್ರಗಳನ್ನು ವಿಶ್ಲೇಷಿಸಿ ಅಧ್ಯಯನ ತಂಡವು ಈ ತೀರ್ಮಾನಕ್ಕೆ ಬಂದಿದೆ.

ಕಾರ್ಯವಿಧಾನದ ವಿಶ್ಲೇಷಣೆಯನ್ನು ಆಧರಿಸಿ ಗಡಿ ಭಾಗದ ಪಶ್ಚಿಮ ವಲಯದಲ್ಲಿ (ಅಕ್ಸಾಯ್‌ ಚಿನ್) ನಡೆದ ಅತಿಕ್ರಮಣವು ವ್ಯವಸ್ಥಿತ ಕಾರ್ಯತಂತ್ರ. ಈಗಿನ ಚೀನಾದ ಸರ್ಕಾರದ ಕಾರ್ಯತಂತ್ರ ಕುರಿತ ಇತರೆ ಅಧ್ಯಯನಗಳನ್ನು ಈ ವರದಿಗಾಗಿ ಅವಲೋಕಿಸಲಾಗಿದೆ ಎಂದು ‘ಪಿಎಲ್ಒಎಸ್‌ ಒನ್‌’ ಜರ್ನಲ್‌ನಲ್ಲಿ ಪ್ರಕಟವಾಗಿರುವ ವರದಿ ತಿಳಿಸಿದೆ.

ಭೌಗೋಳಿಕ ವಿಶ್ಲೇಷಣೆ ಆಧರಿಸಿ ಚೀನಾವು ನಿಯಮಿತವಾಗಿ ಒಳನುಸುಳಲು ಸಾಧ್ಯವಾಗುವ 13 ಆಯಕಟ್ಟಿನ ತಾಣಗಳನ್ನು ಗುರುತಿಸಿದ್ದಾರೆ. ಅವುಗಳೆಂದರೆ ಡೆಪ್ಸಂಗ್‌, ಗಾಲ್ವಾನ್, ಹಾಟ್‌ಸ್ಪ್ರಿಂಗ್‌, ಪಾಂಗಾಂಗ್, ಡೆಮ್‌ಚೊಕ್‌, ಚುಮರ್, ಬರಹೊಟಿ, ಸಿಕ್ಕಿಂ, ತವಾಂಗ್‌, ಹುಂಚೆ, ಬಿಷಿಂಗ್‌, ಅನಿನಿ, ಕಿಬಿತು. ಇವುಗಳಲ್ಲಿ ಮೊದಲ ಆರು ತಾಣಗಳು ಪಶ್ಚಿಮ ವಲಯದಲ್ಲಿ ಇದ್ದರೆ, ಉಳಿದ ಆರು ತಾಣಗಳು ಪೂರ್ವ ಹಾಗೂ ಬರಹೊಟಿ ತಾಣವು ಉತ್ತರಾಖಂಡ್‌ ವ್ಯಾಪ್ತಿಯಲ್ಲಿ ಬರಲಿದೆ.

ಈ ಆಯಕಟ್ಟಿನ ಸ್ಥಳಗಳಲ್ಲಿ ಬಿಗುವಿನ ವಾತಾವರಣವನ್ನು ಮೂಡಿಸುವುದರಿಂದ ಒಟ್ಟಾರೆ 3,488 ಕಿ.ಮೀ.ಉದ್ದವಿರುವ ವಾಸ್ತವ ಗಡಿರೇಖೆಯುದ್ದಕ್ಕೂ ಘರ್ಷಣೆಯ ಪರಿಸ್ಥಿತಿಯನ್ನು ಉಂಟು ಮಾಡಬಹುದು ಎಂಬುದು ಈ ಕಾರ್ಯತಂತ್ರದ ಭಾಗವಾಗಿತ್ತು.

ಒಳನುಸುಳುವಿಕೆ ಕುರಿತ ಹಲವು ಬೆಳವಣಿಗೆಗಳನ್ನು ಗಮನಿಸಿದರೆ, ಇದೊಂದು ವ್ಯವಸ್ಥಿತ ಕಾರ್ಯತಂತ್ರ ಎಂದು ಮನವರಿಕೆಯಾಗಲಿದೆ ಎಂದು ಅಧ್ಯಯನ ತಂಡದ ಹಿರಿಯ ಸದಸ್ಯ ವಿ.ಎಸ್‌.ಸುಬ್ರಹ್ಮಣಿಯನ್‌ ಅಭಿಪ್ರಾಯಪಡುತ್ತಾರೆ. ಇವರು ನಾರ್ಥ್‌ ವೆಸ್ಟರನ್‌ ಮ್ಯಾಕ್‌ಕಾರ್ಮಿಕ್‌ ಎಂಜಿನಿಯರಿಂಗ್ ಸ್ಕೂಲ್‌ನಲ್ಲಿ ಪ್ರೊಫೆಸರ್ ಆಗಿದ್ದಾರೆ.

ಈ ಒಳನುಸುಳುವಿಕೆಯು ಎರಡು ವಲಯಗಳಲ್ಲಿ ಅಂದರೆ ಅಕ್ಸಾಯ್‌ ಚಿನ್ ಮತ್ತು ಅರುಣಾಚಲ ಪ್ರದೇಶ ಭಾಗದಲ್ಲಿ ಹೆಚ್ಚು ಕಂಡುಬಂದವು ಎಂದು ಒಳನುಸುಳುವಿಕೆ ಕುರಿತ ಮಾಧ್ಯಮ ವರದಿಗಳನ್ನು ಆಧರಿಸಿ ಅಧ್ಯಯನ ವರದಿ ತಿಳಿಸಿದೆ.

15 ವರ್ಷಗಳ ಅಂಕಿ ಅಂಶದ ಅನುಸಾರ, ಅಧ್ಯಯನಕಾರರು ವಾರ್ಷಿಕ ಸರಾಸರಿ 7.8ರಷ್ಟು ಒಳನುಸುಳುವಿಕೆ ನಡೆದಿದೆ. ಆದರೆ, ಭಾರತ ಸರ್ಕಾರದ ಅಂದಾಜಿನ ಪ್ರಕಾರ, ಈ ಪ್ರಮಾಣ ವಾರ್ಷಿಕ 300ರಷ್ಟಿದೆ. 2019ರಲ್ಲಿ ಇದು ಗರಿಷ್ಠ 663ರಷ್ಟಿದ್ದರೆ, 2007ರಲ್ಲಿ ಕನಿಷ್ಠ ಅಂದರೆ 140 ಇತ್ತು.

ಗುರುತಿಸಲಾದ ಒಳನುಸುಳುವಿಕೆಯ ಆಯಕಟ್ಟಿನ ತಾಣಗಳು ಅಕ್ಸಾಯ್‌ ಚಿನ್ ಮತ್ತು ಅರುಣಾಚಲ ಪ್ರದೇಶದಲ್ಲಿ ಇದ್ದರೂ, ಅಧ್ಯಯನಕಾರರ ಪ್ರಕಾರ ಕಾರ್ಯತಂತ್ರವು ಅಕ್ಸಾಯ್‌ ಚಿನ್ ಭಾಗದಲ್ಲಿ ಸಹಯೋಗ ಯತ್ನದಿಂದ ನಡೆದಿದೆ ಎಂದು ಹೇಳಿದ್ದಾರೆ.

ಅಕ್ಸಾಯ್‌ ಚಿನ್ ಭಾಗದಲ್ಲಿ ಶಾಶ್ವತವಾಗಿ ನಿಯಂತ್ರಣ ಹೊಂದಲು ಚೀನಾ ಯತ್ನಿಸುತ್ತಿತ್ತು. ಇದಕ್ಕಾಗಿ ದೀರ್ಘ ಅವಧಿಗೆ ದೊಡ್ಡ ಪ್ರಮಾಣದಲ್ಲಿ ಸೇನೆ ನಿಯೋಜಿಸಲಾಗುತ್ತಿತ್ತು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT