ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ ಕೊನೆಗಾಣಿಸಲು ‘ಪಂಜಾಬ್‌ ಮಾದರಿ’ ಅನುಸರಿಸಲು ನಿರ್ಧಾರ

ಪಂಜಾಬ್‌ನಲ್ಲಿ ಖಲಿಸ್ತಾನಿ ಉಗ್ರರನ್ನು ಸಾರ್ವಜನಿಕವಾಗಿ ಕೊಂದಿದ್ದ ನಾಗರಿಕ ಗುಂಪುಗಳು
Last Updated 29 ಮಾರ್ಚ್ 2022, 16:10 IST
ಅಕ್ಷರ ಗಾತ್ರ

ಶ್ರೀನಗರ: ಮಧ್ಯ ಕಾಶ್ಮೀರದ ಬುಡ್ಗಾಂನಲ್ಲಿ ಇತ್ತೀಚೆಗೆ ಉಗ್ರರು ನಡೆಸಿದ ವಿಶೇಷ ಪೊಲೀಸ್‌ ಅಧಿಕಾರಿ (ಎಸ್‌ಪಿಒ) ಹಾಗೂ ಆತನ ಸಹೋದರನ ಹತ್ಯೆಯು ಕಣಿವೆಯ ಜನರನ್ನು ಬೆಚ್ಚಿಬೀಳಿಸಿದ್ದು, ಈ ಘಟನೆಯ ಹಿನ್ನೆಲೆಯಲ್ಲಿ ಭಯೋತ್ಪಾದನೆಯನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಅನಾಮಧೇಯ ನಾಗರಿಕ ಗುಂಪುಗಳು 1980ರ ‘ಪಂಜಾಬ್‌ ಮಾದರಿ’ಯನ್ನು ಅನುಸರಿಸಲು ತೀರ್ಮಾನಿಸಿವೆ ಎಂದು ವರದಿಯಾಗಿದೆ.

‘ಪಾಕಿಸ್ತಾನಿ ಪ್ರಾಯೋಜಿತ ಭಯೋತ್ಪಾದನೆಯಿಂದ ಬೇಸತ್ತಿರುವ ಕಾಶ್ಮೀರದ ಸಾಮಾನ್ಯ ಜನರು, 1980 ರ ದಶಕದಲ್ಲಿ ಪಂಜಾಬ್‌ನಲ್ಲಿ ಹಾಡಹಗಲೇ ಹಲವು ಖಲಿಸ್ತಾನಿ ಭಯೋತ್ಪಾದಕರನ್ನು ನಾಗರಿಕ ಗುಂಪುಗಳೇ ಹತ್ಯೆ ಮಾಡಿದ ಮಾದರಿಯನ್ನು ಅನುಸರಿಸಲು ನಿರ್ಧರಿಸಿದ್ದಾರೆ’ ಎಂದು ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ‘ಗ್ರೆಟರ್‌ ಕಾಶ್ಮೀರ್‌’ ಹಾಗೂ ‘ರೈಸಿಂಗ್‌ ಕಾಶ್ಮೀರ್‌’ ಸ್ಥಳೀಯ ಇಂಗ್ಲಿಷ್‌ ದೈನಿಕಗಳು ವರದಿ ಮಾಡಿವೆ.

ಈ ಸಂಬಂಧ ಜನರು ಕಾನೂನು ಕೈಗೆ ತೆಗೆದುಕೊಳ್ಳದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಭದ್ರತಾ ಪಡೆಗಳಿಗೆ ಸೂಚನೆ ನೀಡಲಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಜನರನ್ನು ಸಾರ್ವಜನಿಕವಾಗಿ ಹತ್ಯೆ ಮಾಡಿರುವ ಹಾಗೂ ಅಪರಾಧಿಗಳನ್ನು ಬಹಿರಂಗವಾಗಿ ಹೊಡೆದು ಕೊಂದ ಪ್ರಕರಣಗಳು ನಡೆದಿದ್ದು, ಇದೇ ರೀತಿಯ ಜಾಗೃತ ಗುಂಪುಗಳು ಇಲ್ಲಿ ಸಕ್ರಿಯಗೊಂಡಿರುವುದರಿಂದ ನಾವು ಆತಂಕಗೊಂಡಿದ್ದೇವೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಇತ್ತೀಚಿನ ದಿನಗಳಲ್ಲಿ ಉಗ್ರರು ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಒಳಗೊಂಡತೆ ನಾಗರಿಕರ ಹತ್ಯೆ ಹೆಚ್ಚಾಗಿರುವುದು ಕಾಶ್ಮೀರದ ಜನರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ನಾಗರಿಕರು ತಮ್ಮ ಪ್ರದೇಶ, ಪಟ್ಟಣ ಹಾಗೂ ನಗರಗಳಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಚಟುವಟಿಕೆಯನ್ನು ತಡೆಯಲು ಹಾಗೂ ಭಯೋತ್ಪಾದಕರನ್ನು ಕೊಲ್ಲುವ ಭರವಸೆ ನೀಡಿದ್ದಾರೆ’ ಎಂದು ಹಿರಿಯ ನಾಗರಿಕರು ತಿಳಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ಬೆಳವಣಿಗೆಯನ್ನು ಯಾವುದೇ ಅಧಿಕೃತ ಮೂಲಗಳು ಖಚಿತಪಡಿಸಿಲ್ಲ.

‘ನಾಗರಿಕರನ್ನು ಹತ್ಯೆ ಮಾಡುತ್ತಿರುವ ಬೆಳವಣಿಗೆಗಳ ಬಗ್ಗೆ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ಭಯೋತ್ಪಾದಕರು ಸುದ್ದಿಯಾಗುವ ಸಲುವಾಗಿ ನಾಗರಿಕರನ್ನು ಕೊಲ್ಲುತ್ತಿದ್ದಾರೆ. ಇದು ಕಣಿವೆಯ ಜನರಲ್ಲಿ ಭಯ ಹಾಗೂ ಆತಂಕ ಉಂಟು ಮಾಡಿದೆ. ಜನರು ಇದಕ್ಕೆ ಪ್ರತಿರೋಧ ಒಡ್ಡುವ ಸಾಧ್ಯತೆಗಳಿದ್ದು, ಪಂಜಾಬ್‌ನಲ್ಲಿ ಭಯೋತ್ಪಾದನೆಯನ್ನು ಕೊನೆಗೊಳಿಸಲು ಸ್ಥಳೀಯರೇ ಮುಂದಾದಂತೆ ಕಾಶ್ಮೀರದಲ್ಲೂ ಅದೇ ರೀತಿಯ ಘಟನೆಗಳು ಪುನರಾವರ್ತನೆ ಆಗುವ ಸಾಧ್ಯತೆಗಳಿವೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT