ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮೂರ್ತಿಗಳ ನೇಮಕ: ಹೆಸರುಗಳ ಶಿಫಾರಸು ಮಾಡಲು ಸಿಜೆಐ ಸೂಚನೆ

Last Updated 30 ಏಪ್ರಿಲ್ 2022, 1:13 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ಹೈಕೋರ್ಟ್‌ಗಳಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಗಳನ್ನು ಭರ್ತಿ ಮಾಡಲು ಎಲ್ಲ 25 ಹೈಕೋರ್ಟ್‌ಗಳ ಮುಖ್ಯನ್ಯಾಯಮೂರ್ತಿಗಳು ಶೀಘ್ರವಾಗಿ ಬಡ್ತಿ ನೀಡಬಹುದಾದ ನ್ಯಾಯಾಧೀಶರ ಹೆಸರಗಳನ್ನು ಕಳುಹಿಸಿ ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌.ವಿ. ರಮಣ ಶುಕ್ರವಾರ ಸೂಚಿಸಿದರು.

ಆರು ವರ್ಷಗಳ ನಂತರ ಇಲ್ಲಿ ನಡೆಯುತ್ತಿರುವ ಮುಖ್ಯ ನ್ಯಾಯಮೂರ್ತಿಗಳ 39ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ನ್ಯಾಯಾಲಯದ ಆಡಳಿತವನ್ನು ಬಾಧಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಿ ಚರ್ಚಿಸುವುದು ಈ ಸಮ್ಮೇಳನದ ಉದ್ದೇಶ ಮತ್ತು ಗುರಿಯಾಗಿದೆ’ ಎಂದರು.

‘ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತ ಸಮಸ್ಯೆಯನ್ನು ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲು ಬಯಸುತ್ತೇನೆ. ನಿಮ್ಮೊಡನೆ ಈ ಹಿಂದೆ ನಾನು ಮಾಡಿದ್ದ ಮೊದಲ ಸಂವಹನದಲ್ಲಿಯೂ ಈ ಕುರಿತು ಪ್ರಸ್ತಾಪಿಸಿ, ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ತಿಳಿಸಿದ್ದೆ’ ಎಂದು ಅವರು ಸ್ಮರಿಸಿದರು.

‘ಇನ್ನೂ ಖಾಲಿ ಇರುವ ಹಲವು ಹುದ್ದೆಗಳನ್ನು ಭರ್ತಿ ಮಾಡಲು,ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಹೆಸರುಗಳನ್ನು ಶೀಘ್ರವಾಗಿ ರವಾನಿಸಿ’ ಎಂದು ಅವರು ತಿಳಿಸಿದರು.

ನ್ಯಾಯಮೂರ್ತಿಗಳ ಹುದ್ದೆಗಳಿಗೆ ಅರ್ಹರ ಹೆಸರುಗಳನ್ನು ಶಿಫಾರಸು ಮಾಡುವಲ್ಲಿ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ತ್ವರಿತ ಪ್ರತಿಕ್ರಿಯೆಯನ್ನು ಶ್ಲಾಘಿಸಿದ ಸಿಜೆಐ, ‘ವಿವಿಧ ಹೈಕೋರ್ಟ್‌ಗಳಲ್ಲಿ ಖಾಲಿ ಇದ್ದ 126 ಹುದ್ದೆಗಳನ್ನು ವರ್ಷದೊಳಗೆ ಭರ್ತಿ ಮಾಡಿದ್ದೇವೆ. ನಮ್ಮೆಲ್ಲರಸಾಮೂಹಿಕ ಪ್ರಯತ್ನದಿಂದ ಇದು ಸಾಧ್ಯವಾಯಿತು’ ಎಂದರು.

‘ನಾವು ಇನ್ನೂ 50 ಹುದ್ದೆಗಳನ್ನು ಭರ್ತಿ ಮಾಡುವುದನ್ನು ನಿರೀಕ್ಷಿಸುತ್ತಿದ್ದೇವೆ. ನಿಮ್ಮೆಲ್ಲರ ಸಹಕಾರ ಮತ್ತು ಬದ್ಧತೆಯಿಂದ ಇದನ್ನೂ ಸಾಧಿಸಬಹುದು’ ಎಂದು ಅವರು ಹೇಳಿದರು.

ಒಂದು ವರ್ಷದಲ್ಲಿ, ತಮ್ಮ ನೇತೃತ್ವದ ಕೊಲಿಜಿಯಂನಿಂದ ಏಕಕಾಲದಲ್ಲಿ ಒಂಬತ್ತು ಹೊಸ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ಗೆ ನೇಮಕಮಾಡಲು ಸಾಧ್ಯವಾಗಿದೆ ಎಂಬುದನ್ನುಉಲ್ಲೇಖಿಸಿದ ಸಿಜೆಐ, ಹಾಗೆಯೇ ಹೈಕೋರ್ಟ್‌ಗಳಿಗೆ 10 ಹೊಸ ಮುಖ್ಯ ನ್ಯಾಯಮೂರ್ತಿಗಳನ್ನೂ ನೇಮಿಸಲೂ ಸಾಧ್ಯವಾಗಿದೆ. ಇದಕ್ಕೆ ಸಹಕಾರ ನೀಡಿದ ಸಹೋದ್ಯೋಗಿಗಳಿಗೆ ಮತ್ತು ಕೊಲಿಜಿಯಂಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

ಸಿ.ಜೆಗಳ ಸಮ್ಮೇಳನದಲ್ಲಿನ್ಯಾಯಾಲಯ ಸಂಕೀರ್ಣಗಳಲ್ಲಿ ಮಾಹಿತಿ ತಂತ್ರಜ್ಞಾನ ಮೂಲ ಸೌಕರ್ಯ ಮತ್ತು ಸಂಪರ್ಕವನ್ನು ಬಲಪಡಿಸುವ ಕುರಿತು,ಮಾನವ ಸಂಪನ್ಮೂಲ, ಸಿಬ್ಬಂದಿ ನೀತಿ ಮತ್ತು ಜಿಲ್ಲಾ ನ್ಯಾಯಾಲಯಗಳ ಅಗತ್ಯತೆಗಳ ಬಗ್ಗೆಯೂ ಚರ್ಚೆ ನಡೆಯಲಿದೆ.

ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ, ಅವರ ವೇತನಗಳು ಮತ್ತು ನಿವೃತ್ತಿ ನಂತರದ ಪ್ರಯೋಜನಗಳನ್ನು ಹೆಚ್ಚಿಸುವ ಪ್ರಮುಖ ವಿಷಯಗಳ ಬಗ್ಗೆಯೂ ಚರ್ಚೆಯಾಗಲಿದೆ ಎಂದು ಸಿಜೆಐ ರಮಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT