ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸರ್ಕಾರ ಉರುಳಿಸಲು ಪಿತೂರಿ; SIT ಆರೋಪ ಸಂಪೂರ್ಣ ಸುಳ್ಳು –ತೀಸ್ತಾ ಪರ ವಕೀಲ

Last Updated 19 ಜುಲೈ 2022, 4:28 IST
ಅಕ್ಷರ ಗಾತ್ರ

ಅಹಮದಾಬಾದ್‌:2002ರಲ್ಲಿ ನರೇಂದ್ರ ಮೋದಿ ನೇತೃತ್ವದಗುಜರಾತ್‌ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ಆದೇಶದಂತೆ ದೊಡ್ಡ ಪಿತೂರಿ ನಡೆದಿತ್ತು. ಅದರ ಭಾಗವಾಗಿ ತೀಸ್ತಾ ಸೆಟಲ್‌ವಾಡ್‌ ಅವರು ಹಣಕಾಸಿನ ನೆರವು ಪಡೆದಿದ್ದರು ಎಂದು ಗುಜರಾತ್‌ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಾಡಿದ್ದಆರೋಪಗಳನ್ನು ತೀಸ್ತಾ ಪರ ವಕೀಲರು ಅಲ್ಲಗಳೆದಿದ್ದಾರೆ.

ಅಹಮದಾಬಾದ್‌ನ ಸಾಬರಮತಿ ಕೇಂದ್ರ ಕಾರಾಗೃಹದಲ್ಲಿರುವ ಸೆಟಲ್‌ವಾಡ್ ಅವರ ಸಾಮಾನ್ಯ ಜಾಮೀನು ಅರ್ಜಿಯನ್ನು ವಿರೋಧಿಸಿದ್ದ ಎಸ್‌ಐಟಿ, ಅಹಮದಾಬಾದ್‌ನ ಸೆಷನ್ಸ್ ನ್ಯಾಯಾಲಯದ ಮುಂದೆಅಫಿಡವಿಟ್‌ ಸಲ್ಲಿಸಿತ್ತು. ಅದರಲ್ಲಿ, ‘ಜಾಮೀನು ಅರ್ಜಿದಾರರು ಹೇಗಾದರೂ ಮಾಡಿ ಗುಜರಾತ್‌ನ ಚುನಾಯಿತ ಸರ್ಕಾರವನ್ನು ಉರುಳಿಸುವ ಅಥವಾ ಅಸ್ಥಿರಗೊಳಿಸುವ ದೊಡ್ಡ ಪಿತೂರಿಯ ಭಾಗವಾಗಿ ಅಕ್ರಮವಾಗಿ ಹಣಕಾಸು ಮತ್ತು ಇತರ ಪ್ರಯೋಜನಗಳನ್ನು ಪಡೆದಿದ್ದಾರೆ’ ಎಂದು ಉಲ್ಲೇಖಿಸಲಾಗಿತ್ತು.

ಎಸ್‌ಐಟಿ ಅಫಿಡವಿಟ್‌ನಲ್ಲಿರುವ ಆರೋಪಗಳನ್ನುನಿರಾಕರಿಸಿರುವತೀಸ್ತಾ ಪರ ವಕೀಲ ಸೋಮನಾಥ್‌ ವಸ್ತಾ, 'ಹಣ ತೆಗೆದುಕೊಳ್ಳಲಾಗಿದೆ ಎಂದು ಎಸ್‌ಐಟಿ ಮಾಡಿರುವ ಆರೋಪ ಸಂಪೂರ್ಣ ಸುಳ್ಳು' ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ತೀಸ್ತಾ ಅವರು ಸಲ್ಲಿಸಿರುವಜಾಮೀನು ಅರ್ಜಿಯನ್ನು ಪ್ರಶ್ನಿಸಿರುವ ಎಸ್‌ಐಟಿ, ಜಾಮೀನು ಅರ್ಜಿಯಲ್ಲಿರುವ ದೋಷವೇನು ಎಂಬುದನ್ನು ಎತ್ತಿ ತೋರಿಸದೆ, ಸತ್ಯವಲ್ಲದ ವಿಚಾರಗಳನ್ನು ಹೇಳಿದೆ ಎಂದಿದ್ದಾರೆ.

2002ರ ಗೋಧ್ರಾ ಗಲಭೆಗೆ ಸಂಬಂಧಿಸಿದಂತೆ ಆಗಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಇತರ 60 ಜನರಿಗೆ ಸುಪ್ರೀಂ ಕೋರ್ಟ್ ನೇಮಿಸಿದ್ದ ಎಸ್‌ಐಟಿ ಕ್ಲೀನ್‌ ಚಿಟ್‌ ನೀಡಿತ್ತು. ಇದನ್ನು ಪ್ರಶ್ನಿಸಿ ಕಾಂಗ್ರೆಸ್‌ ಮಾಜಿ ಸಂಸದ, ದಿವಂಗತ ಅಹ್ಸಾನ್‌ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಅರ್ಜಿ ಸಲ್ಲಿಸಿದ್ದರು. ಅದನ್ನು ನ್ಯಾಯಾಲಯ ವಜಾ ಮಾಡಿತ್ತು.

ಅದಾದ ಬಳಿಕ,ಗಲಭೆ ಪ‍್ರಕರಣಗಳಲ್ಲಿ ‘ಮುಗ್ಧ’ ಜನರನ್ನು ಸಿಲುಕಿಸುವುದಕ್ಕಾಗಿ ಸಂಚು ರೂಪಿಸಿದ ಆರೋಪದಲ್ಲಿ ತೀಸ್ತಾ, ಮಾಜಿ ಐಪಿಎಸ್‌ ಅಧಿಕಾರಿಗಳಾದ ಆರ್‌.ಬಿ.ಶ್ರೀಕುಮಾರ್ ಮತ್ತು ಸಂಜೀವ್‌ ಭಟ್‌ ಅವರನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT