ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಯಮತ್ತೂರು: ‘ಅನ್ಯ’ ಹಣೆಪಟ್ಟಿಯೇ ಕಮಲ್‌ಗೆ ಸವಾಲು

Last Updated 31 ಮಾರ್ಚ್ 2021, 22:44 IST
ಅಕ್ಷರ ಗಾತ್ರ

ಕೊಯಮತ್ತೂರು: ತಮಿಳು ಸಿನಿಮಾ ತಾರೆ ಕಮಲ್‌ಹಾಸನ್‌ ಅವರು ತಮ್ಮ ಆರು ದಶಕಗಳ ಅಭಿನಯ ಜೀವನದಲ್ಲಿ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿದವರು. ತಮ್ಮ ಚೊಚ್ಚಲ ಸ್ಪರ್ಧೆಗೆ ಅವರು ಅತ್ಯಂತ ವೈವಿಧ್ಯಮಯ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ವ್ಯಾಪಾರ ಕೇಂದ್ರ, ಪ್ರತಿಷ್ಠಿತ ಬಡಾವಣೆಗಳೆಲ್ಲವೂ ಹೊಂದಿರುವ ದಕ್ಷಿಣ ಭಾರತದ ಮ್ಯಾಂಚೆಸ್ಟರ್‌ ಎಂದು ಕರೆಸಿಕೊಳ್ಳುವ ನಗರ ಕೊಯಮತ್ತೂರು. ಕಮಲ್‌ಹಾಸನ್‌ ಸ್ಪರ್ಧೆಯಿಂದಾಗಿ ಕೊಯಮತ್ತೂರು ದಕ್ಷಿಣ ಕ್ಷೇತ್ರದ ಚುನಾವಣೆಯು ಕಮಲ್‌ ಅವರ ಬ್ಲಾಕ್‌ ಬಸ್ಟರ್‌ ಸಿನಿಮಾ ರೀತಿಯಲ್ಲಿಯೇ ಇದೆ. ಅವರ ರಂಗ ಪ್ರವೇಶವು ಇಡೀ ಕ್ಷೇತ್ರದಲ್ಲಿ ತರಂಗಗಳನ್ನು ಎಬ್ಬಿಸಿದೆ. ಗೌಂಡರ್‌, ನಾಯ್ಕರ್‌, ಚೆಟ್ಟಿಯಾರ್‌, ಮುಕುಲತೋರ್‌, ಮುಸ್ಲಿಂ, ಕ್ರೈಸ್ತ ಮತ್ತು ಉತ್ತರ ಭಾರತೀಯ ಸಮುದಾಯದ ಜನರು ಇಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ. ಬಿಜೆಪಿಯ ವನತಿ ಶ್ರೀನಿವಾಸನ್‌ ಮತ್ತು ಕಾಂಗ್ರೆಸ್‌ನ ಮಯೂರ ಎಸ್‌. ಜಯಕುಮಾರ್‌ ಅವರೇ ಕಮಲ್‌ಗೆ ಇಲ್ಲಿ ಮುಖ್ಯ ಎದುರಾಳಿಗಳು.

ಎಐಎಡಿಎಂಕೆ ಮತ್ತು ಡಿಎಂಕೆಗೆ ತಮ್ಮ ಮಕ್ಕಳ್‌ ನೀಧಿ ಮಯ್ಯಂ (ಎಂಎನ್‌ಎಂ) ಪಕ್ಷಪರ್ಯಾಯ ಎಂದು ಕಮಲ್‌ ಹೇಳಿಕೊಳ್ಳುತ್ತಿದ್ದಾರೆ. ವಿರೋಧಾಭಾಸ ಎಂದರೆ ಅವರು ಈ ಎರಡೂ ಪಕ್ಷಗಳ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸುತ್ತಿಲ್ಲ. ಡಿಎಂಕೆ ಈ ಕ್ಷೇತ್ರವನ್ನು ಮಿತ್ರ ಪಕ್ಷ ಕಾಂಗ್ರೆಸ್‌ಗೆ ಮತ್ತು ಎಐಎಡಿಎಂಕೆ ಈ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟಿವೆ. ಎಎಂಎಂಕೆ ಮತ್ತು ಎನ್‌ಟಿಕೆಯ ಅಭ್ಯರ್ಥಿಗಳೂ ಕಣದಲ್ಲಿ ಇದ್ದಾರೆ.

ಕಳೆದ ಲೋಕಸಭಾ ಚುನಾವಣೆಯ ಹೊತ್ತಿಗೆ ಎಂಎನ್ಎಂ ಸ್ಥಾಪನೆಯಾಗಿ ಒಂದು ವರ್ಷವಷ್ಟೇ ಆಗಿತ್ತು. ಆಗ ನಡೆದ ಲೋಕಸಭಾ ಚುನಾವಣೆಯಲ್ಲಿ ಕೊಯಮತ್ತೂರು ಕ್ಷೇತ್ರದ ಎಂಎನ್‌ಎಂ ಅಭ್ಯರ್ಥಿ ಆರ್. ಮಹೇಂದ್ರನ್‌ ಅವರು ಇಲ್ಲಿ 1.45 ಲಕ್ಷ ಮತ ಪಡೆದಿದ್ದರು. ಕಮಲ್‌ ಅವರು ಇಲ್ಲಿಂದ ಸ್ಪರ್ಧಿಸಲು ಇದೂ ಒಂದು ಕಾರಣ. ತಮ್ಮ ಜನಪ್ರಿಯತೆಯ ಜತೆಗೆ, ಪಕ್ಕದ ಕ್ಷೇತ್ರ ಸಿಂಗಾನಲ್ಲೂರ್‌ನಲ್ಲಿ ಸ್ಪರ್ಧಿಸುತ್ತಿರುವ ಮಹೇಂದ್ರನ್‌ ಅವರು ಗೆಲುವಿಗೆ ನೆರವಾಗಬಹುದು ಎಂಬುದು ಕಮಲ್‌ ಲೆಕ್ಕಾಚಾರ. ಅಲ್ಪಸಂಖ್ಯಾತ ಸಮುದಾಯದ ಗಣನೀಯ ಪ್ರಮಾಣದ ಮತಗಳು ತಮಗೆ ಸಿಗಬಹುದು ಎಂದು ಎಂಎನ್‌ಎಂ ಮುಖಂಡರು ಭಾವಿಸಿದ್ದಾರೆ.

ನಗರ ಪ್ರದೇಶದ ಜನರು ಮತ್ತು ಯುವ ಮತದಾರರಿಗೆ ಕಮಲ್‌ ಬಗ್ಗೆ ಹೆಚ್ಚು ಒಲವು ಇದೆ. ಕಮಲ್‌ ಅವರು ತಮ್ಮನ್ನು ‘ಬದಲಾವಣೆಯ ಹರಿಕಾರ’ ಎಂದು ಬಿಂಬಿಸಿಕೊಂಡಿದ್ದಾರೆ. ಬದಲಾವಣೆ ಬೇಕಾಗಿದೆ ಎಂಬ ಮನೋಭಾವ ಯುವ ಮತದಾರರಲ್ಲಿಯೂ ಇದೆ.

‘ಕಮಲ್‌ ಅವರೇ ಉತ್ತಮ ಅಭ್ಯರ್ಥಿ. ಅವರು ಸಂವೇದನೆಯಿಂದ ಮಾತಾಡುತ್ತಾರೆ. ಅವರ ಚಿಂತನೆಗಳು ತಾಜಾ ಇವೆ. ಅವರು ನಮ್ಮ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ ಎಂಬುದೇ ನನ್ನಲ್ಲಿ ಪುಳಕ ಮೂಡಿಸಿದೆ’ ಎನ್ನುತ್ತಾರೆ 24 ವರ್ಷದ ಅಶ್ರಫ್‌.

ಪ‍್ರತಿಷ್ಠಿತ ಬಡಾವಣೆ ಆರ್‌.ಎಸ್‌. ಪುರಂನ ಅಂಗಡಿಯೊಂದರ ಮುಂದೆ ಕುಳಿತಿದ್ದ ಕೃಷ್ಣ ಕುಮಾರ್‌ ಅವರದ್ದೂ ಇದೇ ಅಭಿಪ್ರಾಯ. ಆದರೆ, 50 ವರ್ಷ ವಯಸ್ಸಿನ ಶ್ರೀನಿವಾಸನ್‌ ಇದನ್ನು ಒಪ್ಪುವುದಿಲ್ಲ. ‘ಕೊಯಮತ್ತೂರಿನ ಸ್ಥಳೀಯರೇ ಶಾಸಕರಾದರೆ ಉತ್ತಮ. ಸಿನಿಮಾ ತಾರೆಗಿಂತ ಸ್ಥಳೀಯ ರಾಜಕಾರಣಿಯನ್ನು ಸಂಪರ್ಕಿಸುವುದು ಸುಲಭ’ ಎಂಬುದು ಅವರ ವಾದ.

ವನತಿ ಮತ್ತು ಜಯಕುಮಾರ್‌ ಅವರಿಬ್ಬರೂ ಕಳೆದ ಬಾರಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದವರು. ಹಾಗಾಗಿ, ಮತದಾರರಿಗೆ ಪರಿಚಿತರು. ಈ ಇಬ್ಬರೂ ಜನರ ಕೈಗೆ ಸಿಗುತ್ತಾರೆ ಹಾಗೂ ನಗರದಲ್ಲಿಯೇ ನೆಲೆಸಿದ್ದಾರೆ ಎಂಬುದು ಇವರಿಗೆ ಇರುವ ಅನುಕೂಲ. ಆದರೆ, ಯಾರು ಗೆಲ್ಲಬಹುದು ಎಂದು ಊಹಿಸುವ ಕೆಲಸವನ್ನು ಯಾರೂ ಮಾಡುತ್ತಿಲ್ಲ.

ಎಐಎಡಿಎಂಕೆ ಮತ್ತು ಬಿಜೆಪಿಯ ಸಂಘಟನಾ ಬಲ ತಮಗೆ ನೆರವಾಗಬಹುದು ಎಂದು ವನತಿ ಭಾವಿಸಿದ್ದಾರೆ. ತಮ್ಮ ಗೌಂಡರ್‌ ಸಮುದಾಯದ ಜತೆಗೆ ನಿಲ್ಲಬಹುದು ಎಂಬ ನಿರೀಕ್ಷೆ ಅವರಲ್ಲಿದೆ. ಗಣನೀಯ ಸಂಖ್ಯೆಯಲ್ಲಿ ಇರುವ ಉತ್ತರ ಭಾರತೀಯರ ಮತವೂ ಸಿಗಬಹುದು ಎಂಬುದು ಅವರ ಲೆಕ್ಕಾಚಾರ.

ಡಿಎಂಕೆ ಜತೆಗಿನ ಮೈತ್ರಿ, ಅಲ್ಪಸಂಖ್ಯಾತರ ಮತಗಳ ಕ್ರೋಡೀಕರಣ ಈ ಬಾರಿ ತಮ್ಮ ಕೈ ಹಿಡಿಯಬಹುದು ಎಂಬುದು ಜಯಕುಮಾರ್‌ ವಿಶ್ವಾಸ. ಅಲ್ಪಸಂಖ್ಯಾತರು ಈ ಬಾರಿ ಕಮಲ್‌ಗೆ ಮತ ಹಾಕುತ್ತಾರೆ ಎಂಬುದು ಎಂಎನ್‌ಎಂ ವಾದ.

‘ಇದು ಅತ್ಯಂತ ವೈವಿಧ್ಯಮಯ ಮತ್ತು ಸಂಕೀರ್ಣ ಕ್ಷೇತ್ರ. ಏನಾಗಬಹುದು ಎಂದು ಊಹಿಸಲಾಗದು. ಯಾವ ಸಮುದಾಯದ ಮತವೂ ಇಡಿಯಾಗಿ ಒಂದು ಪಕ್ಷಕ್ಕೆ ಹೋಗುವುದಿಲ್ಲ. ಮುಸ್ಲಿಮರು ಕೂಡ ಒಂದೇ ಪಕ್ಷವನ್ನು ಬೆಂಬಲಿಸುತ್ತಿಲ್ಲ. 1998ರ ಸ್ಫೋಟದ ನಂತರ ಅವರು ಡಿಎಂಕೆಗೆ ಮತ ಹಾಕುವುದನ್ನೇ ನಿಲ್ಲಿಸಿದ್ದಾರೆ. ಆಗ ಬಂಧನಕ್ಕೆ ಒಳಗಾದ ಕೆಲವು ಯುವಕರು ಈಗಲೂ ಜೈಲಿನಲ್ಲಿದ್ದಾರೆ. ಮುಸ್ಲಿಮರು ಈ ಬಾರಿ ಹೇಗೆ ಮತ ಚಲಾಯಿಸುತ್ತಾರೆ ಎಂಬುದೂ ತಿಳಿಯದು’ ಎನ್ನುತ್ತಾರೆ ಈ ಕ್ಷೇತ್ರದ ಮತದಾರ ಸೆಂಥಿಲ್‌ನಾಥನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT