ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಸಾಮಾನ್ಯ ಜನರು ಭಾರತವನ್ನು ದ್ವೇಷಿಸುವುದಿಲ್ಲ: ಶರದ್‌ ಪವಾರ್‌

Last Updated 13 ಮೇ 2022, 2:32 IST
ಅಕ್ಷರ ಗಾತ್ರ

ಪುಣೆ: ‘ಪಾಕಿಸ್ತಾನದ ಸಾಮಾನ್ಯ ಜನರು ಭಾರತದ ದ್ವೇಷಿಗಳಲ್ಲ. ಆದರೆ ಅಲ್ಲಿ ಸೇನೆಯ ಸಹಾಯದಿಂದ ಅಧಿಕಾರವನ್ನು ಪಡೆಯುವವರು ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸುತ್ತಾರೆ’ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಗುರುವಾರ ಹೇಳಿದ್ದಾರೆ.

‘ಪಾಕಿಸ್ತಾನದಲ್ಲಿ ಯುವಕನೊಬ್ಬ ಆಡಳಿತ ವಹಿಸಿಕೊಂಡ. ಆ ದೇಶವನ್ನು ಒಂದು ದಿಕ್ಕು ತೋರಿಸಲು ಪ್ರಯತ್ನಿಸಿದ. ಆದರೆ, ಆತನನ್ನು ಅಧಿಕಾರದಿಂದ ಹೊರಗಟ್ಟಲಾಯಿತು’ ಎಂದು ಇಮ್ರಾನ್‌ ಖಾನ್‌ ಹೆಸರು ಪ್ರಸ್ತಾಪಿಸಿದೇ ಅವರು ಬೇಸರ ವ್ಯಕ್ತಪಡಿಸಿದರು.

ಮಹಾರಾಷ್ಟ್ರದ ಕೊಂಡ್ವಾ ಎಂಬಲ್ಲಿ ನಡೆದ ಈದ್-ಮಿಲನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೇಂದ್ರದ ಮಾಜಿ ಸಚಿವ ಪವಾರ್‌, ‘ಇಂದು ಜಗತ್ತಿನಲ್ಲಿ ವಿಭಿನ್ನ ಪರಿಸ್ಥಿತಿ ಇದೆ. ರಷ್ಯಾದಂಥ ಪ್ರಬಲ ರಾಷ್ಟ್ರವು ಉಕ್ರೇನ್‌ನಂಥ ಸಣ್ಣ ದೇಶದ ಮೇಲೆ ದಾಳಿ ಮಾಡುತ್ತಿದೆ. ಶ್ರೀಲಂಕಾದಲ್ಲಿ ಯುವಕರು ಬೀದಿಗಿಳಿದಿದ್ದಾರೆ, ಹೋರಾಡುತ್ತಿದ್ದಾರೆ. ಅಲ್ಲಿನ ನಾಯಕರು ಭೂಗತರಾಗಿದ್ದಾರೆ’ ಎಂದು ಪವಾರ್ ಹೇಳಿದರು.

‘ನಾವು, ನೀವು ಸಹೋದರರನ್ನು ಹೊಂದಿರುವ ನೆರೆಯ ಪಾಕಿಸ್ತಾನದಲ್ಲಿ ಯುವಕನೊಬ್ಬ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ. ದೇಶಕ್ಕೆ ಒಂದು ದಿಕ್ಕು ತೋರಿಸುವ ಪ್ರಯತ್ನ ಮಾಡಿದ. ಆದರೆ ಆತನನ್ನು ಅಧಿಕಾರದಿಂದ ಹೊರಹಾಕಲಾಯಿತು. ಈಗ ಅಲ್ಲಿ ಬೇರೆಯದ್ದೇ ಪರಿಸ್ಥಿತಿ ಕಾಣಿಸುತ್ತಿದೆ’ ಎಂದು ಪವಾರ್‌ ಅವರು ಇಮ್ರಾನ್ ಖಾನ್ ಕುರಿತು ಹೇಳಿದರು. ಪಾಕ್‌ ಪ್ರಧಾನಿ ಖಾನ್ (69) ಅವರನ್ನು ಇತ್ತೀಚೆಗೆ ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಿಗೊಳಿಸಲಾಗಿತ್ತು.

"ಲಾಹೋರ್, ಕರಾಚಿ... ಎಲ್ಲಿ ಹೋದರೂ, ನಮಗೆ ಆತ್ಮೀಯ ಸ್ವಾಗತ ದೊರೆಯುತ್ತಿತ್ತು. ನಾವು ನಮ್ಮ ಕ್ರಿಕೆಟ್ ತಂಡದೊಂದಿಗೆ ಪಂದ್ಯಕ್ಕಾಗಿ ಕರಾಚಿಗೆ ಹೋಗಿದ್ದೆವು. ಪಂದ್ಯದ ನಂತರ, ಆಟಗಾರರು ಸುತ್ತಲ ಸ್ಥಳಗಳನ್ನು ನೋಡುವ ಬಯಕೆಯನ್ನು ವ್ಯಕ್ತಪಡಿಸಿದರು. ನಾನು ಹೋಗಿದ್ದೆ. ರೆಸ್ಟೋರೆಂಟ್‌ಗೆ ಹೋಗಿ ಉಪಹಾರ ಸೇವಿಸಿದ ನಂತರ, ನಾವು ಬಿಲ್ ಕೊಡಲು ಹೋದಾಗ ರೆಸ್ಟೋರೆಂಟ್ ಮಾಲೀಕರು ಹಣ ತೆಗೆದುಕೊಳ್ಳಲಿಲ್ಲ. ನಾವು ಅವರ ಅತಿಥಿಗಳು ಎಂದು ಹೇಳಿದ್ದರು’ ಎಂದು ಪವಾರ್‌ ಮೆಲುಕು ಹಾಕಿದರು. ಪವಾರ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

‘ಪಾಕಿಸ್ತಾನದ ಸಾಮಾನ್ಯ ಜನರು ಭಾರತವನ್ನು ದ್ವೇಷಿಸುವುದಿಲ್ಲ. ಪಾಕಿಸ್ತಾನದ ಸೇನೆಯ ಸಹಾಯದಿಂದ ರಾಜಕೀಯ ಮಾಡಲು ಮತ್ತು ಅಧಿಕಾರವನ್ನು ಪಡೆಯಲು ಬಯಸುವವರು ಸಂಘರ್ಷದಲ್ಲಿ ತೊಡಗುತ್ತಾರೆ’ ಎಂದು ಅವರು ಹೇಳಿದರು.

‘ಸ್ವಾತಂತ್ರ್ಯ ಹೋರಾಟಗಾರರು ಒಗ್ಗಟ್ಟಿನಿಂದ ಇದ್ದುದರಿಂದಲೇ ಭಾರತೀಯರು ಬ್ರಿಟಿಷರ ಆಡಳಿತದಿಂದ ಮುಕ್ತಿ ಹೊಂದಲು ಸಾಧ್ಯವಾಯಿತು. ಇಂದು ಯಾರಾದರೂ ಸಮುದಾಯಗಳ ನಡುವೆ ದ್ವೇಷ ಹುಟ್ಟು ಹಾಕಲು ಯತ್ನಿಸುತ್ತಿದ್ದರೆ, ಎಲ್ಲರೂ ಒಗ್ಗೂಡಿ ಅಂಥವರಿಗೆ ತಕ್ಕ ಪಾಠ ಕಲಿಸಬೇಕಿದೆ’ ಎಂದು ಅವರು ಇದೇ ವೇಳೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT