ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಸಮುದಾಯ ಸಲೂನ್‌: ಬೇರಿಗೆ ರೋಗ, ರೆಂಬೆಗೆ ಮದ್ದು

Last Updated 15 ಸೆಪ್ಟೆಂಬರ್ 2020, 5:32 IST
ಅಕ್ಷರ ಗಾತ್ರ

ಕೇರಳದಲ್ಲಿ ಗ್ರಾಮ ಪಂಚಾಯಿತಿಯೊಂದು ‘ಸಮುದಾಯ ಕ್ಷೌರದ ಅಂಗಡಿ’ಯನ್ನು ತೆರೆದಿದೆ. ಗಾಂಧೀಜಿಗೆ ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯಿಂದಾಗಿ ಎದುರಾದ ‘ಕ್ಷೌರದ ಸಮಸ್ಯೆ’, ಇಲ್ಲಿ ಸ್ಪೃಶ್ಯ– ಅಸ್ಪೃಶ್ಯದ ನೆಲೆಯಲ್ಲಿ ಕಾಡಿದ ಕಾರಣಕ್ಕೆ ಪಂಚಾಯಿತಿ ಇಂತಹದೊಂದು ಪರಿಹಾರೋಪಾಯ ಹುಡುಕಿದೆ!

ಆ ಗ್ರಾಮದ ಹೆಸರು ವಟ್ಟವಡ. ಮುನ್ನಾರ್‌ನಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಹಳ್ಳಿ. ಇಡುಕ್ಕಿ ಜಿಲ್ಲೆಯ ವ್ಯಾಪ್ತಿಗೆ ಒಳಪಡುತ್ತದೆ. ಪರಿಶಿಷ್ಟ ಜಾತಿಗೆ ಸೇರಿದ ಚಕ್ಲಿಯಾ ಎಂಬ ಸಮುದಾಯದ ಜನರು ಜಾತಿ ಕಾರಣಕ್ಕೆ ತಾರತಮ್ಯ ಅನುಭವಿಸುತ್ತಿದ್ದರು. ಅದನ್ನು ನಿವಾರಿಸುವುದಕ್ಕಾಗಿ ಸ್ಥಳೀಯ ಆಡಳಿತ ಈ ಪ್ರಯೋಗ ನಡೆಸಿದೆ.

ಸಕಲ ಜಾತಿ–ಜನವರ್ಗದ ಬಳಕೆಗೆ ಕ್ಷೌರದ ಅಂಗಡಿಯೊಂದನ್ನು ಅನುವಾಗಿಸುವುದು ಈ ನಿರ್ಧಾರದ ಹಿಂದಿರುವ ಉದ್ದೇಶ. ಮೇಲ್ನೋಟಕ್ಕೆ ಇದು ಉದಾತ್ತವಾಗಿಯೂ ಜಾತಿ ಹೆಸರಿನಲ್ಲಿ ತಲೆತಲಾಂತರದಿಂದ ಬೇರೂರಿರುವ ಅನಿಷ್ಟವೊಂದರ ನಿರ್ಮೂಲನೆಗಾಗಿ ಇಟ್ಟ ದಿಟ್ಟ ಹೆಜ್ಜೆಯಂತೆಯೂ ಕಾಣುತ್ತದೆಯಾದರೂ ಈ ನಿವಾರಣೋಪಾಯದ ಒಡಲು ಬಗೆದರೆ ಟೊಳ್ಳು ಗೋಚರಿಸುತ್ತದೆ. ರೋಗ ತಗುಲಿರುವುದು ಬೇರಿಗೆ, ಔಷಧಿ ನೀಡಲು ಹೊರಟಿರುವುದು ರೆಂಬೆಗೆ!

ಈ ವಿದ್ಯಮಾನವನ್ನು ನಾವು ಎರಡು ನೆಲೆಗಳಲ್ಲಿ ಗ್ರಹಿಸಬೇಕಾಗುತ್ತದೆ. ಕೇರಳದಂತಹ ರಾಜ್ಯದಲ್ಲಿ ಒಂದು ಸಮುದಾಯದ ಜನರಿಗೆ ಕ್ಷೌರ ಮಾಡುವುದನ್ನು ಈ ಕಾಲಘಟ್ಟದಲ್ಲೂ ನಿರಾಕರಿಸಿರುವುದು ಏನನ್ನು ಸೂಚಿಸುತ್ತದೆ? ಒಂದು ರಾಜ್ಯವಾಗಿ ಕೇರಳಕ್ಕೆ ಇಲ್ಲಿ ವಿಶೇಷ ಒತ್ತು ನೀಡಿರುವುದು ಏಕೆಂದರೆ, ಹಲವು ಸಾಮಾಜಿಕ ಸೂಚ್ಯಂಕಗಳಲ್ಲಿ ಕೇರಳ, ‘ಮಾದರಿ’ ರಾಜ್ಯವೆಂದೇ ಪರಿಗಣಿತವಾಗಿದೆ. ಸಾಕ್ಷರತೆ ಇರಬಹುದು, ಶಿಶುಮರಣ ನಿಯಂತ್ರಣದ ಪ್ರಮಾಣ ಆಗಿರಬಹುದು, ಲಿಂಗಾನುಪಾತದ ವಿಷಯವಿರಬಹುದು. ಕೇರಳದ್ದೇ ಮೇಲ್ಪಂಕ್ತಿ. ಇಂತಹ ವಿಷಯಗಳಲ್ಲಿ ಈ ರಾಜ್ಯದ ಸಾಧನೆಯನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಬಹುದು. ಅಲ್ಲದೆ, ನಾರಾಯಣ ಗುರುಗಳಂತಹ ಮಹಾನ್‌ ಸಮಾಜ ಸುಧಾರಕರನ್ನು ಕಂಡ, ಎಡಪಂಥೀಯ ವಿಚಾರಧಾರೆಗೆ ಗಟ್ಟಿ ನೆಲೆ ಒದಗಿಸಿರುವ ರಾಜ್ಯವೂ ಹೌದು.

ಇಂತಹ ಒಂದು ರಾಜ್ಯದಲ್ಲಿ ಮುಟ್ಟಿಸಿಕೊಳ್ಳಲು ಯೋಗ್ಯರು, ಮುಟ್ಟಿಸಿಕೊಳ್ಳಬಾರದವರು ಎಂಬ ನೆಲೆಯಲ್ಲಿ ತಾರತಮ್ಯ ಇನ್ನೂ ಜೀವಂತವಾಗಿ ಇದೆ ಎನ್ನುವುದು ನಮ್ಮ ಸಾಮಾಜಿಕ ಚಲನೆಯ ದಿಕ್ಕನ್ನು ಮತ್ತು ಅದು ಪಡೆದಿರುವ ವೇಗವನ್ನು ತೋರಿಸುತ್ತದೆ. ಅಭಿವೃದ್ಧಿ ಎಂದು ನಾವು ಪರಿಭಾವಿಸಿರುವ ನೆಲೆಯ ಬೇರೆಲ್ಲ ಸಾಧನೆಗಳನ್ನು ಗೌಣವಾಗಿಸುತ್ತದೆ, ಅವುಗಳ ಮೆರುಗನ್ನು ಮಸುಕಾಗಿಸುತ್ತದೆ. ಸಾಮಾಜಿಕ ಸಂಬಂಧಗಳು ಹೊರನೋಟಕ್ಕೆ ಬದಲಾದಂತೆ ಕಂಡರೂ ವಾಸ್ತವದಲ್ಲಿ ಸ್ಥಗಿತ ಸ್ಥಿತಿಯಲ್ಲೇ ಬಿದ್ದು ಹೊರಳಾಡುತ್ತಿರುವುದರ ದ್ಯೋತಕವಾಗಿಯೂ ಈ ವಿದ್ಯಮಾನ ನಮ್ಮ ಕಣ್ಣೆದುರು ತೆರೆದುಕೊಳ್ಳುತ್ತದೆ.

ಈ ಸಮಸ್ಯೆಗೆ ಸೂಚಿತವಾದ ಪರಿಹಾರದ ಸ್ವರೂಪ ಎಂತಹುದು? ಜಾತಿಯ ಕಾರಣಕ್ಕೆ ತಾರತಮ್ಯ ಮಾಡುತ್ತಿರುವ ರೋಗಗ್ರಸ್ತ ಮನಸ್ಸುಗಳಿಗೆ ಮದ್ದು ಅರೆಯಬೇಕೋಅಥವಾ ನೋವುಂಡವರನ್ನೇ ಪ್ರತ್ಯೇಕಿಸಲು ಸಾಧನವಾಗಬಹುದಾದ ಪರಿಹಾರಸೂತ್ರ ರೂಪಿಸಬೇಕೋ? ಪಂಚಾಯಿತಿಯು ಸಮುದಾಯ ಕ್ಷೌರದ ಅಂಗಡಿಗಳನ್ನು ತೆರೆಯಬಹುದು. ಹಾಗೆ‌ ತೆರೆದಮಾತ್ರಕ್ಕೆ ಸಾಮಾಜಿಕವಾಗಿ, ರಾಜಕೀಯವಾಗಿ ಪ್ರಭಾವಿಯಾಗಿರುವ ಜಾತಿಗಳ ಜನ ಓಡಿಬಂದು, ಅಲ್ಲಿ ಕ್ಷೌರ ಮಾಡಿಸಿಕೊಳ್ಳುತ್ತಾರೆ ಎಂದು ಭಾವಿಸುವುದಾದರೂ ಹೇಗೆ? ಹಾಗೇನಾದರೂ ಭಾವಿಸಿದರೆ, ಅದು ಹುಂಬತನವಲ್ಲದೆ ಮತ್ತೇನೂ ಅಲ್ಲ.

ಎಲ್ಲರೊಳಗೆ ಒಂದಾಗುವಂತಹ ಮತ್ತು ಎಲ್ಲರನ್ನೂ ಒಳಗೊಳ್ಳುವಂತಹ ದೊಡ್ಡಗುಣ ಇದ್ದಿದ್ದೇ ಆದರೆ ಇಂತಹ ಸಣ್ಣತನವನ್ನು ಏಕೆ ತೋರಿಸುತ್ತಿದ್ದರು? ಶೋಷಕ ಮನಸ್ಸುಗಳನ್ನು ಪರಿವರ್ತಿಸುವ ಕಷ್ಟಕ್ಕಿಂತ ಸಮುದಾಯ ಸಲೂನ್‌ ಅಂಗಡಿ ತೆರೆಯುವುದೇ ಸುಲಭ ಅಂತ ಭಾವಿಸಿ, ಪಂಚಾಯಿತಿ ಪ್ರತಿನಿಧಿಗಳು ಬಹುಶಃ ಈ ಹಾದಿ ಹಿಡಿದಿರಬಹುದು. ಪರಿವರ್ತನೆಯೋ ಪ್ರತ್ಯೇಕತೆಯೋ ಎಂಬ ಪ್ರಶ್ನೆಗೆ ಪಂಚಾಯಿತಿಯು ಎರಡನೆಯದನ್ನು ಆಯ್ಕೆ ಮಾಡಿಕೊಂಡಿರುವಂತಿದೆ.

ಹಾಗಂತ ಈ ಪರಿಹಾರೋಪಾಯದಿಂದ ಪ್ರಯೋಜನವೇ ಇಲ್ಲ ಎಂದು ಹೇಳುವಂತಿಲ್ಲ. ಆ ನಿರ್ದಿಷ್ಟ ಗ್ರಾಮದ, ನಿರ್ದಿಷ್ಟ ಸಮುದಾಯಕ್ಕೆ ತಕ್ಷಣಕ್ಕೆ ಒಂದು ನಿರಾಳಭಾವ ಮೂಡಿಸುವಂತಹ ನಡೆ ಇದು. ಕ್ಷೌರ ಮಾಡಿಸಿಕೊಳ್ಳಲು 40 ಕಿ.ಮೀ. ದೂರದ ಮುನ್ನಾರ್‌ಗೆ ಹೋಗಿ ಬರುವಂತಹ ತಾಪತ್ರಯವನ್ನು ಇದು ನಿವಾರಿಸಬಹುದು ಎಂಬುದನ್ನು ಬಿಟ್ಟರೆ ದೂರಗಾಮಿ ಪ್ರಯೋಜನಗಳೇನಾದರೂ ಇದರಿಂದ ಸಿಗಬಹುದು ಎಂದು ನಿರೀಕ್ಷಿಸುವುದು ಅತಿಯಾದ ಆಶಾವಾದ ಆಗಬಹುದು.

ಜಾತಿ ಹೆಸರಿನಲ್ಲಿ, ಸಂಘಟನಾತ್ಮಕವಾಗಿ ನಡೆಯುವ ಮನುಷ್ಯವಿರೋಧಿ ಕೃತ್ಯಗಳು ವಟ್ಟವಡದಂತಹ ಒಂದು ಗ್ರಾಮಕ್ಕೆ ಸೀಮಿತವಲ್ಲ. ಕುಲದ ಹೆಸರಿನಲ್ಲಿ ಜಡ್ಡುಗಟ್ಟಿರುವ ಮನಸ್ಸುಗಳು ಎಲ್ಲ ಕಡೆಗೂ ಕಾಣಸಿಗುತ್ತವೆ. ಆ ಜಿಗುಟು, ಬೇರೆ ಬೇರೆ ರೂಪಗಳಲ್ಲಿ, ಬೇರೆ ಬೇರೆ ಸ್ತರಗಳಲ್ಲಿ ಈ ಆಧುನಿಕ ಕಾಲಘಟ್ಟದಲ್ಲೂ ವ್ಯಕ್ತವಾಗುತ್ತಲೇ ಇದೆ.ಸಾಮಾಜಿಕ ಅನಿಷ್ಟವೊಂದನ್ನು ಬರೀ ಕಾನೂನಿನ ಮೂಲಕ ನಿರ್ಮೂಲನೆ ಮಾಡಲಾಗದು ಎಂಬ ಮಾತನ್ನು ಇಂತಹ ಪ್ರಸಂಗಗಳು ಪುಷ್ಟೀಕರಿಸುತ್ತವೆ. ಕಟ್ಟಲೆಗಳ ಪರಿಣಾಮಕಾರಿ ಜಾರಿ ಜತೆಗೆ ಮನಃಪರಿವರ್ತನೆಯ ಪ್ರಯತ್ನಗಳೂ ಆಗಬೇಕು. ಅಂತಹ ಪ್ರಯತ್ನಗಳಿಗೆ ನಿರಂತರತೆಯೂ ಬೇಕು ಎಂಬುದನ್ನು ಇವು ತೋರಿಸಿಕೊಡುತ್ತವೆ. ಅನಿಷ್ಟಗಳ ನಿವಾರಣೆಗೆ ಆಂದೋಲನಗಳ ಅಗತ್ಯ ಈಗಲೂ ಇದೆ ಎಂಬುದಕ್ಕೆ ಇವು ಪುರಾವೆ ಒದಗಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT