ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಯೋಜನೆಯ ಸಮಗ್ರ ಯೋಜನಾ ವರದಿ; ಚರ್ಚೆಯೇ ನಡೆಸದ ಕಾವೇರಿ ಪ್ರಾಧಿಕಾರ

Last Updated 5 ಆಗಸ್ಟ್ 2022, 20:45 IST
ಅಕ್ಷರ ಗಾತ್ರ

ನವದೆಹಲಿ: ಮೇಕೆದಾಟು ಬಳಿ ಸಮತೋಲನ ಜಲಾಶಯ ನಿರ್ಮಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಸಲ್ಲಿಸಿರುವಸಮಗ್ರ ಯೋಜನಾ ವರದಿಯ (ಡಿಪಿಆರ್‌) ಕುರಿತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (ಸಿಡಬ್ಲ್ಯುಎಂಎ) ಇದುವರೆಗೆ ಚರ್ಚೆಯನ್ನೇ ನಡೆಸಿಲ್ಲ.

ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಗೆ ಮುನ್ನವೇ ಮೇಕೆದಾಟು ಯೋಜನೆಗೆ ಚಾಲನೆ ನೀಡಬೇಕು ಎಂಬ ಉದ್ದೇಶದಿಂದ ಕರ್ನಾಟಕ ಸರ್ಕಾರ ₹1 ಸಾವಿರ ಕೋಟಿ ಮೀಸಲಿಟ್ಟಿದೆ. ಆದರೆ, ಯೋಜನೆಯ ಡಿಪಿಆರ್‌ಗೆ ಒಪ್ಪಿಗೆ ಸಿಗುವುದು ವಿಳಂಬವಾಗುತ್ತಿರುವುದು ರಾಜ್ಯ ಸರ್ಕಾರದ ಆತಂಕಕ್ಕೆ ಕಾರಣವಾಗಿದೆ.

‘ಪ್ರಾಧಿಕಾರವು ಡಿಪಿಆರ್ ಬಗ್ಗೆ ಚರ್ಚೆ ನಡೆಸಬಹುದು. ಆದರೆ, ಯೋಜನೆ ಕುರಿತು ಅಧಿಕೃತವಾಗಿ ಯಾವುದೇ ಅಭಿಪ್ರಾಯಕ್ಕೆ ಬರುವಂತಿಲ್ಲ’ ಎಂದು ಸುಪ್ರೀಂಕೋರ್ಟ್‌ ಜುಲೈ 20ರಂದು ಸೂಚಿಸಿತ್ತು. ಆದರೆ, ಇತ್ತೀಚೆಗೆ ನಡೆದ ಪ್ರಾಧಿಕಾರದ 16ನೇ ಸಭೆಯಲ್ಲಿ ಸಹ ಡಿಪಿಆರ್ ಬಗ್ಗೆ ಚರ್ಚೆ ಆಗಿಲ್ಲ. ಮೇಕೆದಾಟು ಯೋಜನೆಯ ಬಗ್ಗೆ ಲೋಕಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಸಂಸದರು ಕೇಳಿರುವ ಪ್ರತ್ಯೇಕ ಪ್ರಶ್ನೆಗಳಿಗೆ ಕೇಂದ್ರ ಜಲಶಕ್ತಿ ಸಚಿವರು ಈ ಉತ್ತರ ನೀಡಿದ್ದಾರೆ.

ಮೇಕೆದಾಟು ಯೋಜನೆಯ ಕಾರ್ಯಸಾಧ್ಯತಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಕರ್ನಾಟಕ ಸರ್ಕಾರವು ಸಲ್ಲಿಸಿತ್ತು. ಕೆಲವು ಷರತ್ತುಗಳನ್ನು ವಿಧಿಸಿ ಜಲ ಆಯೋಗವು ಕಾರ್ಯಸಾಧ್ಯತಾ ವರದಿಗೆ ಒಪ್ಪಿಗೆ ನೀಡಿತ್ತು. ‘ಸುಪ್ರೀಂಕೋರ್ಟ್‌ ಮಾರ್ಪಾಡು ಮಾಡಿರುವ ಕಾವೇರಿ ಜಲ ವಿವಾದ ನ್ಯಾಯಾಧೀಕರಣದ ತೀರ್ಪಿನ ಅನ್ವಯವೇ ಈ ಯೋಜನೆ ಅನುಷ್ಠಾನ ಮಾಡಲಾಗುತ್ತದೆ ಎಂದು ಕಾರ್ಯಸಾಧ್ಯತಾ ವರದಿಯಲ್ಲಿ ತಿಳಿಸಲಾಗಿದೆ. ಯೋಜನೆಯ ಡಿಪಿಆರ್‌ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಒಪ್ಪಿಗೆಪಡೆಯಬೇಕು’ ಎಂದು ಜಲ ಆಯೋಗವು ಸೂಚಿಸಿತ್ತು.

ಜಲ ಆಯೋಗಕ್ಕೆ ರಾಜ್ಯ ಸರ್ಕಾರವು 2019ರ ಜನವರಿಯಲ್ಲಿ ಡಿಪಿಆರ್ ಸಲ್ಲಿಸಿತ್ತು. ಅದರ ಒಂದು ಪ್ರತಿಯನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ನೀಡಲಾಗಿತ್ತು.ಪ್ರಸ್ತಾವಿತ ಯೋಜನೆಗೆ ಸಂಬಂಧಿಸಿದ ಕಾರ್ಯಸೂಚಿ 2019ರ ಏಪ್ರಿಲ್‌ 25ರಂದು ನಡೆದ ಪ್ರಾಧಿಕಾರದ ಮೂರನೇ ಸಭೆಯಲ್ಲಿ ಮಂಡನೆಯಾಗಿತ್ತು. ಸಭೆಯಲ್ಲಿ ಕಾರ್ಯಸೂಚಿಯು ಚರ್ಚೆಗೆ ಬಂದಿರಲಿಲ್ಲ. ಆ ಬಳಿಕ ನಡೆದ ಹಲವು ಸಭೆಗಳ ಕಾರ್ಯಸೂಚಿ ಪಟ್ಟಿಯಲ್ಲಿ ಈ ವಿಷಯ ಇತ್ತು. ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ಒಮ್ಮತಕ್ಕೆ ಬಾರದ ಕಾರಣ ಪ್ರಾಧಿಕಾರದ ಸಭೆಯಲ್ಲಿ ಡಿಪಿಆರ್‌ ಕುರಿತು ಚರ್ಚೆ ನಡೆದಿಲ್ಲ ಎಂದು ಜಲಶಕ್ತಿ ಸಚಿವರು ಉತ್ತರ ನೀಡಿದ್ದಾರೆ.

ಈ ನಡುವೆ, ಯೋಜನೆಯ ಬಗ್ಗೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದಿಂದ ಜಲಶಕ್ತಿ ಸಚಿವಾಲಯವು ಅಭಿಪ್ರಾಯ ಪಡೆದು ಪ್ರಾಧಿಕಾರಕ್ಕೆ ನೀಡಿದೆ.

’ಕಾವೇರಿ ಜಲವಿವಾದ ನ್ಯಾಯಾಧಿಕರಣದ ಮಾರ್ಪಾಡಾಗಿರುವ ಅಂತಿಮ ತೀರ್ಪಿನ ಪ್ರಕಾರ, ಮೇಕೆದಾಟುಯೋಜನೆಯ ಬಗ್ಗೆ ಪ್ರಾಧಿಕಾರಕ್ಕೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇದೆ’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ತಿಳಿಸಿದ್ದಾರೆ. ಪ್ರಾಧಿಕಾರವು ಸಾಲಿಸಿಟರ್‌ ಜನರಲ್‌ ಅವರ ಅಭಿಪ್ರಾಯವನ್ನು ಕೇಳಿತ್ತು.ಪ್ರಾಧಿಕಾರವು ಯೋಜನೆಯ ಬಗ್ಗೆ ಚರ್ಚಿಸಿ ಕೇಂದ್ರ ಜಲ ಆಯೋಗಕ್ಕೆ ವರದಿ ಸಲ್ಲಿಸಬಹುದು ಎಂದು ಮೆಹ್ತಾ ಪ್ರತಿಪಾದಿಸಿದ್ದಾರೆ.

ಮೇಕೆದಾಟು ಯೋಜನೆಯ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಮುಂದಿನ ವಿಚಾರಣೆ ಆಗಸ್ಟ್ 10ಕ್ಕೆ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT