ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚುನಾವಣೋತ್ತರ ನಿರ್ವಹಣೆ‘: ಕಾಂಗ್ರೆಸ್‌ನಿಂದ ವೀಕ್ಷಕರ ರವಾನೆ

ಶಾಸಕರನ್ನು ಕೂಡಿಡುವ ಹೊಣೆ * ಅಧಿಕಾರ ಹಿಡಿಯಲು ತಂತ್ರಗಾರಿಕೆ
Last Updated 8 ಮಾರ್ಚ್ 2022, 16:06 IST
ಅಕ್ಷರ ಗಾತ್ರ

ನವದೆಹಲಿ: ಐದು ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಗಳ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ, ಕಾಂಗ್ರೆಸ್‌ ಪಕ್ಷವು ಉತ್ತರಾಖಂಡ, ಗೋವಾ, ಪಂಜಾಬ್‌ ಹಾಗೂ ಮಣಿಪುರಕ್ಕೆ ಹಿರಿಯ ನಾಯಕರನ್ನು ಕಳಿಸಿದೆ ಎಂದು ಮೂಲಗಳು ಮಂಗಳವಾರ ಹೇಳಿವೆ.

ಗೋವಾದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಇದ್ದು, ಚುನಾವಣೋತ್ತರ ಸಮೀಕ್ಷೆಗಳು ‘ಅತಂತ್ರ ವಿಧಾನಸಭೆ’ಯ ಭವಿಷ್ಯ ನುಡಿದಿರುವ ಕಾರಣ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗೋವಾಕ್ಕೆ ವಿಶೇಷ ವೀಕ್ಷಕರನ್ನಾಗಿ ನಿಯೋಜನೆ ಮಾಡಲಾಗಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಮುಕುಲ್‌ ವಾಸ್ನಿಕ್, ಛತ್ತೀಸಗಡ ಆರೋಗ್ಯ ಸಚಿವ ಟಿ.ಎಸ್‌.ಸಿಂಗ್ ದೇವ್ ಹಾಗೂ ವಿನ್ಸೆಂಟ್‌ ಪಾಲಾ ಅವರನ್ನು ಮಣಿಪುರಕ್ಕೆ ‘ಚುನಾವಣೋತ್ತರ ನಿರ್ವಹಣೆ’ಗಾಗಿ ನಿಯೋಜನೆ ಮಾಡಲಾಗಿದೆ ಎಂದೂ ಮೂಲಗಳು ಹೇಳಿವೆ.

ಪಂಜಾಬ್‌ಗೆ ವೀಕ್ಷಕರನ್ನಾಗಿ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕೆನ್ ಹಾಗೂ ವಕ್ತಾರ ಪವನ್‌ ಖೇರಾ ಅವರನ್ನು ನಿಯೋಜಿಸಲಾಗಿದೆ. ಖೇರಾ ಅವರು ಈಗಾಗಲೇ ಚಂಡೀಗಡ ತಲುಪಿದ್ದರೆ, ಮಾಕೆನ್‌ ಅವರು ಬುಧವಾರ ತೆರಳಲಿದ್ದಾರೆ ಎನ್ನಲಾಗಿದೆ.

ಉತ್ತರಾಖಂಡದಲ್ಲಿಯೂ ಅತಂತ್ರ ವಿಧಾನಸಭೆ ಪರಿಸ್ಥಿತಿ ನಿರ್ಮಾಣವಾದಲ್ಲಿ, ‘ಶಾಸಕರ ನಿರ್ವಹಣೆ’ಯ ಹೊಣೆಯನ್ನು ರಾಜ್ಯಸಭಾ ಸದಸ್ಯ ದೀಪಿಂದರ್ ಹೂಡಾ ಅವರಿಗೆ ವಹಿಸಲಾಗಿದೆ. ಈ ಕಾರ್ಯದಲ್ಲಿ ಅವರಿಗೆ ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್‌ ನೆರವಾಗಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

‘ಶಾಸಕರು ಬೇರೆ ಪಕ್ಷಗಳತ್ತ ಹೋಗದಂತೆ ತಡೆಯುವ ಸಲುವಾಗಿ ಅವರನ್ನು ಪಕ್ಷದ ಆಡಳಿತ ಇರುವ ರಾಜ್ಯಗಳಾದ ರಾಜಸ್ಥಾನ ಮತ್ತು ಛತ್ತೀಸಗಡಕ್ಕೆ ಸ್ಥಳಾಂತರಿಸಲು ಯೋಜನೆ ಸಿದ್ಧವಾಗಿದೆ. ಶಾಸಕರನ್ನು ರಾಜಸ್ಥಾನಕ್ಕೆ ಸ್ಥಳಾಂತರಗೊಳಿಸುವ ಸನ್ನಿವೇಶ ಎದುರಾದಲ್ಲಿ, ಕೈಗೊಳ್ಳಬೇಕಾದ ವ್ಯವಸ್ಥೆಯನ್ನು ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈಗಾಗಲೇ ಪರಿಶೀಲಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

ಗೋವಾಕ್ಕೆ ಡಿ.ಕೆ.ಶಿವಕುಮಾರ್

ಪಣಜಿ: ಸಂಕಷ್ಟ ಕಾಲದಲ್ಲಿ ನೆರವಿಗೆ ಬಂದು, ಪರಿಹಾರ ನೀಡಬಲ್ಲರು ಎಂದೇ ಪಕ್ಷದಲ್ಲಿ ಗುರುತಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್‌ ಪಕ್ಷದ ಗೋವಾದ ವಿಶೇಷ ವೀಕ್ಷಕರನ್ನಾಗಿ ನಿಯೋಜಿಸಿದೆ.

ಮತ್ತೊಬ್ಬ ಮುಖಂಡ ಸತೀಶ ಜಾರಕಿಹೊಳಿ ಅವರು ಸಹ ಗೋವಾಕ್ಕೆ ಆಗಮಿಸಿದ್ದು, ಮತ ಎಣಿಕೆಗೂ ಮುನ್ನ ಪಕ್ಷದ ಮಟ್ಟದಲ್ಲಿ ಮಾಡಿಕೊಳ್ಳಬೇಕಾದ ಸಿದ್ಧತೆಗಳ ಮೇಲ್ವಿಚಾರಣೆ ನಡೆಸಿದ್ದಾರೆ.

ಗುರುವಾರ (ಮಾರ್ಚ್ 10) ಮತ ಎಣಿಕೆ ಕಾರ್ಯ ನಡೆಯಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಸಮಬಲದ ಪೈಪೋಟಿ ಇರಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿರುವ ಹಿನ್ನೆಲೆಯಲ್ಲಿ ಶಿವಕುಮಾರ್‌ ಅವರ ನಿಯೋಜನೆಗೆ ಮಹತ್ವ ಬಂದಿದೆ.

ಮಿತ್ರ ಪಕ್ಷಗಳ ಮೂವರು ಸೇರಿದಂತೆ 37 ಅಭ್ಯರ್ಥಿಗಳು ಬೇರೆ ಪಕ್ಷಗಳತ್ತ ಮುಖಮಾಡದಂತೆ, ಅವರು ಒಂದೆಡೆ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಶಿವಕುಮಾರ್‌ ಅವರಿಗೆ ನೀಡಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

‘2017ರಲ್ಲಿ ಕಾಂಗ್ರೆಸ್‌ನ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿತ್ತು. ಈ ಬಾರಿ ಅಂಥ ಸನ್ನಿವೇಶ ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಪಕ್ಷ ಮುಂದಾಗಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT