ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆ ವೇಳೆ ಪೊಲೀಸ್‌ ಅಧಿಕಾರಿ ಕೊರಳ ಪಟ್ಟಿ ಹಿಡಿದ ಕಾಂಗ್ರೆಸ್ ನಾಯಕಿ ರೇಣುಕಾ

Last Updated 16 ಜೂನ್ 2022, 16:34 IST
ಅಕ್ಷರ ಗಾತ್ರ

ಹೈದರಾಬಾದ್‌:ನ್ಯಾಷನಲ್ ಹೆರಾಲ್ಡ್ ಪ್ರಕರಣದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸಿರುವುದನ್ನು ವಿರೋಧಿಸಿ ಗುರುವಾರ ಹೈದರಾಬಾದ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಕೇಂದ್ರದ ಮಾಜಿ ಸಚಿವೆ, ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಅವರು ಪೊಲೀಸ್ ಅಧಿಕಾರಿಯ ಕತ್ತಿನ ಪಟ್ಟಿ ಹಿಡಿದಿದ್ದಾರೆ ಎಂದು ಆರೋಪಿಸಲಾಗಿದೆ.

ರಾಜಭವನಕ್ಕೆ ಹೋಗದಂತೆ ತಡೆಯಲು ಪ್ರಯತ್ನಿಸುತ್ತಿದ್ದ ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದ ರೇಣುಕಾ ಚೌದರಿ, ಅಧಿಕಾರಿಯ ಕತ್ತಿನ ಪಟ್ಟಿ ಹಿಡಿದಿದ್ದಾರೆ. ನಂತರ, ಮಹಿಳಾ ಪೊಲೀಸರು ಅವರನ್ನು ಬೇರೆಡೆಗೆ ಕರೆದೊಯ್ದಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಘಟನೆಗೆ ಸಂಬಂಧಿಸಿದಂತೆ ರೇಣುಕಾ ಚೌಧರಿ ಮತ್ತು ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ವಿರುದ್ಧ ಐಪಿಸಿ ಸೆಕ್ಷನ್ 151, 140, 147, 149, 341, 353 (ಸಾವರ್ಜನಿಕ ಸೇವೆಯಲ್ಲಿರುವ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ, ಹಲ್ಲೆ ನಡೆಸಿದ ಆರೋಪದ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪಂಜಾಗುಟ್ಟಾ ಠಾಣೆಯ ಇನ್ಸ್‌ಪೆಕ್ಟರ್ ನಿರಂಜನ್ ರೆಡ್ಡಿ ತಿಳಿಸಿದ್ದಾರೆ.

‘ನಾನು ಹಲ್ಲೆ ಮಾಡಿಲ್ಲ. ನನ್ನ ವಿರುದ್ಧ ವಿನಾ ಕಾರಣ ಪ್ರಕರಣ ದಾಖಲಿಸಲಾಗಿದೆ. ಆ ಪ್ರಕರಣವನ್ನು ನಾನು ಎದುರಿಸುತ್ತೇನೆ. ಅವರ (ಪೊಲೀಸ್‌ ಅಧಿಕಾರಿ) ವಿರುದ್ಧ ನನಗ್ಯಾವ ದ್ವೇಷವೇನೂ ಇಲ್ಲ. ಅವರೂ ನನಗೆ ಏನು ಮಾಡಿಲ್ಲ. ಪ್ರತಿಭಟನೆ ವೇಳೆ ಹಿಂದಿನಿಂದ ತಳ್ಳುತ್ತಿದ್ದರು. ಆಯ ತಪ್ಪುತ್ತಿದ್ದ ನಾನು ಕೊರಳ ಪಟ್ಟಿ ಹಿಡಿಯಬೇಕಾಯಿತು’ ಎಂದು ಚೌದರಿ ಹೇಳಿದ್ದಾರೆ.

‘ಅವರ ಬಳಿ ಕ್ಷಮೆಯಾಚಿಸುತ್ತೇನೆ. ಆದರೆ ನಮ್ಮನ್ನು ಅಮಾನುಷವಾಗಿ ನಡೆಸಿಕೊಂಡಿದ್ದಕ್ಕಾಗಿ ಪೊಲೀಸರು ನನ್ನಲ್ಲಿ ಕ್ಷಮೆಯಾಚಿಸುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ. ನಮ್ಮ ಸುತ್ತ ಇಷ್ಟು ಜನ ಪೊಲೀಸರಿದಿದ್ದು ಏಕೆ?’ ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT