ಶುಕ್ರವಾರ, ಸೆಪ್ಟೆಂಬರ್ 24, 2021
23 °C

ಈ 7 ವರ್ಷಗಳಲ್ಲಿ ಕಾಂಗ್ರೆಸ್‌ ತೊರೆದವರೆಷ್ಟು, ಬಿಜೆಪಿ ಸೇರಿದವರೆಷ್ಟು?

ಪಿಟಿಐ Updated:

ಅಕ್ಷರ ಗಾತ್ರ : | |

ದೆಹಲಿ: ಕಳೆದ ಏಳು ವರ್ಷಗಳಲ್ಲಿ ಕಾಂಗ್ರೆಸ್ ತೊರೆಯುವವರ ಸಂಖ್ಯೆ ಹೆಚ್ಚಾಗಿದ್ದು, ಗಣನೀಯ ಪ್ರಮಾಣದ ಅಭ್ಯರ್ಥಿಗಳು, ಸಂಸದರು, ಶಾಸಕರನ್ನು ಕಳೆದುಕೊಂಡಿದೆ.

ಗುರುವಾರ ಬಿಡುಗಡೆಯಾದ ವರದಿಯೊಂದರ ಪ್ರಕಾರ 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಅತಿ ಹೆಚ್ಚು ನಾಯಕರನ್ನು ಗಳಿಸಿಕೊಂಡಿದೆ. 

2014-2021ರ ನಡುವೆ ನಡೆದ ಚುನಾವಣೆಗಳಲ್ಲಿ ಒಟ್ಟು 222 ಅಭ್ಯರ್ಥಿಗಳು ಕಾಂಗ್ರೆಸ್ ತೊರೆದು ಇತರ ಪಕ್ಷಗಳನ್ನು ಸೇರಿದ್ದಾರೆ. ಈ ಅವಧಿಯಲ್ಲಿ 177 ಸಂಸದರು ಮತ್ತು ಶಾಸಕರು ಪಕ್ಷವನ್ನು ತೊರೆದಿದ್ದಾರೆ ಎಂದು ರಾಷ್ಟ್ರೀಯ ಚುನಾವಣಾ, ರಾಜಕೀಯ ಅಧ್ಯಯನ ಸಂಸ್ಥೆ ‘ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫರ್ಮ್‌ – ಎಡಿಆರ್‌’ ತಿಳಿಸಿದೆ.  

2014ರಿಂದ ಈವರೆಗಿನ ಚುನಾವಣೆಗಳಲ್ಲಿ 111 ಅಭ್ಯರ್ಥಿಗಳು ಬಿಜೆಪಿ ತೊರೆದಿದ್ದಾರೆ. 33 ಸಂಸದರು ಮತ್ತು ಶಾಸಕರನ್ನು ಬಿಜೆಪಿ ಕಳೆದುಕೊಂಡಿದೆ. ಆದರೂ, 253 ಅಭ್ಯರ್ಥಿಗಳು ಮತ್ತು 173 ಸಂಸದರು ಮತ್ತು ಶಾಸಕರು ಬಿಜೆಪಿಯನ್ನು ಸೇರಿದ್ದಾರೆ ಎಂದು ಎಡಿಆರ್‌ ವರದಿಯಲ್ಲಿ ಹೇಳಲಾಗಿದೆ. ಈ ಮೂಲಕ ಈ ಏಳು ವರ್ಷಗಳಲ್ಲಿ ಬಿಜೆಪಿ ಅತಿ ಹೆಚ್ಚು ನಾಯಕರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಸಫಲವಾಗಿದೆ.  

ಕಳೆದ ಏಳು ವರ್ಷಗಳಲ್ಲಿ 399 ನಾಯಕರು ಕಾಂಗ್ರೆಸ್‌ ಪಕ್ಷವನ್ನು ತೊರೆದಿದ್ದರೂ,  115 ಅಭ್ಯರ್ಥಿಗಳು, 61 ಸಂಸದರು ಮತ್ತು ಶಾಸಕರು ಇತರ ಪಕ್ಷಗಳಿಂದ ಕಾಂಗ್ರೆಸ್‌ಗೆ ಬಂದಿದ್ದಾರೆ.

ಎಡಿಆರ್ ವರದಿಯು, 1133 ಅಭ್ಯರ್ಥಿಗಳು ಮತ್ತು 500 ಸಂಸದರು–ಶಾಸಕರ ಚುನಾವಣಾ ಅಫಿಡವಿಟ್‌ಗಳ ವಿಶ್ಲೇಷಣೆಯನ್ನು ಆಧರಿಸಿದೆ. 2014ರಿಂದ ಈ ವರೆಗೆ ಲೋಕಸಭೆ ಮತ್ತು ವಿಧಾನಸಭೆಗಳಿಗೆ ನಡೆದ ಚುನಾವಣೆಗಳನ್ನು ಇದಕ್ಕಾಗಿ ಅಧ್ಯಯನ ಮಾಡಿದೆ.  

ಕಾಂಗ್ರೆಸ್ ನಂತರ, ಮಾಯಾವತಿಯವರ ಬಹುಜನ ಸಮಾಜ ಪಕ್ಷವನ್ನು (ಬಿಎಸ್ಪಿ) ಗಣನೀಯ ಸಂಖ್ಯೆಯ ನಾಯಕರು ತೊರೆದಿದ್ದಾರೆ.   

2014ರಿಂದ ಈ ವರೆಗೆ 153 ಅಭ್ಯರ್ಥಿಗಳು ಮತ್ತು 20 ಸಂಸದ–ಶಾಸಕರು ಇತರೆ ಪಕ್ಷ ಸೇರಲೆಂದೇ ಬಿಎಸ್‌ಪಿ ತೊರೆದಿದ್ದಾರೆ. 

ಆದಾಗ್ಯೂ, ಬಿಎಸ್‌ಪಿ 65 ಅಭ್ಯರ್ಥಿಗಳು ಮತ್ತು 12 ಸಂಸದ–ಶಾಸಕರನ್ನು ತನ್ನ ತೆಕ್ಕೆ ತೆಗೆದುಕೊಂಡಿದ್ದಾರೆ. 

ಇನ್ನು ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) 31 ಅಭ್ಯರ್ಥಿಗಳು, 26 ಸಂಸದ– ಶಾಸಕರು ಕಳೆದ ಏಳು ವರ್ಷಗಳಲ್ಲಿ ಬೇರೆ ಪಕ್ಷವನ್ನು ಸೇರಿದ್ದಾರೆ. ಒಟ್ಟು 23 ಅಭ್ಯರ್ಥಿಗಳು ಮತ್ತು 31 ಸಂಸದ–ಶಾಸಕರು ಈ ಅವಧಿಯಲ್ಲಿ ಪಕ್ಷ ಸೇರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು