ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ: 9000ಕ್ಕೂ ಹೆಚ್ಚು ಮತದಾರರು- ಮಿಸ್ತ್ರಿ

Last Updated 15 ಸೆಪ್ಟೆಂಬರ್ 2022, 12:52 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯು ಮುಕ್ತವಾಗಿದ್ದು, ಇದರಲ್ಲಿ ಗೋಪ್ಯವಾಗಿ ಇಡುವಂತಹದು ಏನೂ ಇಲ್ಲ ಎಂದು ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ, ಹಿರಿಯ ನಾಯಕ ಮಧುಸೂದನ್ ಮಿಸ್ತ್ರಿ ಹೇಳಿದರು.

ರಾಜ್ಯ ಘಟಕಗಳಿಗೆ ಅಧ್ಯಕ್ಷರ ನೇಮಕ ಮತ್ತು ಎಐಸಿಸಿಗೆ ಆಹ್ವಾನಿತರನ್ನು ನೇಮಿಸುವುದನ್ನು ಅಧ್ಯಕ್ಷರ ವಿವೇಚನೆಗೆ ಬಿಡುವ ಕುರಿತು ಪ್ರದೇಶ ಕಾಂಗ್ರೆಸ್‌ ಸಮಿತಿಗಳು ನಿರ್ಣಯ ಕೈಗೊಳ್ಳಲಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಅಥವಾ ರಾಜ್ಯಗಳಿಂದ ಎಐಸಿಸಿಗೆ 10 ಮಂದಿ ಆಹ್ವಾನಿತರನ್ನು ಆಯ್ಕೆ ಮಾಡಲು ಬಯಸುವವರು ಮತದಾರರ ಕುರಿತ ಮಾಹಿತಿಗೆ ಪ್ರಾಧಿಕಾರ ಪ್ರಕಟಿಸಿರುವ ಪಟ್ಟಿಯನ್ನು ಗಮನಿಸಬಹುದಾಗಿದೆ’ ಎಂದು ತಿಳಿಸಿದರು.

9000ಕ್ಕೂ ಅಧಿಕ ಮತದಾರರಿಗೆ ಕ್ಯೂಆರ್‌ ಕೋಡ್‌ ಒಳಗೊಂಡ ಗುರುತಿನ ಚೀಟಿಯನ್ನು ಈಗಾಗಲೇ ನೀಡಲಾಗಿದೆ. ಎಲ್ಲ ಮತದಾರರ ಪಟ್ಟಿಯನ್ನು ಎಐಸಿಸಿ ಮುಖ್ಯ ಕಚೇರಿಯಲ್ಲಿಯೂ ಸೆ.20ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದರು.

‘ಚುನಾವಣೆ ಸಿದ್ಧತೆ ಕುರಿತು ರಾಜ್ಯಗಳಲ್ಲಿನ ಪಕ್ಷದ ಚುನಾವಣಾಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು, ಪರಿಸ್ಥಿತಿ ಅವಲೋಕಿಸಲಾಗಿದೆ’ ಎಂದರು.

ಕಾಂಗ್ರೆಸ್‌ ಪಕ್ಷದ ಕಾರ್ಯಕಾರಿ ಸಮಿತಿಯ 23 ಸದಸ್ಯರ ಪೈಕಿ 12 ಜನರು ಚುನಾಯಿತರಾದರೆ, 11 ಮಂದಿ ನಾಮನಿರ್ದೇಶನಗೊಳ್ಳುತ್ತಾರೆ. 12ಕ್ಕೂ ಹೆಚ್ಚು ಮಂದಿ ಸ್ಪರ್ಧೆಯಲ್ಲಿದ್ದರೆ ಚುನಾವಣೆ ನಡೆಯಬೇಕಾಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ಕುರಿತಂತೆ ಸೆಪ್ಟೆಂಬರ್‌ 22ರಂದು ಅಧಿಸೂಚನೆ ಹೊರಬೀಳಲಿದೆ. ಆ ವೇಳೆಗೆ ಎಲ್ಲ ಪ್ರದೇಶ ಕಾಂಗ್ರೆಸ್‌ ಘಟಕಗಳ ಅಧ್ಯಕ್ಷರ ಆಯ್ಕೆ ಪೂರ್ಣಗೊಳ್ಳಲಿದೆ. ಅಗತ್ಯಬಿದ್ದರೆ ಅಕ್ಟೋಬರ್‌ 17ರಂದು ಚುನಾವಣೆ ನಡೆಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT