ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವಿಬ್ಬರು, ನಮಗಿಬ್ಬರು ಸರ್ಕಾರ: ಕೇಂದ್ರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ

ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ
Last Updated 11 ಫೆಬ್ರುವರಿ 2021, 16:42 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ‘ನಾವಿಬ್ಬರು ನಮಗಿಬ್ಬರು’ ಎಂಬ ತತ್ವದಡಿ ಸರ್ಕಾರವನ್ನು ನಡೆಸುತ್ತಿದ್ದು, ಬಂಡವಾಳಶಾಹಿಗಳಿಗೆ ಶರಣಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಗುರುವಾರ ವಾಗ್ದಾಳಿ ನಡೆಸಿದರು.

‘ನಾವಿಬ್ಬರು ನಮಗಿಬ್ಬರು ಎಂಬ ಘೋಷಣೆ ಎಲ್ಲರಿಗೂ ಗೊತ್ತು. ಆದರೆ ಮೋದಿ ಅವರು ಈ ಘೋಷಣೆಗೆ ಹೊಸ ಅರ್ಥ ಕಲ್ಪಿಸಿದ್ದಾರೆ. ಈ ದೇಶವು ಒಟ್ಟು ನಾಲ್ವರು ವ್ಯಕ್ತಿಗಳಿಂದ ನಡೆಯುತ್ತಿದೆ’ ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಹೇಳಿದರು.

ಆ ನಾಲ್ವರ ಹೆಸರು ಹೇಳಿ ಎಂದು ಸದಸ್ಯರು ಒತ್ತಾಯಿಸಿದಾಗ, ಎಲ್ಲರಿಗೂ ಅವರು ಗೊತ್ತು ಎಂದಷ್ಟೇ ರಾಹುಲ್ ಹೇಳಿದರು.

‘ನೋಟು ರದ್ದತಿ, ಜಿಎಸ್‌ಟಿ, ಕೋವಿಡ್, ಲಾಕ್‌ಡೌನ್ ವೇಳೆ ಕಾರ್ಮಿಕರು ಪಟ್ಟ ಪಾಡು, ಇದೀಗ ಮೂರು ಕೃಷಿ ಕಾಯ್ದೆ ವಿರೋಧಿಸಿ ರೈತರ ಹೋರಾಟ ವಿಚಾರದಲ್ಲಿ ‘ನಾವಿಬ್ಬರು ನಮಗಿಬ್ಬರು’ ಎಂಬ ತತ್ವ ಕೆಲಸ ಮಾಡಿದೆ’ ಎಂದರು.

ರಾಹುಲ್ ಮಾತಿಗೆ ಆಡಳಿತ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾದಾಗ ಮಧ್ಯಪ್ರವೇಶಿಸಿದ ಸ್ಪೀಕರ್ ಓಂ ಬಿರ್ಲಾ, ಬಜೆಟ್ ಮೇಲಿನ ಭಾಷಣಕ್ಕೆ ಮಾತು ಸೀಮಿತಗೊಳಿಸುವಂತೆ ಸೂಚಿಸಿದರು. ಇದಕ್ಕೆ ಒಪ್ಪಿದ ರಾಹುಲ್, ತಮ್ಮ ಭಾಷಣಕ್ಕೆ ಈ ಮಾತುಗಳು ಮುನ್ನುಡಿ ಇದ್ದಂತೆ ಎಂದರು. ಹೊಸ ಕೃಷಿ ಕಾನೂನುಗಳು ಭಾರತದ ಆಹಾರ ಭದ್ರತಾ ವ್ಯವಸ್ಥೆಯನ್ನು ನಾಶಮಾಡುತ್ತವೆ ಮತ್ತು ಗ್ರಾಮೀಣ ಆರ್ಥಿಕತೆಗೆ ಹಾನಿ ಮಾಡುತ್ತದೆ ಎಂದು ಆರೋಪಿಸಿದರು.

ಕಾಯ್ದೆಗಳ ಉದ್ದೇಶವೇನು?

l ಮೊದಲ ಕಾನೂನು: ಒಬ್ಬ ಸ್ನೇಹಿತ ನಿಗೆ ದೇಶದ ಎಲ್ಲ ಬೆಳೆಗಳನ್ನು ಹೊಂದುವ ಹಕ್ಕು ನೀಡುವುದು. ಇದರಿಂದ ಸಣ್ಣ ಉದ್ಯಮಿಗಳು ಮತ್ತು ಮಂಡಿಗಳಲ್ಲಿ ಕೆಲಸ ಮಾಡುವವರು ನಷ್ಟಕ್ಕೆ ಒಳಗಾಗುತ್ತಾರೆ

l ಎರಡನೆಯ ಕಾನೂನು: ದೊಡ್ಡ ಉದ್ಯಮಿಗಳು ತಮಗೆ ಬೇಕಾದಷ್ಟು ಆಹಾರ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ಅವರು ಬಯಸಿದಷ್ಟು ಸಂಗ್ರಹಿಸಲು ಅನುಕೂಲ ಮಾಡಿಕೊಡುತ್ತದೆ

l ಮೂರನೆಯ ಕಾನೂನು: ಒಬ್ಬ ರೈತ ತನ್ನ ಬೆಳೆಗಳಿಗೆ ಸರಿಯಾದ ಬೆಲೆಯನ್ನು ಕೊಡಿ ಎಂದು ದೊಡ್ಡ ಉದ್ಯಮಿಗಳ ಮುಂದೆ ಹೋಗಬೇಕು. ಆದರೆ ಅದೇ ರೈತನಿಗೆ ನ್ಯಾಯಾಲಯಕ್ಕೆ ಹೋಗಲು ಅವಕಾಶವಿರುವುದಿಲ್ಲ

ಸಮಿತಿ ವ್ಯಾಪ್ತಿ ಬಗ್ಗೆ ಆಕ್ಷೇಪ

ಸುಪ್ರೀಂ ಕೋರ್ಟ್ ನೇಮಕ ಮಾಡಿದ ಸಮಿತಿಯು ಹೊಸ ಕೃಷಿ ಕಾನೂನುಗಳ ಬಗ್ಗೆ ಪ್ರತಿಕ್ರಿಯೆ ಕೋರಿ ನೋಟಿಸ್ ನೀಡುವ ಬಗ್ಗೆ ಸಂಸದ ಎನ್.ಕೆ. ಪ್ರೇಮಚಂದ್ರನ್ ಅವರು ಕಳವಳ ವ್ಯಕ್ತಪಡಿಸಿದರು. ಸಂಸತ್ತಿನ ವ್ಯಾಪ್ತಿಯನ್ನುಸುಪ್ರೀಂ ಕೋರ್ಟ್ ಅತಿಕ್ರಮಿಸುತ್ತಿರುವುದು ದುರದೃಷ್ಟಕರ ಎಂದರು.

‘ಹೊಸ ಕಾನೂನುಗಳ ಬಗ್ಗೆ ಕೋರ್ಟ್ ನೇಮಿಸಿದ ಸಮಿತಿಯು ಪ್ರತಿಕ್ರಿಯೆಗಳನ್ನು ಪಡೆಯಲು ಮುಂದಾದರೆ ಸಂಸತ್ತಿನ ಅರ್ಥ ಉಳಿಯುತ್ತದೆಯೇ’ ಎಂದು ಆರ್‌ಎಸ್‌ಪಿಯಿಂದ ಆಯ್ಕೆಯಾಗಿರುವ ಪ್ರೇಮಚಂದ್ರನ್ ಪ್ರಶ್ನಿಸಿದರು.

‘ಸಂಸತ್ತು ಮೂರು ಕಾನೂನುಗಳಿಗೆ ಶಾಸನದ ರೂಪ ನೀಡಿದೆ. ಅವುಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಂದು ಸಮಿತಿಯನ್ನು ರಚಿಸಿದೆ. ಕಾಯ್ದೆಗಳನ್ನು ರಚಿಸುವುದು ಸಂಸತ್ತಿನ ಪರಮಾಧಿಕಾರ’ ಎಂದು ಅವರು ಹೇಳಿದರು.

ಬ್ಯಾಟರಿ‌ ಚಾಲಿತ ವಾಹನಗಳಿಗೆ ಸಬ್ಸಿಡಿ ಬೆಂಬಲ

62,000 ವಿದ್ಯುತ್ ಚಾಲಿತ ಪ್ರಯಾಣಿಕ ಕಾರು, ಬಸ್ಸು,15 ಲಕ್ಷ ತ್ರಿಚಕ್ರ, ದ್ವಿಚಕ್ರ ವಾಹನಗಳಿಗೆ ಸಬ್ಸಿಡಿ ನೀಡುವ ಮೂಲಕಬ್ಯಾಟರಿ ಚಾಲಿತ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲು ಸರ್ಕಾರ ಉದ್ದೇಶಿಸಿದೆ ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಎಲೆಕ್ಟ್ರಿಕ್ ಚಾರ್ಜಿಂಗ್ ಮೂಲಸೌಕರ್ಯ ನಿರ್ಮಿಸುವತ್ತಲೂ ಚಿತ್ತ ಹರಿಸಲಾಗಿದೆ ಎಂದು ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ವೇಗವಾಗಿ ವಿದ್ಯುತ್‌ಚಾಲಿತ ವಾಹನಗಳ ತಯಾರಿಕೆಗೆ ರೂಪಿಸಿರುವ ‘ಫೇಮ್ ಇಂಡಿಯಾ’ ಯೋಜನೆಯ ಎರಡನೇ ಹಂತವು ₹10 ಸಾವಿರ ಕೋಟಿ ಬಜೆಟ್ ಬೆಂಬಲದೊಂದಿಗೆ ಜಾರಿಗೊಂಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT