ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಆದಿವಾಸಿ ಸಮುದಾಯದ ವಿರೋಧಿ: ಕಾಂಗ್ರೆಸ್‌ ಟೀಕೆ

Last Updated 10 ಜುಲೈ 2022, 13:33 IST
ಅಕ್ಷರ ಗಾತ್ರ

ನವದೆಹಲಿ:‘ಕೇಂದ್ರ ಸರ್ಕಾರವು 1980ರ ಅರಣ್ಯಸಂರಕ್ಷಣಾಕಾಯ್ದೆಯನ್ನು ತಿದ್ದುಪಡಿ ಮಾಡಲು ಹೊರಟಿದ್ದು, ಆ ಮೂಲಕ ಆದಿವಾಸಿ, ಬುಡಕಟ್ಟು ಹಾಗೂ ಇತರ ಅರಣ್ಯ ನಿವಾಸಿಗಳ ಬದುಕನ್ನು ದುಸ್ತರಗೊಳಿಸಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆದಿವಾಸಿ ಸಮುದಾಯದ ವಿರೋಧಿ ಎಂಬುದನ್ನು ಇದು ಸಾರಿ ಹೇಳುತ್ತದೆ’ ಎಂದು ಕಾಂಗ್ರೆಸ್‌ ಟೀಕಿಸಿದೆ.

‘ವಿವಿಧ ಯೋಜನೆಗಳಿಗಾಗಿ ವಿದೇಶಿ ಕಂಪನಿಗಳು ಹಾಗೂ ಬಂಡವಾಳಶಾಹಿಗಳಿಗೆ ಅರಣ್ಯ ಭೂಮಿಯನ್ನು ಗುತ್ತಿಗೆ ರೂಪದಲ್ಲಿ ಕೊಡಲು ಇರುವ ಅಡಚಣೆ ನಿವಾರಿಸುವ ಸಲುವಾಗಿ ಮೋದಿ ಸರ್ಕಾರ ಕಾಯ್ದೆ ತಿದ್ದುಪಡಿಗೆ ತೀರ್ಮಾನಿಸಿದೆ. ಇದರೊಂದಿಗೆ ಆದಿವಾಸಿಗಳ ಜೀವಿಸುವ ಹಕ್ಕಿನ ಮೇಲೆ ಗದಾಪ್ರಹಾರ ನಡೆಸಲು ಮುಂದಾಗಿದೆ. ಇದನ್ನು ಕಾಂಗ್ರೆಸ್‌ ವಿರೋಧಿಸಲಿದೆ’ ಎಂದು ತಿಳಿಸಿದೆ.

‘ಅರಣ್ಯ ಭೂಮಿ ಕಬಳಿಸುವುದಕ್ಕಾಗಿ ಮೋದಿ ಮಿತ್ರ ಸರ್ಕಾರವು ಕಾಯ್ದೆಗೆ ತಿದ್ದುಪಡಿ ತಂದಿದೆ. ಹೊಸ ನಿಯಮಗಳನ್ನು ನಮ್ಮ ಪಕ್ಷ ವಿರೋಧಿಸಲಿದೆ. ಈ ವಿಚಾರದಲ್ಲಿ ಪಕ್ಷವು ಆದಿವಾಸಿ ಸಮುದಾಯದ ಸಹೋದರ–ಸಹೋದರಿಯರ ಜೊತೆ ನಿಲ್ಲಲಿದೆ. ಜಲ, ಅರಣ್ಯ ಹಾಗೂ ಭೂಮಿಯ ರಕ್ಷಣೆಗಾಗಿ ಅವರು ನಡೆಸುವ ಹೋರಾಟಕ್ಕೆ ಬೆಂಬಲ ನೀಡಲಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

‘ಬಿಜೆಪಿ ಸರ್ಕಾರದ ನೂತನ ನೀತಿಯು 2006ರ ಅರಣ್ಯ ಹಕ್ಕು ಕಾಯ್ದೆಯ ಆಶಯವನ್ನೇ ನಾಶಪಡಿಸಲಿದೆ. ಬೆರಳೆಣಿಕೆ ಮಂದಿಯ ಹಿತಕ್ಕಾಗಿ ಬಿಜೆಪಿ ಸರ್ಕಾರವು ಬಹುಸಂಖ್ಯಾತರ ಬದುಕನ್ನು ಕಸಿದುಕೊಳ್ಳಲು ಮುಂದಾಗಿದೆ’ ಎಂದು ರಾಜ್ಯಸಭಾ ಸದಸ್ಯ ಜೈರಾಮ್‌ ರಮೇಶ್‌ ಟ್ವೀಟ್ ಮೂಲಕ ಟೀಕಿಸಿದ್ದಾರೆ.

‘ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರ ಗಮನಕ್ಕೆ ತರದೆ, ಅವರೊಂದಿಗೆ ಚರ್ಚಿಸದೆಯೇ ಏಕಪಕ್ಷೀಯವಾಗಿ ನೂತನ ನಿಯಮಗಳನ್ನು ಜಾರಿಗೊಳಿಸಲಾಗಿದೆ’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT