ರೈತರ 'ಚಕ್ಕಾ ಜಾಮ್' ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ

ನವದೆಹಲಿ: ಫೆಬ್ರವರಿ 6ರಂದು ದೇಶದಾದ್ಯಂತ ರೈತರು ಹಮ್ಮಿಕೊಂಡಿರುವ ಚಕ್ಕಾ ಜಾಮ್ (ರಸ್ತೆ ದಿಗ್ಭಂಧನ) ಪ್ರತಿಭಟನೆಗೆ ಕಾಂಗ್ರೆಸ್ ಪಕ್ಷವು ಬೆಂಬಲ ವ್ಯಕ್ತಪಡಿಸಿದೆ.
ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, 'ದೇಶದಾದ್ಯಂತ ಮೂರು ಗಂಟೆಗಳ ಕಾಲ ರೈತರು ಕರೆ ನೀಡಿರುವ ಚಕ್ಕಾ ಜಾಮ್ ಪ್ರತಿಭಟನೆಗೆ ನಮ್ಮ ಪಕ್ಷವು ಬೆಂಬಲ ನೀಡಲಿದೆ' ಎಂದು ತಿಳಿಸಿದ್ದಾರೆ.
ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿ ಗಡಿ ಪ್ರದೇಶಗಳಲ್ಲಿ ಠಿಕಾಣಿ ಹೂಡಿರುವ ರೈತರು ನಾಳೆ (ಶನಿವಾರ) ದೇಶವ್ಯಾಪಿ 'ಚಕ್ಕಾ ಜಾಮ್' ಪ್ರತಿಭಟನೆಗೆ ಕರೆ ನೀಡಿದ್ದಾರೆ.
'ದೆಹಲಿ ಹೊರತುಪಡಿಸಿ ದೇಶವ್ಯಾಪಿ ಚಕ್ಕಾ ಜಾಮ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು' ಎಂದು ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಶುಕ್ರವಾರ ತಿಳಿಸಿದ್ದಾರೆ.
ಚಕ್ಕಾ ಜಾಮ್ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ಟಿಕಾಯತ್, 'ಮೂರು ತಾಸುಗಳ ಕಾಲ ರಸ್ತೆ ದಿಗ್ಭಂಧನ ಹೇರಲಾಗುವುದು. ಇದು ದೆಹಲಿಯಲ್ಲಿ ನಡೆಯುವುದಿಲ್ಲ. ಆದರೆ ದೇಶದ ಇತರೆ ಭಾಗಗಳಲ್ಲಿ ಚಕ್ಕಾ ಜಾಮ್ ಹಮ್ಮಿಕೊಳ್ಳಲಾಗುವುದು. ಚಕ್ಕಾ ಜಾಮ್‌ನಲ್ಲಿ ಸಿಲುಕುವ ವಾಹನಗಳಿಗೆ ನೀರು ಹಾಗೂ ಆಹಾರ ಒದಗಿಸಲಾಗುವುದು. ಕಡಲೆಕಾಯಿಯಂತಹ ವಸ್ತುಗಳನ್ನು ಜನರಿಗೆ ವಿತರಿಸಲಾಗುವುದು. ಹಾಗೆಯೇ ಜನರಿಗೆ ಸರ್ಕಾರ ಮಾಡುತ್ತಿರುವ ಅನ್ಯಾಯದ ಬಗ್ಗೆ ಮನವರಿಕೆ ಮಾಡಲಾಗುವುದು' ಎಂದು ವಿವರಿಸಿದ್ದಾರೆ.
ಕಳೆದ ವರ್ಷ ನವೆಂಬರ್ 26ರಿಂದ ಆರಂಭವಾಗಿರುವ ಪ್ರತಿಭಟನೆಯನ್ನು ರೈತ ಮುಖಂಡ ರಾಕೇಶ್ ಟಿಕಾಯತ್ ಮುನ್ನಡೆಸುತ್ತಿದ್ದಾರೆ. ಈ ನಡುವೆ ಜನವರಿ 26 ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಹಿಂಸಾಚಾರ ನಡೆದಿತ್ತು.
ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಗಾಜಿಪುರ, ಟಿಕ್ರಿ ಹಾಗೂ ಸಿಂಘು ಪ್ರತಿಭಟನಾ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ರೈತರ ಸಂಚಾರವನ್ನು ತಡೆಯಲು ರಸ್ತೆಗಳಲ್ಲಿ ಮೊಳೆ, ಕಾಂಕ್ರೀಟ್ ಬ್ಯಾರಿಕೇಡ್ ಹಾಗೂ ತಂತಿಗಳನ್ನು ಸ್ಥಾಪಿಸಲಾಗಿದೆ.
ರೈತರ ಪ್ರತಿಭಟನೆಗೆ ಅಮೆರಿಕದ ಫುಟ್ಬಾಲ್, ಬಾಸ್ಕೆಟ್ಬಾಲ್ ಆಟಗಾರರಿಂದ ಬೆಂಬಲ
ಹೌದು, ನಾನು ಪ್ರಜ್ಞೆಗೆ ಮರಳಿದ್ದೇನೆ: ಟೀಕಾಕಾರರ ಚಳಿ ಬಿಡಿಸಿದ 'ಮಿಯಾ ಖಲೀಫಾ'
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.