ಮಣಿಪುರ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು: ಬಿಜೆಪಿಯತ್ತ ಎಂಟು ಶಾಸಕರ ಚಿತ್ತ?

ಗುವಾಹಟಿ: ಮಣಿಪುರದ ಕಾಂಗ್ರೆಸ್ ಘಟಕದಲ್ಲಿ ಬಿಕ್ಕಟ್ಟು ಉದ್ಭವಿಸಿದೆ. ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಅಧ್ಯಕ್ಷ ಗೋವಿನ್‌ದಾಸ್ ಕೊಂತೌಜಮ್ ಮತ್ತು ಪಕ್ಷದ ಕನಿಷ್ಠ ಎಂಟು ಶಾಸಕರು ಬಿಜೆಪಿ ಹೈಕಮಾಂಡ್‌ನ ಜೊತೆ ಸಂಪರ್ಕದಲ್ಲಿದ್ದು, ಪಕ್ಷಾಂತರಕ್ಕೆ ಸಜ್ಜಾಗಿದ್ದಾರೆ ಎಂಬ ವರದಿಗಳಿವೆ.
ಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೊಂತೌಜಮ್ ರಾಜೀನಾಮೆ ಸಲ್ಲಿಸಿದ್ದಾರೆ. ಈ ಬೆಳವಣಿಗೆಯು ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ತುಮುಲವನ್ನು ಹೆಚ್ಚಿಸಿದೆ. ಈ ಕುರಿತು ಪ್ರತಿಕ್ರಿಯಿಸಲು ಕಾಂಗ್ರೆಸ್ ವಕ್ತಾರರು ನಿರಾಕರಿಸಿದ್ದಾರೆ.
ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ನಿರ್ದೇಶನದಂತೆ ರಾಜ್ಯ ಉಸ್ತುವಾರಿ ಭಕ್ತ ಚರಣ್ ಅವರು ಬುಧವಾರ ರಾಜ್ಯಕ್ಕೆ ಬರುತ್ತಿದ್ದು, ಮುಖಂಡರ ಜೊತೆಗೆ ಚರ್ಚಿಸುವರು. ರಾಜ್ಯದ ಬೆಳವಣಿಗೆಗಳ ಅರಿವು ಸೋನಿಯಾಗಾಂಧಿ ಅವರಿಗೆ ಇದೆ ಎಂದು ವಕ್ತಾರರಾದ ನಿಂಗೊಂಬಮ್ ಭೂಪೇಂದ್ರ ಹೇಳಿದರು.
ಮಣಿಪುರ 2017ರವರೆಗೂ ಕಾಂಗ್ರೆಸ್‌ನ ಭದ್ರನೆಲೆಯಾಗಿತ್ತು. ಬಿಜೆಪಿ 2017ರಲ್ಲಿ ನಾಗಾ ಪೀಪಲ್ಸ್ ಫ್ರಂಟ್ ಮತ್ತು ನ್ಯಾಷನ್ ಪೀಪಲ್ಸ್ ಪಾರ್ಟಿ ಸಹಯೋಗದಲ್ಲಿ ಅಧಿಕಾರಕ್ಕೆ ಏರಿತ್ತು. 28 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದ್ದರೂ, 21 ಸ್ಥಾನವನ್ನಷ್ಟೇ ಗೆದ್ದಿದ್ದ ಬಿಜೆಪಿ ನೇತೃತ್ವದ ಮೈತ್ರಿಕೂಟ ಸರ್ಕಾರ ರಚಿಸುವುದನ್ನು ತಡೆಯಲು ಆಗಿರಲಿಲ್ಲ. ಮಣಿಪುರದಲ್ಲಿ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.