ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ್ಮದಾ ನೀರು ತಡೆದಿದ್ದ ಕಾಂಗ್ರೆಸ್‌: ಮೋದಿ

Last Updated 2 ಡಿಸೆಂಬರ್ 2022, 17:55 IST
ಅಕ್ಷರ ಗಾತ್ರ

ಅಹಮದಾಬಾದ್‌: ಕಾಂಗ್ರೆಸ್‌ಗೆ ನಂಬಿಕೆ ಇರುವುದು ಯೋಜನೆಗಳನ್ನು ಸ್ಥಗಿತ ಗೊಳಿಸುವುದರಲ್ಲಿ, ವಿಳಂಬ ಮಾಡುವುದರಲ್ಲಿ ಮತ್ತು ದಾರಿ ತಪ್ಪಿಸುವುದರಲ್ಲಿ ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಗುಜರಾತ್‌ನ ಬನಾಸಕಾಂಠಾ ಜಿಲ್ಲೆಯಲ್ಲಿ ಗುರುವಾರ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮೋದಿ ಅವರು ಪ್ರಚಾರ ನಡೆಸಿದರು. ‘ರಾಜ್ಯದ ಬರಪೀಡಿತ ಪ್ರದೇಶಗಳಿಗೆ ನೀರು ಬರುವುದನ್ನು ಕಾಂಗ್ರೆಸ್‌ ತಡೆದು ನಿಲ್ಲಿಸಿತ್ತು. ನರ್ಮದಾ ನದಿಗೆ ಸರ್ದಾರ್ ಸರೋವರ ಅಣೆಕಟ್ಟು ಕಟ್ಟುವುದನ್ನು ವಿರೋಧಿಸಿದ್ದವರನ್ನು ಕಾಂಗ್ರೆಸ್‌ ಬೆಂಬಲಿಸಿತ್ತು. ಈ ಕಾರಣದಿಂದಲೇ ಇಷ್ಟು ವರ್ಷ ಈ ಪ್ರದೇಶಗಳಿಗೆ ನರ್ಮದಾ ನೀರು ಬಂದಿರಲಿಲ್ಲ’ ಎಂದು ಮೋದಿ ಆರೋಪಿಸಿದ್ದಾರೆ.

‘ಇಲ್ಲಿ ಬರ ಬಂದಾಗ ಬಾವಿ ತೋಡುವ ಕೆಲಸ ನೀಡಲಾಗುತ್ತಿತ್ತು. ಆ ಕಾಮಗಾರಿಗಳಲ್ಲಿ ಕಾಂಗ್ರೆಸ್‌ ನಾಯಕರು ಲಂಚ ಹೊಡೆಯುತ್ತಿದ್ದರು. ನರ್ಮದಾ ನೀರನ್ನು ಇಲ್ಲಿಗೆ ತಂದರೆ, ಅಂತಹ ಲಂಚ ನಿಂತು ಹೋಗುತ್ತದೆ ಎಂಬ ಕಾರಣಕ್ಕೆ ಯೋಜನೆಯನ್ನು ವಿಳಂಬ ಮಾಡುತ್ತಾ, ಸ್ಥಗಿತಗೊಳಿಸುತ್ತಾ ಬಂದಿದ್ದರು. ಈಗ ಬಿಜೆಪಿ ಅಧಿಕಾರಕ್ಕೆ ಬಂದಿದ್ದರಿಂದ ಇಲ್ಲಿಗೆ ನರ್ಮದಾ ನೀರನ್ನು ಹರಿಸಲು ಸಾಧ್ಯವಾಗಿದೆ’ ಎಂದು ಮೋದಿ ಹೇಳಿದ್ದಾರೆ.

‘ಬಡವರಿಗೆ ನೀಡಲು ಎಂದು ಪಡಿತರ ನೀಡುತ್ತಿದ್ದರೆ, ಅದು ಅನರ್ಹರಿಗೆ ಹೋಗುತ್ತಿತ್ತು. ನಾವು ನಾಲ್ಕು ಕೋಟಿ ನಕಲಿ ಪಡಿತರ ಚೀಟಿಗಳನ್ನು ರದ್ದುಪಡಿಸಿದೆವು. ಇಂತಹ ಅಕ್ರಮಗಳನ್ನು ಮೋದಿ ಬಿಡುವುದಿಲ್ಲ. ಹೀಗಾಗಿಯೇ ಈಗ ನನ್ನನ್ನು ಕಾಂಗ್ರೆಸ್ಸಿಗರು ತೆಗಳುತ್ತಾರೆ’ ಎಂದು ಪ್ರಧಾನಿ ಮೋದಿ ಆರೋಪಿಸಿದರು..

ಗುಜರಾತ್‌: ಶೇ 63.14ರಷ್ಟು ಮತದಾನ

ಗುಜರಾತ್ ವಿಧಾನಸಭೆಯ 89 ಕ್ಷೇತ್ರಗಳಿಗೆ ಗುರುವಾರ ನಡೆದ ಮತದಾನದ ಅಂತಿಮ ವರದಿಯನ್ನು ಚುನಾವಣಾ ಆಯೋಗವು ನೀಡಿದೆ. ಮೊದಲ ಹಂತದ ಮತದಾನದಲ್ಲಿ ಶೇ 63.14ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ. 2017ರ ಚುನಾವಣೆಗೆ (ಶೇ 66.75ರಷ್ಟು ಮತದಾನ) ಹೋಲಿಸಿದರೆ ಈ ಬಾರಿಯ ಮತದಾನದ ಪ್ರಮಾಣವು ಕಡಿಮೆಯಾಗಿದೆ ಎಂದು ಆಯೋಗವು ಹೇಳಿದೆ.

ಬುಡಕಟ್ಟು ಸಮುದಾಯಗಳ ಪ್ರಾಬಲ್ಯವಿರುವ ನರ್ಮದಾ ಜಿಲ್ಲೆಯಲ್ಲಿ ಅತಿಹೆಚ್ಚಿನ ಪ್ರಮಾಣದ ಮತದಾನ ದಾಖಲಾಗಿದೆ. ಜಿಲ್ಲೆಯ ಒಟ್ಟು ಮತದಾರರಲ್ಲಿ ಶೇ 78.24ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ. ನಂತರದ ಸ್ಥಾನಲ್ಲಿ ತಾಪಿ ಜಿಲ್ಲೆಯಿದ್ದು, ಅಲ್ಲಿ ಶೇ 76.91ರಷ್ಟು ಮತದಾನ ನಡೆದಿದೆ. ಬೋಟದ್‌ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಶೇ 57.58ರಷ್ಟು ಮತದಾನ ನಡೆದಿದೆ. ಎರಡನೇ ಹಂತದ ಮತದಾನವು ಡಿ.5ರಂದು ನಡೆಯಲಿದೆ. ಡಿ. 8ರಂದು ಮತಎಣಿಕೆ ನಡೆಯಲಿದೆ.

ನುಡಿ–ಕಿಡಿ

ಮೊದಲ ಹಂತದ ಮತದಾನದ ನಂತರ ಕಾಂಗ್ರೆಸ್‌ ಮತಯಂತ್ರಗಳ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಮತಯಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದೆ. ಫಲಿತಾಂಶಕ್ಕೂ ಮೊದಲೇ ಕಾಂಗ್ರೆಸ್‌ ಸೋಲೊಪ್ಪಿಕೊಂಡಿರುವುದನ್ನು ಇದು ತೋರಿಸುತ್ತದೆ

ನರೇಂದ್ರ ಮೋದಿ, ಪ್ರಧಾನಿ

-----

ಗುಜರಾತ್‌ನಲ್ಲಿ ಬಿಜೆಪಿಯ ಡಬಲ್‌ ಎಂಜಿನ್ ಸರ್ಕಾರ ವಿಫಲವಾಗಿದೆ. ಬೆಲೆ ಏರಿಕೆ ಮತ್ತು ನಿರುದ್ಯೋಗ ತಾಂಡವವಾಡುತ್ತಿದೆ. ರಾಜ್ಯದ ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳಲ್ಲಿ ಐದು ಲಕ್ಷ ಹುದ್ದೆಗಳು ಖಾಲಿ ಇವೆ. ಅವುಗಳಲ್ಲಿ ಬಹುತೇಕವು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳಿಗೆ ಹೋಗುತ್ತವೆ ಎಂದೇ ಬಿಜೆಪಿ ಸರ್ಕಾರ ನೇಮಕಾತಿ ನಡೆಸುತ್ತಿಲ್ಲ

ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT