ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಕರ್ತರ ಬಲದಿಂದ ರಾಜಸ್ಥಾನದಲ್ಲಿ ಅಧಿಕಾರಕ್ಕೇರಿದ್ದೇವೆ: ಸಿಎಂಗೆ ಪೈಲಟ್ ಟಾಂಗ್

Last Updated 11 ಅಕ್ಟೋಬರ್ 2022, 4:24 IST
ಅಕ್ಷರ ಗಾತ್ರ

ಜೈಪುರ: ಕಾಂಗ್ರೆಸ್ ಪಕ್ಷವು 2018ರಲ್ಲಿ ರಾಜಸ್ಥಾನದಲ್ಲಿ ಅಧಿಕಾರಕ್ಕೆ ಏರಿದ್ದರ ಹಿಂದೆ ಪಕ್ಷದ ಕಾರ್ಯಕರ್ತರ ಬಲವೇ ಪ್ರಧಾನವಾಗಿದೆ ಎಂದು ಸಚಿನ್ ಪೈಲಟ್ ಸೋಮವಾರ ಹೇಳಿದ್ದಾರೆ.

2023ರ ವಿಧಾನಸಭೆ ಚುನಾವಣೆಯಲ್ಲಿಯೂ ಜಯ ಸಾಧಿಸುವ ಸಲುವಾಗಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಒಟ್ಟಾಗಿ ಶ್ರಮಿಸುತ್ತಿದ್ದಾರೆ ಎಂದೂ ತಿಳಿಸಿದ್ದಾರೆ.

ಸದ್ಯ ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟಿನ ನಡುವೆಯೇ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರನ್ನುದ್ದೇಶಿಸಿ ಪೈಲಟ್ ಹೀಗೆ ಹೇಳಿದ್ದಾರೆ ಎನ್ನಲಾಗುತ್ತಿದೆ.

ಪೈಲಟ್ ಅವರು ರೈಲಿನ ಮೂಲಕ ಕೋಟಾಗೆ ಸೋಮವಾರ ಮಧ್ಯಾಹ್ನ ಆಗಮಿಸಿದರು. ನಂತರ ಅಲ್ಲಿಂದ ಜಲಾವರ್‌ಗೆ ತೆರಳಿದರು. ಜಲಾವರ್‌ನಲ್ಲಿ ಅಹೀರ್ ಯಾದವ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಅತ್ಯುತ್ತಮ ಕಾರ್ಯಕರ್ತರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾವು ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿದ್ದಾಗ, ಪಕ್ಷವು ಕಾರ್ಯಕರ್ತರ ಬಲದಿಂದ ಅಧಿಕಾರಕ್ಕೇರಿದೆ. 2018ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಲುವಾಗಿ ಕಾರ್ಯಕರ್ತರು ಹಿಂದಿನ ಐದು ವರ್ಷ (ಬಿಜೆಪಿ ಸರ್ಕಾರದ ಅವಧಿಯಲ್ಲಿ) ಹೋರಾಟ ನಡೆಸಿದ್ದರು ಎಂದಿದ್ದಾರೆ.

ಈಗಸಾರ್ವಜನಿಕರು, ಯುವಕರು, ರೈತರು ಮತ್ತು ಪಕ್ಷದ ಕಾರ್ಯಕರ್ತರ ನಿರೀಕ್ಷೆಗಳನ್ನು ಈಡೇರಿಸುವುದು ಅವರೆಲ್ಲರ (ಕಾರ್ಯಕರ್ತರ) ಜವಾಬ್ದಾರಿಯಾಗಿದೆ ಎಂದೂ ತಿಳಿಸಿದ್ದಾರೆ.

ಇದೇ ವೇಳೆ ಪೈಲಟ್‌ ಅವರು ಸೋಮವಾರ ನಿಧನರಾದ ಸಮಾಜವಾಧಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್‌ ಅವರ ನಿಧನಕ್ಕೆ ಸಂತಾಪವನ್ನೂ ಸೂಚಿಸಿದ್ದಾರೆ.

ಕೋಟಾಗೆ ಆಗಮನಿಸಿದ ಪೈಲಟ್‌ ಅವರನ್ನು ನೂರಾರು ಕಾರ್ಯಕರ್ತರು ವಿವಿಧ ಸ್ಥಳಗಳಲ್ಲಿ ಸ್ವಾಗತಿಸಿದರು. ಆದರೆ, ರಾಜ್ಯ ಸಚಿವ ಮತ್ತು ಕೋಟಾ (ಉತ್ತರ) ಕ್ಷೇತ್ರದ ಶಾಸಕ ಶಾಂತಿ ಧರಿವಾಲ್‌ ಬೆಂಬಲಿಗರು ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ.

ಧರಿವಾಲ್‌ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.

ಅಕ್ಟೋಬರ್‌ 17ರಂದು ಚುನಾವಣೆ ನಡೆಯಲಿದ್ದು, ಎರಡು ದಿನಗಳ ಬಳಿಕ (19ರಂದು) ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.

ರಾಜಸ್ಥಾನ ಕಾಂಗ್ರೆಸ್‌ನಲ್ಲಿಬಿಕ್ಕಟ್ಟು
ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಗೆಗೆಹಲೋತ್‌ ಅವರ ಹೆಸರುಬಲವಾಗಿ ಕೇಳಿ ಬಂದಿತ್ತು.ಆದರೆ, ಮುಂದಿನ ಸಿಎಂ ಆಯ್ಕೆ ವಿಚಾರವಾಗಿ ಪಕ್ಷದಲ್ಲಿ ಗೊಂದಲಗಳು ಮೂಡಿದ್ದವು.

ಪೈಲಟ್‌ ಅವರನ್ನು ಮುಂದಿನ ಸಿಎಂ ಎಂದು ಘೋಷಿಸಲು ಹೈಕಮಾಂಡ್‌ ಒಲವು ತೋರಿದೆ ಎಂದು ವರದಿಯಾಗಿದ ಬೆನ್ನಲ್ಲೇ, ಗೆಹಲೋತ್‌ ಬಣದ ಶಾಸಕರು ಸಾಮೂಹಿಕ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದರು.ಅಷ್ಟಲ್ಲದೆ, ಹೈಕಮಾಂಡ್‌ ವೀಕ್ಷಕರನ್ನಾಗಿ ಕಳುಹಿಸಿದ್ದ ಅಜಯ್‌ ಮಾಕನ್‌ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಕರೆದಿದ್ದ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಗೂ ಹಾಜರಾಗದೆ ಪ್ರತ್ಯೇಕ ಸಭೆ ಪ್ರತಿರೋಧ ವ್ಯಕ್ತಪಡಿಸಿದ್ದರು.

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ನಂತರವೇ ರಾಜಸ್ಥಾನ ಸಿಎಂ ಆಯ್ಕೆಯಾಗಬೇಕು, ರಾಜ್ಯದಲ್ಲಿ 2020ರಲ್ಲಿ ರಾಜಕೀಯ ಬಿಕ್ಕಟ್ಟು ಎದುರಾದ ಸಂದರ್ಭದಲ್ಲಿ ಸರ್ಕಾರಕ್ಕೆ ಬೆಂಬಲವಾಗಿ ನಿಂತಿದ್ದ ಶಾಸಕರಲ್ಲಿಯೇ ಯಾರನ್ನಾದರೂ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬೇಕು ಹಾಗೂ ಕಾಂಗ್ರೆಸ್‌ ವೀಕ್ಷಕರು ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸದೆ ಸಾಮೂಹಿಕವಾಗಿ ಚರ್ಚಿಸಬೇಕು ಎಂಬ ಷರತ್ತುಗಳನ್ನೂ ಹಾಕಿದ್ದರು.

ಇದರಿಂದಾಗಿ ಬಿಕ್ಕಟ್ಟು ತಲೆದೋರಿತ್ತು. ನಂತರದ ಬೆಳವಣಿಗೆಯಲ್ಲಿ ಗೆಹಲೋತ್‌ ಅವರು ಚುನಾವಣೆಯಿಂದ ಹಿಂದೆ ಸರಿದಿದ್ದರು.

ಅ.17ರಂದು ಚುನಾವಣೆ
ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯು ಅಕ್ಟೋಬರ್‌ 17ರಂದು ನಡೆಯಲಿದ್ದು, ಎರಡು ದಿನಗಳ ಬಳಿಕ (19ರಂದು) ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.

ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮತ್ತು ಕೇರಳದ ತಿರುವನಂತಪುರ ಸಂಸದ ಶಶಿ ತರೂರ್‌ ಅವರು ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT