ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್ ವಿಧಾನಸಭೆ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳಿಂದ ಕಾಂಗ್ರೆಸ್ ಅರ್ಜಿ ಆಹ್ವಾನ

Last Updated 17 ಡಿಸೆಂಬರ್ 2021, 4:35 IST
ಅಕ್ಷರ ಗಾತ್ರ

ಚಂಡೀಗಡ: ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಪಕ್ಷದ ಟಿಕೆಟ್ ಆಕಾಂಕ್ಷಿಗಳಿಂದ ಕಾಂಗ್ರೆಸ್ ಗುರುವಾರ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳ ಆಯ್ಕೆಗೆ ಅರ್ಹತೆ ಪ್ರಮುಖ ಮಾನದಂಡವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ತಿಳಿಸಿದ್ದಾರೆ.

ಸಿಧು ನೇತೃತ್ವದಲ್ಲಿ ಕಾಂಗ್ರೆಸ್ ಪಂಜಾಬ್ ಚುನಾವಣೆ ಸಮಿತಿಯ ಮೊದಲ ಸಭೆ ಇಲ್ಲಿ ನಡೆಯಿತು.

ಸುದ್ದಿಗಾರರೊಂದಿಗೆ ಮಾತನಾಡಿದ ಪಂಜಾಬ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯೋಗಿಂದರ್ ಪಾಲ್ ಧಿಂಗ್ರಾ, 'ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಸ್ವೀಕರಿಸಲು ಪಕ್ಷವು ನಿರ್ಧರಿಸಿದೆ ಮತ್ತು ಅರ್ಜಿಗಳನ್ನು ಸಲ್ಲಿಸಲು ಡಿಸೆಂಬರ್ 20 ಕೊನೆಯ ದಿನವಾಗಿದೆ. ಇಂದಿನಿಂದ (ಶುಕ್ರವಾರ) ಮೂರು ದಿನಗಳ ಕಾಲ ಪರಿಶೋಧನಾ ಸಮಿತಿಯನ್ನು ಆಕಾಂಕ್ಷಿಗಳು ಭೇಟಿ ಮಾಡಬಹುದು' ಎಂದು ತಿಳಿಸಿದ್ದಾರೆ.

'ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿಗಳ ಜೊತೆಗೆ ಯಾವುದೇ ರೀತಿಯಲ್ಲಿ ಹಣವನ್ನು ಸ್ವೀಕರಿಸದಿರಲು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ನಿರ್ಧರಿಸಿದ್ದಾರೆ. ಈ ಮೊದಲು ಪ್ರತಿ ಅರ್ಜಿಗೆ ಕಾಂಗ್ರೆಸ್ 10 ಸಾವಿರವನ್ನು ಪಡೆಯುತ್ತಿತ್ತು' ಎಂದು ಹೇಳಿದರು.

1971ರ ಯುದ್ಧದಲ್ಲಿ ಬಾಂಗ್ಲಾದೇಶದ ರಚನೆಗೆ ಕಾರಣವಾದ ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಿದ್ದಕ್ಕಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು ಶ್ಲಾಘಿಸಿ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು ಎಂದು ಧಿಂಗ್ರಾ ಹೇಳಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಧು, 'ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಟಿಕೆಟ್ ಹಂಚಿಕೆ ಕುರಿತು ಅಂತಿಮ ನಿರ್ಣಯ ಕೈಗೊಳ್ಳಲು ಸಭೆಯಲ್ಲಿ ಮತ್ತೊಂದು ನಿರ್ಣಯವನ್ನು ಅಂಗೀಕರಿಸಲಾಯಿತು. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಒಗ್ಗಟ್ಟಿನಿಂದ ಹೋರಾಡಲಿದೆ. ಪ್ರತಿಯೊಬ್ಬ ಕಾರ್ಯಕರ್ತನೂ ಇದರಲ್ಲಿ ಭಾಗಿಯಾಗಲಿದ್ದಾನೆ ಮತ್ತು ಪ್ರತಿಯೊಬ್ಬರಿಗೂ ಜವಾಬ್ದಾರಿಯನ್ನು ನೀಡಲಾಗುತ್ತದೆ. ಅರ್ಹತೆಯ ಆಧಾರದ ಮೇಲೆ ಪಕ್ಷದಿಂದ ಟಿಕೆಟ್ ನೀಡಲಾಗುತ್ತದೆ' ಎಂದರು

ಕಳೆದ ವಾರವಷ್ಟೇ ಕಾಂಗ್ರೆಸ್, ಮುಂಬರುವ ವಿಧಾನಸಭೆ ಚುನಾವಣೆಗಾಗಿ ನವಜೋತ್ ಸಿಂಗ್ ಸಿಧು ನೇತೃತ್ವದಲ್ಲಿ ಪ್ರದೇಶ ಚುನಾವಣಾ ಸಮಿತಿಯನ್ನು ರಚಿಸಿತು. ಸಮಿತಿಯಲ್ಲಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ, ಪಕ್ಷದ ಹಿರಿಯ ನಾಯಕಿ ಮತ್ತು ಸಮನ್ವಯ ಸಮಿತಿ ಅಧ್ಯಕ್ಷೆ ಅಂಬಿಕಾ ಸೋನಿ, ಪ್ರಚಾರ ಸಮಿತಿ ಅಧ್ಯಕ್ಷ ಸುನೀಲ್ ಜಾಖರ್, ಪ್ರಣಾಳಿಕೆ ಕಮಿಟಿಯ ಪ್ರತಾಪ್ ಸಿಂಗ್ ಬಜ್ವಾ, ಪಕ್ಷದ ಲೋಕಸಭಾ ಹಾಗೂ ರಾಜ್ಯಸಭಾ ಸಂಸದರು ಮತ್ತು ರಾಜ್ಯದ ಸಚಿವರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT