ಶುಕ್ರವಾರ, ಜೂನ್ 18, 2021
21 °C
ಕೇಂದ್ರದ ‘ತರಾತುರಿ’ಗೆ ವಿರೋಧ ಪಕ್ಷಗಳ ಆಕ್ಷೇಪ

ಲಾಕ್‌ಡೌನ್‌ ನಡುವಲ್ಲೇ ಸಂಸತ್‌ ಭವನ ಕಾಮಗಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್‌ ತಡೆಗಾಗಿ ಲಾಕ್‌ಡೌನ್‌ ಹೇರಿದ್ದರೂ ಸಂಸತ್ತಿನ ಹೊಸ ಭವನ ನಿರ್ಮಾಣ ಕಾಮಗಾರಿ ಮತ್ತು ಸೆಂಟ್ರಲ್‌ ವಿಸ್ತಾ ಪುನರ್‌ ವಿನ್ಯಾಸ ಯೋಜನೆಗೆ ಯಾವುದೇ ತೊಡಕು ಉಂಟಾಗಿಲ್ಲ. ಕಾಮಗಾರಿಯು ಮುಂದುವರಿದಿದೆ. ಆದರೆ, ಇದು ವಿರೋಧ ಪಕ್ಷಗಳ ಆಕ್ಷೇಪಕ್ಕೆ ಕಾರಣವಾಗಿದೆ.

ದೇಶವು ಕೋವಿಡ್‌–19ರ ಎರಡನೇ ಅಲೆಯಲ್ಲಿ ತತ್ತರಿಸುತ್ತಿರುವಾಗ ಸಂಸತ್‌ ಭವನ ನಿರ್ಮಾಣಕ್ಕೆ ಸರ್ಕಾರ ತರಾತುರಿ ತೋರುತ್ತಿದೆ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸಿದ್ದಾರೆ. ಈ ಅನಗತ್ಯ ಯೋಜನೆಯ ಹಣವನ್ನು ಬಳಸಿಕೊಂಡು ಜನರಿಗೆ ಆಮ್ಲಜನಕ ಮತ್ತು ಇತರ ಆರೋಗ್ಯ ಸೇವೆಗಳನ್ನು ಒದಗಿಸಿ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಆಗ್ರಹಿಸಿದ್ದಾರೆ. 

ಸಂಸತ್‌ ಭವನ ಮತ್ತು ರಾಜಪಥದ ನಿವೇಶನಗಳಲ್ಲಿ ನೂರಾರು ಕಾರ್ಮಿಕರು ದಿನದ 24 ತಾಸೂ ಕೆಲಸ ಮಾಡುತ್ತಿದ್ದಾರೆ. 

ನಿರ್ಮಾಣ ಕಾಮಗಾರಿಯನ್ನು ಅಗತ್ಯ ಸೇವೆ ಎಂದು ಲಾಕ್‌ಡೌನ್ ಮಾರ್ಗಸೂಚಿಯಲ್ಲಿ ವರ್ಗೀಕರಿಸಲಾಗಿದೆ. ಆದರೆ, ನಿರ್ಮಾಣ ನಿವೇಶನದಲ್ಲಿಯೇ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಇದ್ದರೆ ಮಾತ್ರ ಕಾಮಗಾರಿಗೆ ಅವಕಾಶ ಇದೆ. ಸಂಸತ್‌ ಭವನ ನಿರ್ಮಾಣ ಸ್ಥಳದಲ್ಲಿ ಕೆಲವೇ ಕಾರ್ಮಿಕರಿಗೆ ಮಾತ್ರ ವಸತಿ ವ್ಯವಸ್ಥೆ ಇದೆ. ಹೆಚ್ಚಿನವರನ್ನು ಕೀರ್ತಿ ನಗರ ಮತ್ತು ಸಮೀಪದ ಇತರ ಸ್ಥಳಗಳಿಂದ ಪ್ರತಿ ದಿನವೂ ಬಸ್‌ಗಳಲ್ಲಿ ಕರೆ ತರಲಾಗುತ್ತಿದೆ. 

‘ಇಲ್ಲಿ ನೆಲೆಸುವುದು ಕಷ್ಟ. ಇಲ್ಲಿ ಯಾವುದೇ ಸೌಲಭ್ಯ ಇಲ್ಲ. ಜತೆಗೆ ಇದು ಅತಿ ಹೆಚ್ಚು ಭದ್ರತೆ ಇರುವ ಪ್ರದೇಶ. ಕೆಲಸ ಮುಗಿದ ಬಳಿಕ ಇಲ್ಲಿ ಅಡ್ಡಾಡುವುದಕ್ಕೂ ಆಗದು’ ಎಂದು ಸಂಸತ್‌ ಭವನದ ನಿವೇಶನದಲ್ಲಿ ಕೆಲಸ ಮಾಡುವ ಉತ್ತರ ಪ್ರದೇಶದ ಸೋನು ಯಾದವ್‌ ಹೇಳಿದ್ದಾರೆ. 

ಯೋಜನೆ ಪ್ರಕಾರ, 2023ರ ಅಕ್ಟೋಬರ್‌ಗೆ ಹೊಸ ಸಂಸತ್‌ ಭವನ, 2022ರ ಜನವರಿ 26ಕ್ಕೆ ಸೆಂಟ್ರಲ್‌ ವಿಸ್ತಾ ಮರು ವಿನ್ಯಾಸ ಕೆಲಸಗಳು ಪೂರ್ಣಗೊಳ್ಳಬೇಕಿವೆ. 

‘ಗಡುವಿನೊಳಗೆ ನಾವು ಕಾಮಗಾರಿ ಪೂರ್ಣಗೊಳಿಸಲೇಬೇಕಿದೆ. ಈ ಪ್ರತಿಷ್ಠಿತ ಯೋಜನೆಯ ಕಾಮಗಾರಿಯು ವೇಗವಾಗಿ ನಡೆಯಬೇಕು ಎಂದು ಸರ್ಕಾರವು ಬಯಸಿದೆ, ಕಾಮಗಾರಿ ನಿಲ್ಲಿಸುವ ಯೋಚನೆಯೇ ಇಲ್ಲ’ ಎಂದು ಕಾಮಗಾರಿಯ ಉಸ್ತುವಾರಿ ಹೊತ್ತಿರುವ ಕೇಂದ್ರ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. 

ಟಾಟಾ ಪ್ರಾಜೆಕ್ಟ್ಸ್‌ ಸಂಸ್ಥೆಯು ₹ 861.90 ಕೋಟಿ ವೆಚ್ಚದಲ್ಲಿ ಸಂಸತ್‌ ಭವನ ನಿರ್ಮಾಣದ ಗುತ್ತಿಗೆ ಪಡೆದಿದೆ. ಸೆಂಟ್ರಲ್‌ ವಿಸ್ತಾ (ರಾಜಪಥ) ಪ್ರದೇಶದ ಮರು ವಿನ್ಯಾಸದ ಗುತ್ತಿಗೆಯನ್ನು ಶಾಪೂರ್ಜಿ ಪಲ್ಲೊಂಜಿ ಎಂಡ್‌ ಕಂಪನಿಯು ₹ 608 ಕೋಟಿಗೆ ಗುತ್ತಿಗೆ ಪಡೆದಿದೆ. 

ಮರುವಿನ್ಯಾಸ ಯೋಜನೆಯನ್ನು ₹ 20 ಸಾವಿರ ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸುವ ಭಾರಿ ಯೋಜನೆಯನ್ನೂ ಸರ್ಕಾರ ಹೊಂದಿದೆ. ಹಲವು ಕಟ್ಟಡಗಳನ್ನು ಕೆಡವಿ, ಹೊಸ ಕಟ್ಟಡಗಳನ್ನು ನಿರ್ಮಿಸುವುದು ಈ ಯೋಜನೆಯ ಉದ್ದೇಶ. ಹಲವು ಕಟ್ಟಡಗಳು ಶಿಥಿಲವಾಗಿವೆ, ಇಲ್ಲಿ ಅಗ್ನಿ ಮತ್ತು ಭೂಕಂಪ ಸುರಕ್ಷತೆಯೂ ಇಲ್ಲ ಎಂಬುದು ಸರ್ಕಾರದ ವಾದವಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು