ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರಕ್ಕೆ ಭಾರತ್‌ ಜೋಡೊ ಯಾತ್ರೆ: ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಕೆ

Last Updated 8 ನವೆಂಬರ್ 2022, 19:32 IST
ಅಕ್ಷರ ಗಾತ್ರ

ನಾಂದೇಡ್‌, ಮಹಾರಾಷ್ಟ್ರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ‘ಭಾರತ್‌ ಜೋಡೊ ಯಾತ್ರೆ’ಯು ಸೋಮವಾರ ರಾತ್ರಿ ತೆಲಂಗಾಣದಿಂದ ಮಹಾರಾಷ್ಟ್ರ ತಲುಪಿತು.ದೊಂದಿಯೊಂದನ್ನು ಹಿಡಿದು ಮಹಾರಾಷ್ಟ್ರ ಪ್ರವೇಶಿಸಿದ ರಾಹುಲ್‌, ಮುಂದಿನ 15 ದಿನಗಳ ಮಹಾರಾಷ್ಟ್ರ ಯಾತ್ರೆಯಲ್ಲಿ ರಾಜ್ಯದ ಜನರ ಕಷ್ಟಗಳನ್ನು ಆಲಿಸುವುದಾಗಿ ಹೇಳಿದ್ದಾರೆ.

ಗುರುನಾನಕ್‌ ಜಯಂತಿ ಅಂಗವಾಗಿ ಮಂಗಳವಾರ ಬೆಳಿಗ್ಗೆ ನಾಂದೇಡ್‌ನ ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವ ಮೂಲಕ ರಾಹುಲ್‌ ಅವರು 62ನೇ ದಿನದ ಯಾತ್ರೆಗೆ ಚಾಲನೆ ನೀಡಿದರು.

‘ಭ್ರಾತೃತ್ವ ಮತ್ತು ಸಮಾನತೆಗಾಗಿ ರಾಹುಲ್‌ ಅವರು ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದರು’ ಎಂದು ಪಕ್ಷ ಟ್ವೀಟ್‌ ಮಾಡಿದೆ.

ಕೇಂದ್ರ ಸರ್ಕಾರದನೋಟು ಅಮಾನ್ಯೀಕರಣದಂಥ ತಪ್ಪು ನೀತಿಗಳು ಮತ್ತು ಸರಕು ಮತ್ತು ಸೇವಾ ತೆರಿಗೆಯ ಅಸಮರ್ಪಕ ಜಾರಿಯ ಕಾರಣದಿಂದಾಗಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು ಸಂಕಷ್ಟಕ್ಕೀಡಾಗಿವೆ ಎಂದು ಅವರು ಹೇಳಿದರು.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳಾದ ಸುಶೀಲ್‌ ಕುಮಾರ್‌ ಶಿಂದೆ ಮತ್ತು ಅಶೋಕ್‌ ಚೌವಾಣ್‌, ಮಹಾರಾಷ್ಟ್ರ ಕಾಂಗ್ರೆಸ್‌ ಮುಖ್ಯಸ್ಥ ನಾನಾ ಪಟೋಲೆ, ಇತರ ಪ್ರಮುಖ ನಾಯಕರಾದ ಬಾಳಾಸಾಹೇಬ್‌ ಥಾರೋಟ್‌, ನಸೀಮ್‌ ಖಾನ್‌ ಮುಂತಾದವರು ಯಾತ್ರೆಯಲ್ಲಿ ರಾಹುಲ್‌ ಜೊತೆಗೂಡಿದ್ದರು.

ಆದಿತ್ಯ ಠಾಕ್ರೆ ಪಾಲ್ಗೊಳ್ಳುವ ನಿರೀಕ್ಷೆ: ಶಿವಸೇನಾದ (ಉದ್ಧವ್‌ ಠಾಕ್ರೆ ಬಣ) ನಾಯಕ ಆದಿತ್ಯ ಠಾಕ್ರೆ ಅವರು ಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

‘ಪೂರ್ವದಿಂದ ಪಶ್ಚಿಮಕ್ಕೆ ಕಾಂಗ್ರೆಸ್‌ ಯಾತ್ರೆ’
ಜೈಪುರ (ಪಿಟಿಐ):
2024ರ ವಿಧಾನಸಭೆ ಚುನಾವಣೆಗೂ ಮುನ್ನ ದೇಶದ ಪೂರ್ವ ಭಾಗದಿಂದ ಪಶ್ಚಿಮ ಭಾಗಕ್ಕೆ ‘ಭಾರತ್‌ ಜೋಡೊ ಯಾತ್ರೆ’ ಮಾದರಿಯ ಮತ್ತೊಂದು ಯಾತ್ರೆಯನ್ನು ಕೈಗೊಳ್ಳುವುದಾಗಿ ಕಾಂಗ್ರೆಸ್ ನಾಯಕ ವಿಭಾಕರ್‌ ಶಾಸ್ತ್ರಿ ಮಂಗಳವಾರ ಹೇಳಿದ್ದಾರೆ.

ಭಾರತ್‌ ಜೋಡೊ ಯಾತ್ರೆಯ ರಾಜಸ್ಥಾನ ಉಸ್ತುವಾರಿ ಆಗಿರುವ ವಿಭಾಕರ್‌ ಅವರು, ಡಿಸೆಂಬರ್‌ ಮೊದಲ ವಾದರಲ್ಲಿ ಯಾತ್ರೆಯು ರಾಜಸ್ಥಾನ ತಲುಪಲಿದೆ. ಆಳ್ವಾರ್‌ ಜಿಲ್ಲೆಯ ಮಾಲೆಖೇಡಾದಲ್ಲಿ ಬೃಹತ್‌ ರ‍್ಯಾಲಿ ಆಯೋಜಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಪೂರ್ವದಿಂದ ಪಶ್ಚಿಮ ಕಡೆಗೆ ಕಾಂಗ್ರೆಸ್‌ ಯಾತ್ರೆ ನಡೆಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

ಸೇವಾ ದಳದ ಪ್ರಧಾನ ಕಾರ್ಯದರ್ಶಿ ಸಾವು
ನಾಂದೇಡ್‌ನಲ್ಲಿ ಮಂಗಳವಾರ ಆರಂಭವಾಗಿರುವ ಕಾಂಗ್ರೆಸ್‌ನ ‘ಭಾರತ್‌ ಜೋಡೊ ಯಾತ್ರೆಯಲ್ಲಿ’ ಪಾಲ್ಗೊಂಡಿದ್ದ ಕಾಂಗ್ರೆಸ್‌ ಸೇವಾ ದಳದ ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್‌ ಪಾಂಡೆ ಎಂಬುವವರು ಯಾತ್ರೆ ವೇಳೆಯೇ ಕುಸಿದುಬಿದ್ದು ಸಾವಿಗೀಡಾಗಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.ಇವರ ನಿಧನಕ್ಕೆ ಸಂತಾಪ ಸೂಚಿಸಿರುವ ಕಾಂಗ್ರೆಸ್‌ ಹಿರಿಯ ನಾಯಕ ರಾಹುಲ್‌ ಗಾಂಧಿ, ‘ಕೃಷ್ಣ ಅವರು ಕಡೇ ಗಳಿಗೆಯವರೆಗೆ ರಾಷ್ಟ್ರಧ್ವಜವನ್ನು ಹಿಡಿದುಕೊಂಡಿದ್ದರು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT