ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲವಂತದ ಮತಾಂತರ ತಡೆಯಲು ಸಶಕ್ತ ಕಾನೂನು ಇರುವಾಗ ಹೊಸ ಕಾಯ್ದೆ ಯಾಕೆ? ಸಿದ್ದರಾಮಯ್ಯ

ಅಕ್ಷರ ಗಾತ್ರ

ಬೆಂಗಳೂರು: ಆಮಿಷ, ಒತ್ತಡ, ಬೆದರಿಕೆಗಳ ಮೂಲಕ ನಡೆಯುವ ಬಲವಂತದ ಮತಾಂತರಗಳನ್ನು ತಡೆಯಲು ನಮ್ಮ ಕಾನೂನು ಸಶಕ್ತವಾಗಿದೆ. ಹೀಗಿದ್ದಾಗ ಹೊಸ ಕಾಯ್ದೆಯ ಅವಶ್ಯಕತೆ ಏನಿದೆ? ಅಲ್ಪಸಂಖ್ಯಾತರನ್ನು ಬೆದರಿಸುವ ಮತ್ತು ಅವರಿಗೆ ಕಿರುಕುಳ ನೀಡುವ ದುರುದ್ದೇಶವಲ್ಲದೆ ಈ ಕಾಯ್ದೆಗೆ ಬೇರೆ ಸದುದ್ದೇಶಗಳೇನಿದೆ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

‘ಕರ್ನಾಟಕ ಧಾರ್ಮಿಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ’ (ಮತಾಂತರ ನಿಷೇಧ) ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ಪ್ರಸ್ತಾವಕ್ಕೆ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿದೆ.

ಈ ಹಿನ್ನೆಲೆಯಲ್ಲಿ ಶುಕ್ರವಾರ ಸರಣಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ, ಸುಗ್ರೀವಾಜ್ಞೆಯನ್ನು ತಿರಸ್ಕರಿಸಬೇಕೆಂದು ರಾಜ್ಯದ ಘನತೆವೆತ್ತ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ‌

‘ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ನಿತ್ಯ ಬೆತ್ತಲೆ ಆಗುತ್ತಿರುವ ರಾಜ್ಯದ ಬಿಜೆಪಿ ಸರ್ಕಾರ ಧಾರ್ಮಿಕ ಭಾವನೆ ಕೆರಳಿಸಿ ಜನರ ಗಮನ ಬೇರೆಡೆ ಸೆಳೆಯುವ ದುರುದ್ದೇಶದಿಂದ ಸುಗ್ರಿವಾಜ್ಞೆ ಮೂಲಕ ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಕಾಯ್ದೆ ಜಾರಿಗೊಳಿಸಲು ಹೊರಟಿದೆ. ಅಲ್ಪಸಂಖ್ಯಾತ ಸಮುದಾಯವನ್ನು ಬೆದರಿಸುವ ಮತ್ತು ಅವರಿಗೆ ಕಿರುಕುಳ ನೀಡುವ ದುರುದ್ದೇಶದಿಂದಕಾಯ್ದೆ ಜಾರಿಗೊಳಿಸಲಾಗುತ್ತಿದೆ. ಅದರ, ಸುಗ್ರೀವಾಜ್ಞೆಯನ್ನು ತಿರಸ್ಕರಿಸಬೇಕೆಂದು ರಾಜ್ಯದ ರಾಜ್ಯಪಾಲರಿಗೆ ಮನವಿ ಮಾಡುತ್ತಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

‘ಆಮಿಷ, ಒತ್ತಡ, ಬೆದರಿಕೆಗಳ ಮೂಲಕ ನಡೆಯುವ ಬಲತ್ಕಾರದ ಮತಾಂತರಗಳನ್ನು ತಡೆಯಲು ನಮ್ಮ ಕಾನೂನು ಸಶಕ್ತವಾಗಿದೆ. ಹೀಗಿದ್ದಾಗ ಹೊಸ ಕಾಯ್ದೆಯ ಅವಶ್ಯಕತೆ ಏನಿದೆ? ಅಲ್ಪಸಂಖ್ಯಾತರನ್ನು ಬೆದರಿಸುವ ಮತ್ತು ಅವರಿಗೆ ಕಿರುಕುಳ ನೀಡುವ ದುರುದ್ದೇಶವಲ್ಲದೆ ಈ ಕಾಯ್ದೆಗೆ ಬೇರೆ ಸದುದ್ದೇಶಗಳೇನಿದೆ? ಸಹಬಾಳ್ವೆ-ಸೌಹಾರ್ದ ಪರಂಪರೆಯ ಹಿಂದೂ ಧರ್ಮದ ನೈಜ ಅನುಯಾಯಿಗಳು ಯಾರೂ ಇಂತಹದ್ದೊಂದು ಅನಗತ್ಯ ಕಾಯ್ದೆಗೆ ಒತ್ತಾಯಿಸಿಲ್ಲ. ಇದನ್ನು ಒಪ್ಪುವುದೂ ಇಲ್ಲ. ಇದು ಸಂಘ ಪರಿವಾರದ ರಾಜಕೀಯ ಹಿಂದುತ್ವದ ಅಜೆಂಡಾ ಆಗಿದೆ. ಇದನ್ನು ಸಹೃದಯ ಹಿಂದು ಬಾಂಧವರೆಲ್ಲರೂ ಖಂಡಿಸಬೇಕು’ ಎಂದು ಅವರು ಹೇಳಿದ್ದಾರೆ.

‘ಬಿಜೆಪಿ ಅಧಿಕಾರಕ್ಕೆ ಬಂದಾಗೆಲ್ಲ ಅಲ್ಪಸಂಖ್ಯಾತರು ಮತ್ತು ಅವರ ಪೂಜಾಸ್ಥಳಗಳ ಮೇಲೆ ದಾಳಿ ನಡೆಯುತ್ತದೆ. ಕರ್ನಾಟಕದಲ್ಲಿ ಚರ್ಚ್‌ಗಳ ಮೇಲೆ ನಡೆದಿರುವ ದಾಳಿಯಿಂದ ರಾಜ್ಯದ ಜನತೆ ತಲೆತಗ್ಗಿಸುವಂತಾಗಿದೆ. ಇಂತಹ ದಾಳಿಗೆ ತರಾತುರಿಯ ಮತಾಂತರ ನಿಷೇಧ ಕಾಯ್ದೆ ದುಷ್ಕರ್ಮಿಗಳ ಕೈಗೆ ನೀಡುವ ಆಯುಧ’ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

‘ಸ್ವಯಿಚ್ಛೆಯಿಂದ ಮತಾಂತರಗೊಳ್ಳುವ ಹಕ್ಕನ್ನು ಸಂವಿಧಾನವೇ ನೀಡಿದೆ. ಇದರ ಹೊರತಾದ ಮತಾಂತರ ತಡೆಯಲು ಕಾನೂನು ಇದೆ. ಕಾನೂನನ್ನು ಜಾರಿಗೆ ತರುವ ಪೊಲೀಸ್ ಇಲಾಖೆ ಮತ್ತು ತಪ್ಪು-ಒಪ್ಪುಗಳ ನ್ಯಾಯ ಒದಗಿಸುವ ನ್ಯಾಯಾಂಗದ ಮೇಲೆ ರಾಜ್ಯ ಸರ್ಕಾರಕ್ಕೆ ನಂಬಿಕೆ ಇಲ್ಲವೇ? ಅನ್ಯಾಯ - ದೌರ್ಜನ್ಯಕ್ಕೊಳಗಾಗುವ ಪ್ರತಿಯೊಬ್ಬ ಅಲ್ಪಸಂಖ್ಯಾತ ಬಂಧುವಿನ ಜೊತೆ ನಮ್ಮ ಪಕ್ಷ ನಿಲ್ಲಲಿದ್ದು, ಈ ಕಾಯ್ದೆಯ ವಿರುದ್ಧ ನಮ್ಮ ಪಕ್ಷ ಜನಾಂದೋಲನ ನಡೆಸಲಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT