ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರು–ಗಾಂಧಿ ಕುಟುಂಬವಿಲ್ಲದೆ ಕಾಂಗ್ರೆಸ್ ಉಳಿಯಬಹುದು, ಏಳಿಗೆಯಾಗಬಹುದು: ಸಂಜಯ್ ಝಾ

Last Updated 30 ಆಗಸ್ಟ್ 2020, 10:18 IST
ಅಕ್ಷರ ಗಾತ್ರ

ಬೆಂಗಳೂರು: ನೆಹರು–ಗಾಂಧಿ ಕುಟುಂಬವಿಲ್ಲದೆಯೂ ಕಾಂಗ್ರೆಸ್ ಪಕ್ಷವು ಉಳಿಯಬಲ್ಲದು ಮತ್ತು ಏಳಿಗೆಯಾಗಬಲ್ಲದು ಎಂದು ಪಕ್ಷದ ಮಾಜಿ ವಕ್ತಾರ ಸಂಜಯ್ ಝಾ ಅಭಿಪ್ರಾಯಪಟ್ಟಿದ್ದಾರೆ. ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ‘ಪ್ರಜಾವಾಣಿ’ ಸೋದರ ಪತ್ರಿಕೆ ‘ಡೆಕ್ಕನ್ ಹೆರಾಲ್ಡ್‌’ನಲ್ಲಿ ಬರೆದ ಲೇಖನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಕ್ಷದ ನಾಯಕತ್ವ ಸುಧಾರಣೆ ಬಯಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ನಾಯಕರನ್ನು ‘ಜಿ–23’ ಬ್ರಾಂಡ್ ಎಂದು ಉಲ್ಲೇಖಿಸಿರುವ ಝಾ, ಇದು ರಾಜಕೀಯ ಅಡ್ಡಿ ಉಂಟುಮಾಡುವವರ ಹೊಸ ಬ್ರಾಂಡ್‌ ಎಂದಿದ್ದಾರೆ.

‘ಈ 23 ಮಂದಿ ಕಾಂಗ್ರೆಸ್ ನಾಯಕರಲ್ಲಿ ಹಲವು ಶ್ರೇಣಿಯ ಖ್ಯಾತ ನಾಯಕರು (ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಮುಕುಲ್ ವಾಸ್ನಿಕ್, ಕಪಿಲ್ ಸಿಬಲ್), ಒಬ್ಬ ಜಾಗತಿಕ ಬೌದ್ಧಿಕ ಬ್ರಾಂಡ್ (ಶಶಿ ತರೂರ್) ಮತ್ತು ಬದಲಾವಣೆ ಬಯಸುವ ಯುವಕರು (ಮನೀಷ್ ತಿವಾರಿ, ಮಿಲಿಂದ್ ದಿಯೊರಾ, ಜಿತಿನ್ ಪ್ರಸಾದ್) ಇದ್ದಾರೆ. ಇದು ಪಕ್ಷದಲ್ಲಿನ ವಿಪರೀತ ಗೊಂದಲದಿಂದ(ಸತತ ಎರಡು ಲೋಕಸಭೆ ಚುನಾವಣೆ ಸೋಲು, ಇತರ ವೈಫಲ್ಯಗಳು) ತೀವ್ರವಾಗಿ ಕಂಗೆಟ್ಟ ಕಾಂಗ್ರೆಸ್ ನಾಯಕರ ಒಟ್ಟುಗೂಡಿಸುವಿಕೆಯಾಗಿದೆ. ಈ ನಾಯಕರು ಪತ್ರದಲ್ಲಿ ಪ್ರಸ್ತಾಪಿಸಿರುವ ವಿಷಯಗಳು ಅನಿರೀಕ್ಷಿತವಲ್ಲ. ಇದು ಕಾಂಗ್ರೆಸ್‌ನ ನಾಯಕತ್ವದಲ್ಲಿ ಭವಿಷ್ಯದಲ್ಲಿ ನೆಹರು–ಗಾಂಧಿ ಕುಟುಂಬದ ಪ್ರಸ್ತುತೆ ಬಗ್ಗೆ ಚರ್ಚೆ ಹುಟ್ಟುಹಾಕಿದೆ. 135 ವರ್ಷಗಳ ಇತಿಹಾಸವಿರುವ ಪಕ್ಷವು ನೆಹರು–ಗಾಂಧಿ ಕುಟುಂಬವಿಲ್ಲದೆ ಉಳಿಯಬಲ್ಲದೇ? ಈ ಪ್ರಶ್ನೆಗೆ ಹೌದು ಎಂಬುದೇ ಉತ್ತರ’ ಎಂದು ಝಾ ಉಲ್ಲೇಖಿಸಿದ್ದಾರೆ.

‘ಕಾಂಗ್ರೆಸ್‌ ಪಕ್ಷದಲ್ಲಿ ಮುನ್ನಡೆಸುವ ನಾಯಕರಿಲ್ಲ ಎಂದು ಭಾವಿಸುವುದು ತಪ್ಪುಕಲ್ಪನೆಯಾಗುತ್ತದೆ. ಹಾಗೆ ನೋಡಿದರೆ, ಬಿಜೆಪಿಯಂತಲ್ಲದೆ, ಕಾಂಗ್ರೆಸ್‌ನಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಇದಕ್ಕೆ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಮತ್ತು ಡಾ. ಮನಮೋಹನ್ ಸಿಂಗ್ ಅವರು ದೇಶದ ಆರ್ಥಿಕತೆ, ಆಡಳಿತ ಮತ್ತು ವಿದೇಶಾಂಗ ನೀತಿಯನ್ನು ಮರುರೂಪಿಸಿರುವುದೇ ಉದಾಹರಣೆ’ ಎಂದು ಝಾ ಬರೆದಿದ್ದಾರೆ.

‘ಯಾರೊಬ್ಬರಿಗೂ ಒಮ್ಮತದಿಂದ ಪೂರ್ತಿಯಾಗಿ ಅವಕಾಶ ನೀಡದೇ, ಅವರು ಏನು ಮಾಡಬಹುದು ಎಂಬ ನಿರ್ಣಯಕ್ಕೆ ಮೊದಲೇ ಬರುವುದು ಸರಿಯಾಗುವುದಿಲ್ಲ. ಜಾತ್ಯತೀತ ವೈವಿಧ್ಯತೆಯನ್ನು ರಕ್ಷಿಸುವ ಉದಾರವಾದಿ, ಪ್ರಜಾಪ್ರಭುತ್ವ ಸಮಾಜವನ್ನು ನಂಬುವ ಭಾರತದ ಪರಿಕಲ್ಪನೆಯನ್ನು ಬೆಂಬಲಿಸುವ ಅನೇಕರು ನನಗೆ ತಿಳಿದಿದ್ದಾರೆ’ ಎಂದೂ ಅವರು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT