ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಪರ ಕೈ ನಾಯಕರ ಶಕ್ತಿ ಪ್ರದರ್ಶನ

ದೆಹಲಿಯಲ್ಲಿ ಕರ್ನಾಟಕ ಕಾಂಗ್ರೆಸ್‌ನ ಶಾಸಕರು, ಪರಿಷತ್ ಸದಸ್ಯರ ಧರಣಿ
Last Updated 22 ಜೂನ್ 2022, 18:22 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ತನಿಖಾ ಸಂಸ್ಥೆಗಳು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿವೆ ಎಂದು ಆರೋಪಿಸಿ ಕರ್ನಾಟಕ ಕಾಂಗ್ರೆಸ್‌ನ ಬಹುತೇಕ ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರು ಪ್ರತಿಭಟನೆ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿ‍ಪ್ರಸಾದ್‌ ನೇತೃತ್ವದಲ್ಲಿ ಎಐಸಿಸಿ ಕಚೇರಿ ಆವರಣದಲ್ಲಿ ಬೆಳಿಗ್ಗೆಯಿಂದ ಸಂಜೆ ವರೆಗೆ ಧರಣಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಜವಾಹರ್‌ಲಾಲ್‌ ನೆಹರು ಕಾಲದಲ್ಲಿ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಆರಂಭವಾಯಿತು. ‍ಪತ್ರಿಕೆಯನ್ನು ಪುನರುಜ್ಜೀವನಗೊಳಿಸಲು ಟ್ರಸ್ಟ್‌ ಸ್ಥಾಪಿಸಲಾಯಿತು. ಇದರಲ್ಲಿ ನಯಾಪೈಸೆಯನ್ನು ಯಾರೂ ಪಡೆದಿಲ್ಲ. ₹2 ಸಾವಿರ ಕೋಟಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಜತೆಗೆ, ತನಿಖಾ ಸಂಸ್ಥೆಗಳ ಮೂಲಕ ನಮ್ಮ ನಾಯಕರಿಗೆ ಕಿರುಕುಳ ನೀಡಲಾಗುತ್ತಿದೆ. ಇದಕ್ಕೆಲ್ಲ ನಮ್ಮ ಪಕ್ಷ ಬೆದರುವುದಿಲ್ಲ’ ಎಂದರು.

ಸಿದ್ದರಾಮಯ್ಯ ಮಾತನಾಡಿ, ‘ಮೂರು ನಾಲ್ಕು ಗಂಟೆ ವಿಚಾರಣೆ ಮಾಡುವುದನ್ನು ನಾವು ನೋಡಿದ್ದೇವೆ. ರಾಹುಲ್‌ ಅವರನ್ನು 54 ವಿಚಾರಣೆ ಮಾಡಿದ್ದಾರೆ. ಇದರಲ್ಲಿ ರಾಜಕೀಯ ದುರುದ್ದೇಶ ಇದೆ’ ಎಂದು ಕಿಡಿಕಾರಿದರು.

ಡಿ.ಕೆ. ಶಿವಕುಮಾರ್ ಮಾತನಾಡಿ, ‘ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ನನಗೂ ಬಿಜೆಪಿ ಕಿರುಕುಳ ನೀಡಿತ್ತು. ಅದೇ ಮಾದರಿಯಲ್ಲಿ ರಾಹುಲ್‌ ಗಾಂಧಿ ಅವರಿಗೂ ತೊಂದರೆ ಕೊಡುತ್ತಿದೆ’ ಎಂದರು.

ಶಾಸಕ ಕೃಷ್ಣ ಬೈರೇಗೌಡ, ‘ಕರ್ನಾಟಕದಲ್ಲಿ ಶೇ 40 ಭ್ರಷ್ಟಾಚಾರ ಇದೆ ಎಂದು ಗುತ್ತಿಗೆದಾರರ ಸಂಘದವರೇ ಪ್ರಧಾನಿ ಅವರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಧಾನಿ ಅವರು ಚಕಾರ ಎತ್ತಿಲ್ಲ. ಸಾವಿರಾರು ಕೋಟಿ ಅವ್ಯವಹಾರದ ಬಗ್ಗೆ ಅವರು ಮೊದಲು ಕ್ರಮ ಕೈಗೊಳ್ಳಬೇಕಿತ್ತು. ಅದರ ಬದಲು ಎಂಟು ವರ್ಷಗಳ ಹಿಂದೆ ಮುಕ್ತಾಯಗೊಂಡ ಪ್ರಕರಣದ ವಿಚಾರಣೆ ನಡೆಸಲಾಗುತ್ತಿದೆ. ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಯಾವುದೇ ಅಕ್ರಮ ನಡೆದಿಲ್ಲ’ ಎಂದರು.

ಶಾಸಕರಾದ ಆರ್‌.ವಿ.ದೇಶಪಾಂಡೆ, ಡಾ.ಜಿ.ಪರಮೇಶ್ವರ,ಕೆ.ಜೆ.ಜಾರ್ಜ್‌, ಕೆ.ಆರ್.ರಮೇಶ್‌ ಕುಮಾರ್‌, ದಿನೇಶ್ ಗುಂಡೂರಾವ್‌, ಯು.ಟಿ.ಖಾದರ್‌, ಮಾಜಿ ಸಚಿವರಾದ ಎಚ್‌.ಆಂಜನೇಯ, ರಮಾನಾಥ ರೈ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT