ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಅಧಿಕೃತ ವಿರೋಧ ಪಕ್ಷದ ಸ್ಥಾನವೂ ಅನುಮಾನ

Last Updated 8 ಡಿಸೆಂಬರ್ 2022, 11:31 IST
ಅಕ್ಷರ ಗಾತ್ರ

ಅಹಮದಾಬಾದ್: ಗುಜರಾತ್‌ನ ಕಳೆದ ವಿಧಾನಸಭೆ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ವಿರೋಧ ಪಕ್ಷದ ಸ್ಥಾನವನ್ನೂ ಉಳಿಸಿಕೊಳ್ಳಲು ಹೆಣಗಾಡುತ್ತಿದೆ.

ಸಂಜೆ 4 ಗಂಟೆಯ ಟ್ರೆಂಡ್ ಪ್ರಕಾರ, ಕಾಂಗ್ರೆಸ್ ಕೇವಲ 16 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ 16 ಕ್ಷೇತ್ರಗಳಲ್ಲಿ ಗೆದ್ದರೂ ಸಹ ಕಾಂಗ್ರೆಸ್‌ಗೆ ಗುಜರಾತ್ ವಿಧಾನಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನ ಸಿಗುವುದಿಲ್ಲ. ಸದನದ ನಿಯಮಗಳ ಪ್ರಕಾರ, ಯಾವುದೇ ಪಕ್ಷ ಅಧಿಕೃತ ವಿರೋಧ ಪಕ್ಷವಾಗಿ ಮಾನ್ಯತೆ ಪಡೆಯಲು ರಾಜ್ಯದ ಒಟ್ಟು ವಿಧಾನಸಭಾ ಕ್ಷೇತ್ರಗಳ ಪೈಕಿ ಶೇ.10 ರಷ್ಟು ಕ್ಷೇತ್ರಗಳಲ್ಲಿ ಗೆಲುವು ಪಡೆದಿರಬೇಕು. ಅಂದರೆ, ಕನಿಷ್ಠ 18 ಸ್ಥಾನ ಗೆಲ್ಲಬೇಕಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಕೇವಲ 52 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನು ಕಳೆದುಕೊಂಡಿತ್ತು.

ಗುಜರಾತ್‌ನಲ್ಲಿ ಪ್ರಚಂಡ ಬಹುಮತದತ್ತ ದಾಪುಗಾಲಿಟ್ಟಿರುವ ಬಿಜೆಪಿ 157ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ.

1995ರಿಂದ ಬಿಜೆಪಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿಲ್ಲ. ಸತತ ಏಳನೇ ಬಾರಿಗೆ ಅಧಿಕಾರದತ್ತ ಮುಖ ಮಾಡಿದೆ.

ಗುಜರಾತ್‌ನಲ್ಲಿ 30ಕ್ಕೂ ಅಧಿಕ ರ್‍ಯಾಲಿಗಳನ್ನು ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಭಾರಿ ಪ್ರಚಾರ ನಡೆಸಿದ್ದರು. ಇಂದು ಸಂಜೆ 6.30ರ ವೇಳೆಗೆ ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮೋದಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT