ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಮಹಾಧಿವೇಶನ: ಸಮಾನ ಮನಸ್ಕ ಒಕ್ಕೂಟಕ್ಕೆ ಇಂಗಿತ

Last Updated 25 ಫೆಬ್ರವರಿ 2023, 21:45 IST
ಅಕ್ಷರ ಗಾತ್ರ

ರಾಯಪುರ: 2024ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಯನ್ನು ಸಮರ್ಥವಾಗಿ ಎದುರಿಸಲು ಸಮಾನ ಮನಸ್ಕ ಪ್ರತಿಪಕ್ಷಗಳು ಒಗ್ಗೂಡಿದ ಮೈತ್ರಿಕೂಟ ಅಗತ್ಯವಿದೆ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ. ಸಾರ್ವತ್ರಿಕ ಚುನಾವಣೆಗೂ ಮುನ್ನ ಜಾತ್ಯತೀತ ಸಿದ್ಧಾಂತದ ಪ್ರಾದೇಶಿಕ ಪಕ್ಷಗಳನ್ನು ಗುರುತಿಸಿ, ಅವುಗಳನ್ನು ಒಗ್ಗೂಡಿಸುವ ಭರವಸೆಯನ್ನು ಪಕ್ಷ ನೀಡಿದೆ.

ರಾಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಮಹಾಧಿವೇಶನದಲ್ಲಿ ತೆಗೆದುಕೊಳ್ಳಲಾದ ರಾಜಕೀಯ ನಿರ್ಣಯ ಹಾಗೂ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣದಲ್ಲಿ ಈ ವಿಚಾರ ಮುಖ್ಯವಾಗಿ ಪ್ರಸ್ತಾಪವಾಗಿದೆ.

2004ರಿಂದ 2014ರವರೆಗೆ ಕಾಂಗ್ರೆಸ್ ಪಕ್ಷವು ಸಮಾನ ಮನಸ್ಕ ಪಕ್ಷಗಳ ಒಕ್ಕೂಟ ಸರ್ಕಾರದ ನಾಯಕತ್ವ ವಹಿಸಿದ್ದ ರೀತಿಯಲ್ಲಿ ಮತ್ತೊಮ್ಮೆ ಅದೇ ನೆಲೆಯ ಮೈತ್ರಿಕೂಟವೊಂದರ ಮುಂದಾಳತ್ವ ವಹಿಸಲು ಸಿದ್ಧ ಎಂದು ಖರ್ಗೆ ಹೇಳಿದ್ದಾರೆ. ಜನವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಮೋದಿ ಸರ್ಕಾರದ ವಿರುದ್ಧ ಸಮರ್ಥ ಪರ್ಯಾಯ ಮೈತ್ರಿಕೂಟ ರಚಿಸಲು ಪಕ್ಷ ಸಿದ್ಧವಾಗಿದೆ ಎಂಬ ಸಂದೇಶವನ್ನು ಅವರು ತಮ್ಮ ಭಾಷಣದಲ್ಲಿ ನೀಡಿದ್ದಾರೆ.

2024ರ ಸಾರ್ವತ್ರಿಕ ಚುನಾವಣೆಗಾಗಿ, ಸಾಮಾಜಿಕ ಭದ್ರತೆಗೆ ಒತ್ತು ನೀಡುವ ‘ವಿಷನ್ ಡಾಕ್ಯುಮೆಂಟ್’ ಸಿದ್ಧಪಡಿಸಲು ಕಾಂಗ್ರೆಸ್ ನಿರ್ಧರಿಸಿದೆ. ಈಗಿರುವ ಹಿಮ್ಮುಖ ಬೆಳವಣಿಗೆಯ ಪಥಕ್ಕೆ ಬದಲಾಗಿ, ಜೀವನ ಭದ್ರತೆ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಮಾನವೀಯ ಸ್ಪರ್ಶದ ಪ್ರಗತಿಪಥಕ್ಕೆ ಆದ್ಯತೆ ನೀಡುವುದಾಗಿ ಪಕ್ಷ ಭರವಸೆ ನೀಡಿದೆ.

ಪ್ರತಿಪಕ್ಷಗಳ ಒಕ್ಕೂಟವನ್ನು ರಚಿಸುವುದರ ಜೊತೆಗೆ ಕೃಷಿ ಕಾರ್ಮಿಕರು, ಯುವಕರು, ಮಹಿಳೆಯರಿಗೆ ಪಕ್ಷದಲ್ಲಿ ಇನ್ನಷ್ಟು ಆದ್ಯತೆ ನೀಡುವ, ಕಾರ್ಯಕರ್ತರ ಹಾಗೂ ಜನಬೆಂಬಲದ ಪಕ್ಷವನ್ನಾಗಿ ಮರುರೂಪಿಸುವ ಹಾಗೂ ಆ ಮೂಲಕ ಸಮೃದ್ಧ ಭಾರತವನ್ನು ಕಟ್ಟುವ ಉದ್ದೇಶವನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ.

ಮುಂಬರುವ ಲೋಕಸಭಾ ಚುಣಾವಣೆಯಲ್ಲಿ ಎದುರಾಳಿಗಳೇ ಇಲ್ಲ ಎಂದು ಘೋಷಿಸುವ ಮೂಲಕ ಬಿಜೆಪಿ ಒಡ್ಡಿರುವ ಸವಾಲನ್ನು ಸ್ವೀಕರಿಸಲು ಪಕ್ಷ ನಿರ್ಧರಿಸಿದೆ. ಒಂಬತ್ತು ರಾಜ್ಯಗಳ ವಿಧಾನಸಭೆಗಳು ಹಾಗೂ ಲೋಕಸಭೆಗೆ ನಡೆಯಲಿರುವ ಚುನಾವಣೆ ದೇಶದ ಭವಿಷ್ಯದ ದೃಷ್ಟಿಯಿಂದ ಮಹತ್ವವಾದವುಗಳು ಎಂದು ಪಕ್ಷ ಪರಿಗಣಿಸಿದೆ. ಈಗ ಧ್ರುವೀಕರಣಗೊಂಡಿರುವ ರಾಜಕಾರಣದ ಕೇಂದ್ರ ಸ್ಥಾನವನ್ನು ಮತ್ತೆ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ರಾಜಕೀಯದ ಮರುವ್ಯಾಖ್ಯಾನ ಮಾಡುವ ಅಗತ್ಯವಿದೆ ಎಂದು ಪಕ್ಷ ಒತ್ತಿ ಹೇಳಿದೆ.

ನಾಯಕತ್ವದಲ್ಲಿ ಹೊಸ ರಕ್ತ ಹರಿಯಲಿದೆ ಎಂದಿರುವ ಕಾಂಗ್ರೆಸ್, ಪಕ್ಷದಲ್ಲಿ ಯುವಜನತೆ ಹಾಗೂ ಅನುಭವಿಗಳಿಗೆ ಸಮಾನ ಆದ್ಯತೆ ಸಿಗಲಿದೆ ಎಂಬ ಸುಳಿವನ್ನು ಪಕ್ಷ ನೀಡಿದೆ.

ಬಿಜೆಪಿಗೆ ಲಾಭ–ಎಚ್ಚರಿಕೆ: ತೃತೀಯರಂಗ ರಚನೆ ಯತ್ನದಿಂದ ಬಿಜೆಪಿಗೆ ಲಾಭ ಮಾಡಿಕೊಟ್ಟಂತಾಗುತ್ತದೆ ಎಂದು ಕಾಂಗ್ರೆಸ್ ಎಚ್ಚರಿಸಿದೆ. ತೃಣಮೂಲ ಕಾಂಗ್ರೆಸ್, ಎಎಪಿ ಹಾಗೂ ಬಿಆರ್‌ಎಸ್ ಪಕ್ಷಗಳು ಈ ದಿಸೆಯಲ್ಲಿ ನಡೆಸುತ್ತಿರುವ ಚಟುವಟಿಕೆಗಳನ್ನು ಕಾಂಗ್ರೆಸ್ ಪರೋಕ್ಷವಾಗಿ ಟೀಕಿಸಿದಂತೆ ತೋರುತ್ತದೆ.

ಅಧ್ಯಕ್ಷೀಯ ಭಾಷಣ ಮಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ದೇಶಕ್ಕೆ ಕಠಿಣ ಸಮಯ ಎದುರಾಗಿದ್ದು, ಹೊಸ ಸತ್ಯಾಗ್ರಹದ ಅಗತ್ಯವಿದೆ ಎಂದರು. ‘ಸೇವೆ, ಸಂಘರ್ಷ, ಬಲಿದಾನ, ದೇಶ ಮೊದಲು’ ಎಂಬ ಹೊಸ ಘೋಷಣೆಯಡಿ ದಿಟ್ಟ ನಿಲುವು ತೆಗೆದುಕೊಳ್ಳಬೇಕಿದೆ ಎಂದು ಕರೆ ನೀಡಿದರು. ದೆಹಲಿಯಲ್ಲಿ ಕುಳಿತಿರುವ ನಾಯಕರ ಡಿಎನ್‌ಎಯಲ್ಲಿ ಬಡವರ ವಿರೋಧಿ ಗುಣವಿದೆ ಎಂದು
ಆರೋಪಿಸಿದರು.

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯು ಪಕ್ಷಕ್ಕೆ ಮಹತ್ವದ ತಿರುವು ನೀಡಿದೆ ಎಂದು ಸೋನಿಯಾ ಗಾಂಧಿ ಅವರು ತಮ್ಮ ಭಾಷಣದಲ್ಲಿ ಹೇಳಿದರು. ಪಕ್ಷ ಮತ್ತು ದೇಶದ ಜನರ ನಡುವಿನ ಸಂವಾದ ಪರಂಪರೆಯನ್ನು ಈ ಯಾತ್ರೆ ಮರುಸ್ಥಾಪಿಸಿದೆ. ಜನರ ಜೊತೆಗೆ ಪಕ್ಷ ನಿಲ್ಲಲಿದೆ ಹಾಗೂ ಅವರಿಗಾಗಿ ಹೋರಾಟ ಮುಂದುವರಿಸಲಿದೆ ಎಂದರು.

ಮಹಾಧಿವೇಶನದ ನಿರ್ಣಯಗಳು:

*ಧರ್ಮ, ಜಾತಿ, ಭಾಷೆ ಆಧಾರದಲ್ಲಿ ನಡೆಯುತ್ತಿರುವ ತಾರತಮ್ಯ ಮತ್ತು ದ್ವೇಷಾಪರಾಧ ನಿಗ್ರಹಕ್ಕೆ ಕಾನೂನು

*ಸಾಮೂಹಿಕ ಪಕ್ಷಾಂತರ ತಡೆಯಲು ಸಂವಿಧಾನಕ್ಕೆ ತಿದ್ದುಪಡಿ

*ದೋಷಪೂರಿತ ಚುನಾವಣಾ ಬಾಂಡ್ ಬದಲಿಗೆ ರಾಷ್ಟ್ರೀಯ ಚುನಾವಣಾ ನಿಧಿ ಸ್ಥಾಪನೆ ಪ್ರಸ್ತಾವ

*ಇವಿಎಂ ವಿಚಾರವಲ್ಲಿ ಸಮಾನ ಮನಸ್ಕ ಪಕ್ಷಗಳ ಜತೆ ಸಮಗ್ರ ಮಾತುಕತೆ; ಚುನಾವಣಾ ಆಯೋಗದ ಜತೆ ಚರ್ಚೆ

*ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಕಾನೂನು ರದ್ದುಪಡಿಸಲು ಪರಿಶೀಲನೆ

ಸೋನಿಯಾ ನಿವೃತ್ತಿ ಸುಳಿವು?

ತಮ್ಮ ‘ಇನ್ನಿಂಗ್ಸ್’ ಅನ್ನು ಭಾರತ್ ಜೋಡೊ ಯಾತ್ರೆಯೊಂದಿಗೆ ಮುಕ್ತಾಯಗೊಳಿಸುತ್ತಿದ್ದೇನೆ ಎಂಬುದಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ನೀಡಿರುವ ಹೇಳಿಕೆಯು, ಅವರ ರಾಜಕೀಯ ನಿವೃತ್ತಿಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.ಕಾಂಗ್ರೆಸ್ ಮಹಾಧಿವೇಶದನಲ್ಲಿ ಶನಿವಾರ ಅವರು ಮಾಡಿದ ಭಾಷಣವು, ಸಕ್ರಿಯ ರಾಜಕೀಯದಿಂದ ನಿವೃತ್ತಿ ಪಡೆಯುವ ಸೂಚನೆ ನೀಡುವಂತಿದೆ ಎಂದು ವಿಶ್ಲೇಷಿಸಲಾಗಿದೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಪಕ್ಷದ ಮುಖಂಡರು, ಸೋನಿಯಾ ಅವರು ತಮ್ಮ ಅಧ್ಯಕ್ಷೀಯ ಅವಧಿ ಮುಕ್ತಾಯದ ಕುರಿತಷ್ಟೇ ಈ ಮಾತು ಹೇಳಿದ್ದಾರೆ ಎಂದು ಹೇಳಿದ್ದಾರೆ.

ಸೋನಿಯಾ ಅವರು ಹಿಂದಿನ ದಿನಗಳನ್ನು ತಮ್ಮ ಭಾಷಣದಲ್ಲಿ ಮೆಲುಕು ಹಾಕಿದರು. ‘1998ರಲ್ಲಿ ಅಧ್ಯಕ್ಷೆ ಹುದ್ದೆ ವಹಿಸಿಕೊಂಡಿದ್ದು ತಮಗೆ ಸಿಕ್ಕ ದೊಡ್ಡ ಗೌರವ. 25 ವರ್ಷಗಳಲ್ಲಿ ಪಕ್ಷ ಸಾಕಷ್ಟು ಏಳುಬೀಳು ಕಂಡಿದೆ. 2004 ಹಾಗೂ 2009ರ ಚುನಾವಣಾ ಗೆಲುವು, ಮನಮೋಹನ್ ಸಿಂಗ್ ಅವರ ಸಮರ್ಥ ನಾಯಕತ್ವ ವೈಯಕ್ತಿಕವಾಗಿ ತೃಪ್ತಿ ನೀಡಿವೆ. ಭಾರತ್ ಜೋಡೊ ಯಾತ್ರೆಯೊಂದಿಗೆ ನನ್ನ ಇನ್ನಿಂಗ್ಸ್ ಮುಕ್ತಾಯವಾಗುತ್ತಿರುವುದು ಸಂತಸ ನೀಡಿದೆ’ ಎಂದು ಸೋನಿಯಾ ಹೇಳಿದರು.

*ಮೋದಿ ಸರ್ಕಾರದ ಆರ್ಥಿಕ ನೀತಿಗಳ ಪರಿಶೀಲನೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT