ಭಾನುವಾರ, ಅಕ್ಟೋಬರ್ 25, 2020
22 °C

ಕೃಷಿ ಮಸೂದೆಗಳನ್ನು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ರಾಜ್ಯಸಭೆಯಲ್ಲಿ ಅನುಮೋದನೆ ಪಡೆದ ಮಸೂದೆಗಳನ್ನು ರೈತ ವಿರೋಧಿ ಎಂದು ಕರೆದಿರುವ ಕಾಂಗ್ರೆಸ್, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿಯು ರೈತರನ್ನು ತಪ್ಪುದಾರಿಗೆ ಎಳೆಯುತ್ತಿದೆ ಎಂದು ಆರೋಪಿಸಿದೆ. 

ಚಂಡೀಗಡದಿಂದ ದೆಹಲಿಯವರೆಗೆ ರೈತರು ಟ್ರ್ಯಾಕ್ಟರ್ ಜಾಥಾ ಮೂಲಕ ಪ್ರತಿಭಟನೆ ಹಮ್ಮಿಕೊಂಡಿದ್ದರು. ‘ಕಿಸಾನ್ ಆಕ್ರೋಶ ಜಾಥಾ’ವನ್ನು ಪಂಜಾಬ್–ಹರಿಯಾಣ ಗಡಿಯಲ್ಲಿ ತಡೆಯಲಾಯಿತು. ಪಂಜಾಬ್ ಹಾಗೂ ಹರಿಯಾಣದಲ್ಲಿ ಭಾರತ್ ಕಿಸಾನ್ ಯೂನಿಯನ್ ಸೇರಿ ಹಲವು ರೈತ ಸಂಘಟನೆಗಳು ರಸ್ತೆತಡೆ, ರೈಲು ತಡೆ ನಡೆಸಿದವು. 

ಕೃಷಿ ಮಸೂದೆ ಸಮರ್ಥನೆ: 

ಕೇಂದ್ರ ಸಚಿವರು ಮತ್ತು ಬಿಜೆಪಿ ನಾಯಕರು ಸಂಸತ್ತಿನ ಹೊರಗೆ ಕೃಷಿ ಮಸೂದೆಗಳ ಬಲವಾದ ಸಮರ್ಥನೆಗೆ ಇಳಿದಿದ್ದಾರೆ. ವಿರೋಧ ಪಕ್ಷಗಳು, ಬಿಜೆಪಿ–ಆರ್‌ಎಸ್‌ಎಸ್‌ನ ರೈತ ಮತ್ತು ಕಾರ್ಮಿಕ ಸಂಘಟನೆಗಳು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ಯತ್ನಿಸಿದ್ದಾರೆ. ರಾಜ್ಯಸಭೆಯಲ್ಲಿ ಎರಡು ಕೃಷಿ ಮಸೂದೆಗಳು ಅನುಮೋದನೆ ಪಡೆದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಟ್ವೀಟ್ ಮಾಡಿದರು. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂಸತ್ತಿನ ಹೊರಗೆ ಮಸೂದೆಗಳ ಪರವಾಗಿ ಮಾತನಾಡಿದ್ದಾರೆ.

ಈ ಮಸೂದೆಗಳು ಕಾಯ್ದೆಯಾಗಿ ಜಾರಿಯಾದರೆ, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆ ರದ್ದಾಗುತ್ತದೆ. ಇದು ಅಪಾಯಕಾರಿ ಬೆಳವಣಿಗೆ ಎಂದು ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ. ಎಂಎಸ್‌ಪಿ ವ್ಯವಸ್ಥೆ ಮುಂದುವರಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಡ್ಡಾ ಮತ್ತು ರಾಜನಾಥ್‌ ಸಿಂಗ್ ಸಹ ಇದೇ ಮಾತು ಹೇಳಿದ್ದಾರೆ.

‘ಎಂಎಸ್‌ಪಿ ಪದ್ಧತಿ ಮುಂದುವರಿಯಲಿದೆ. ಸರ್ಕಾರವು ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸಲಿದೆ. ರೈತರು ಮತ್ತು ಅವರ ಮುಂದಿನ ತಲೆಮಾರಿನವರ ಜೀವನವನ್ನು ಸುಧಾರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತೇವೆ’ ಎಂದು ಮೋದಿ ತಮ್ಮ ಟ್ವಿಟರ್ ವಿಡಿಯೊ ಮೂಲಕ ಹೇಳಿದ್ದಾರೆ.

===========

ಕೋಟ್ಸ್

ಎಂಎಸ್‌ಪಿ ಪದ್ಧತಿ ಮುಂದುವರಿಯಲಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಈ ಮೂರೂ ಮಸೂದೆಗಳಲ್ಲಿ ಎಲ್ಲಿಯೂ ಎಂಎಸ್‌ಪಿಯ ಉಲ್ಲೇಖವೇ ಇಲ್ಲ 

–ಸ್ವದೇಶಿ ಜಾಗರಣ ಮಂಚ್, ಆರ್‌ಎಸ್‌ಎಸ್‌ನ ಸಹಸಂಘಟನೆ

**********

ಎಪಿಎಂಸಿ ಮತ್ತು ಎಂಎಸ್‌ಪಿ ವ್ಯವಸ್ಥೆಗಳು ರದ್ದಾಗುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ಇವನ್ನು ರದ್ದುಪಡಿಸುವ ಬಗ್ಗೆ ಯಾವ ಮಸೂದೆಯಲ್ಲೂ ಉಲ್ಲೇಖ ಇರಲಿಲ್ಲ

–ರಾಜನಾಥ್ ಸಿಂಗ್, ರಕ್ಷಣಾ ಸಚಿವ

**********

ಭಾರತದ ಕೃಷಿರಂಗದಲ್ಲೇ ಇದು ಪರ್ವಕಾಲ. ಕೃಷಿಕ್ಷೇತ್ರ ಸಂಪೂರ್ಣ ಪರಿವರ್ತನೆಯಾಗಲಿದೆ. ಮಧ್ಯವರ್ತಿಗಳ ಹಾವಳಿ ಕೊನೆಯಾಗಲಿದೆ

–ನರೇಂದ್ರ ಮೋದಿ, ಪ್ರಧಾನಿ

**********

ರೈತರು ಹೊಲದಲ್ಲಿ ಚಿನ್ನ ಬೆಳೆಯುತ್ತಾರೆ. ಸರ್ಕಾರವು ಅಂತಹ ರೈತರು ರಕ್ತದ ಕಣ್ಣೀರು ಸುರಿಸುವಂತೆ ಮಾಡಿದೆ. ಕನಿಷ್ಠ ಬೆಂಬಲ ಬೆಲೆಗೆ ಖಾತರಿ ಏಕಿಲ್ಲ?

ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

**********

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಾವು 22 ಭರವಸೆ ನೀಡಿದ್ದೆವು. ಆದರೆ ಬಿಜೆಪಿ ಕೇವಲ ಎರಡನ್ನು ಎತ್ತಿಕೊಂಡು ಎಲ್ಲರನ್ನು ದಾರಿ ತಪ್ಪಿಸುತ್ತಿದೆ. ಮಸೂದೆಗಳು ಕಾರ್ಪೊರೇಟ್ ಜನರ ಪರವಾಗಿದ್ದು, ರೈತರನ್ನು ಅಪಾಯಕ್ಕೆ ಸಿಲುಕಿಸುತ್ತವೆ

-ಅಹ್ಮದ್‌ ಪಟೇಲ್, ಕಾಂಗ್ರೆಸ್ ನಾಯಕ

 

ರೈತರ ವಿರೋಧಿ ಮಸೂದೆಗಳನ್ನು ಖಂಡಿಸಿ ಹರಿಯಾಣದ ಜಿಲ್ಲಾಕೇಂದ್ರಗಳಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಸೂದೆಗಳನ್ನು ತೆರವುಗೊಳಿಸಲಿದೆ

–ಕುಮಾರಿ ಶೆಲ್ಜಾ, ಹರಿಯಾಣ ಕಾಂಗ್ರೆಸ್ ಘಟಕದ ಅಧ್ಯಕ್ಷೆ

 

ಇದು ಪ್ರಜಾಪ್ರಭುತ್ವದ ಕಪ್ಪು ದಿನ. ಯಾವುದೇ ಮಸೂದೆಯನ್ನು ಅಂಗೀಕರಿಸಲಾಗಿಲ್ಲ. ಆದರೆ ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಇದು ಪ್ರಜಾಪ್ರಭುತ್ವದ ಕೊಲೆ

ಅಭಿಷೇಕ್ ಮನುಸಿಂಘ್ವಿ, ಕಾಂಗ್ರೆಸ್ ಮುಖಂಡ

**********

ಸಂಸತ್ತಿನ ಕಾರ್ಯವಿಧಾನಗಳು, ನಿಯಮಗಳು ಮತ್ತು ಸಂಪ್ರದಾಯಗಳನ್ನು ತುಳಿದು ರೈತ ವಿರೋಧಿ ಮಸೂದೆಗಳಿಗೆ ಅನುಮೋದನೆ ಪಡೆದ ಸರ್ಕಾರದ ವರ್ತನೆ ಸರಿಯಾದುದಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ

ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ಮುಖಂಡ

**********

ಸರ್ಕಾರವು 80 ಕೋಟಿ ರೈತರ ಜೀವನ ನಾಶ ಮಾಡಲು ಹೊರಟಿದೆ. ಲಾಲ್‌ ಬಹಾದ್ದೂರ್ ಶಾಸ್ತ್ರಿ ಅವರು ‘ಜೈ ಜವಾನ್ ಜೈ ಕಿಸಾನ್’ ಘೋಷಣೆ ನೀಡಿದರು. ಆದರೆ ಈಗಿನ ಸರ್ಕಾರವು ರೈತರ ಬಾಳನ್ನು ನರಕಕ್ಕೆ ತಳ್ಳುತ್ತಿದೆ

–ಬಿ.ವಿ.ಶ್ರೀನಿವಾಸ್, ಭಾರತೀಯ ಯುವಕಾಂಗ್ರೆಸ್ ಅಧ್ಯಕ್ಷ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು