ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ನೀತಿ ಮರು ರೂಪಿಸುವುದು ಅಗತ್ಯ: ಕಾಂಗ್ರೆಸ್‌

ಕಾಂಗ್ರೆಸ್ ಚಿಂತನ ಶಿಬಿರ: ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಮೂರು ವರ್ಷ ವಿಸ್ತರಣೆಗೆ ಒತ್ತಾಯ
Last Updated 14 ಮೇ 2022, 20:34 IST
ಅಕ್ಷರ ಗಾತ್ರ

ಉದಯಪುರ: ಭಾರತದಅರ್ಥ ವ್ಯವಸ್ಥೆಯು ತೀವ್ರ ಕಳವಳಕಾರಿ ಸ್ಥಿತಿಯಲ್ಲಿದೆ. ಆರ್ಥಿಕ ನೀತಿಗಳನ್ನು ಮರುರೂಪಿಸಬೇಕಿದೆ ಎಂದು ಕಾಂಗ್ರೆಸ್‌ ಪಕ್ಷವು ಶನಿವಾರ ಹೇಳಿದೆ. ‘ಭಾರತ ಪ್ರಕಾಶಿಸುತ್ತಿದೆ’ ಎಂಬ ಅಭಿಯಾನವನ್ನು ಸೋಲಿಸಿದ ರೀತಿಯಲ್ಲಿಯೇ ನರೇಂದ್ರ ಮೋದಿ ಅವರು ಸೃಷ್ಟಿಸಿರುವ ಭ್ರಮಾಲೋಕವನ್ನು ಒಡೆದು ಹಾಕಲು ಸಾಧ್ಯ ಎಂಬ ವಿಶ್ವಾಸವನ್ನು ಕಾಂಗ್ರೆಸ್‌ ವ್ಯಕ್ತಪಡಿಸಿದೆ.

ಆರ್ಥಿಕ ನೀತಿಗೆ ಸಂಬಂಧಿಸಿ ಮೋದಿ ನೇತೃತ್ವದ ಸರ್ಕಾರದ ವೈಫಲ್ಯವನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವಲ್ಲಿ ಪಕ್ಷ ಹಿಂದೆ ಬಿದ್ದಿದೆ. ಆದರೆ, ಇನ್ನು ಮುಂದೆ ಪಕ್ಷದ ಸಂವಹನ ಕಾರ್ಯತಂತ್ರವನ್ನು ಇನ್ನಷ್ಟು ಹರಿತಗೊಳಿಸಲಾಗುವುದು ಎಂದು ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಹೇಳಿದ್ದಾರೆ. ಕಾಂಗ್ರೆಸ್‌ ಚಿಂತನ ಶಿಬಿರದ ಎರಡನೇ ದಿನವಾದ ಶನಿವಾರ ಅವರು ಮಾತನಾಡಿದರು.

ಬಿಜೆಪಿ ಆಳ್ವಿಕೆ ಇರುವ ರಾಜ್ಯ ಸರ್ಕಾರಗಳೂ ಸೇರಿದಂತೆ ಕೇಂದ್ರ ಮತ್ತು ರಾಜ್ಯಗಳ ನಡುವಣ ವಿಶ್ವಾಸವೇ ಮುರಿದು ಬಿದ್ದಿದೆ ಎಂದು ಚಿದಂಬರಂ ಆರೋಪಿಸಿದ್ದಾರೆ. 2022ರ ಜೂನ್‌ ಬಳಿಕ, ಜಿಎಸ್‌ಟಿ ಪರಿಹಾರ ನೀಡಿಕೆಯನ್ನು ಕನಿಷ್ಠ ಮೂರು ವರ್ಷ ವಿಸ್ತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಜಿಎಸ್‌ಟಿ ಮಂಡಳಿಯನ್ನು ಅಪ್ರಸ್ತುತಗೊಳಿಸುವ ಮತ್ತು ಮುಂದಿನ ಮೂರು ವರ್ಷಕ್ಕೆ ಜಿಎಸ್‌ಟಿ ಪರಿಹಾರವನ್ನು ವಿಸ್ತರಿಸುವಂತೆ ಅದು ಶಿಫಾರಸು ಮಾಡುವುದನ್ನು ತಡೆಯುವ ಯಾವುದೇ ಪ್ರಯತ್ನವನ್ನು ಬಲವಾಗಿ ವಿರೋಧಿಸುವುದಾಗಿ ಕಾಂಗ್ರೆಸ್‌ ಹೇಳಿದೆ.

ಕೇಂದ್ರ ಮತ್ತು ರಾಜ್ಯಗಳ ಆರ್ಥಿಕ ಸಂಬಂಧವನ್ನು ಸಮಗ್ರವಾಗಿ ವಿಮರ್ಶಿಸಬೇಕಾದ ಅಗತ್ಯ ಇದೆ. 21ನೇ ಶತಮಾನದಲ್ಲಿ ಕೈಗಾರಿಕೆ, ಉದ್ಯಮ ಮತ್ತು ವ್ಯಾಪಾರವು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದಕ್ಕೆ ತಕ್ಕಂತೆ ಭಾರತದ ಅರ್ಥ ವ್ಯವಸ್ಥೆ ಮತ್ತು ಕೆಲಸಗಾರ ವರ್ಗವನ್ನು ಸಿದ್ಧಪಡಿಸಬೇಕಿದೆ. ಸ್ವಯಂಚಾಲಿತ ವ್ಯವಸ್ಥೆ, ರೋಬೊಗಳ ಬಳಕೆ, ಕೃತಕ ಬುದ್ಧಿಮತ್ತೆ ಮುಂತಾದವುಗಳ ಬಳಕೆಯನ್ನು ಹೆಚ್ಚಿಸಬೇಕಿದೆ ಎಂದು ಕಾಂಗ್ರೆಸ್‌ ಅಭಿಪ್ರಾಯಪಟ್ಟಿದೆ.

ಮೋದಿ ಅವರ ಆಳ್ವಿಕೆಯಲ್ಲಿ ಹಣದುಬ್ಬರವು ಸ್ವೀಕಾರಾರ್ಹವಲ್ಲದ ಮಟ್ಟಕ್ಕೆ ಏರಿಕೆಯಾಗಿದೆ. ಉದ್ಯೋಗದ ಸ್ಥಿತಿಯು ಶೋಚನೀಯವಾಗಿದೆ. ಸಾಮಾಜಿಕ ಸೇವಾ ಕ್ಷೇತ್ರಕ್ಕೆ ಮಾಡುತ್ತಿರುವ ಖರ್ಚು ಕಡಿಮೆಯಾಗಿದೆ. ಇದರ ಜತೆಗೆ, ಬಾಹ್ಯ ವಿಚಾರಗಳು ಅರ್ಥ ವ್ಯವಸ್ಥೆಯ ಮೇಲೆ ಒತ್ತಡ ಹೇರುತ್ತಿವೆ. ಆದರೆ, ಈ ಎಲ್ಲ ಬೆಳವಣಿಗೆಗಳನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಸರ್ಕಾರಕ್ಕೆ ಯಾವುದೇ ಅರಿವು ಇಲ್ಲ ಎಂದು ಚಿದಂಬರಂ ಹೇಳಿದ್ದಾರೆ.

ಜಾಗತಿಕ ಅಂಶಗಳು ಮತ್ತು ಉದಾರೀಕರಣದ ನಂತರದ 30 ವರ್ಷಗಳ ಬೆಳವಣಿಗೆಗಳನ್ನು ಗಮನದಲ್ಲಿ ಇರಿಸಿಕೊಂಡು ಆರ್ಥಿಕ ನೀತಿ
ಯನ್ನು ಮರುರೂಪಿಸಬೇಕಿದೆ. ಹೆಚ್ಚುತ್ತಿರುವ ಅಸಮಾನತೆ, ತಳಭಾಗದಲ್ಲಿರುವ ಶೇ 10ರಷ್ಟು ಜನರ ತೀವ್ರ ಬಡತನ, ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ (116 ದೇಶಗಳ ಪಟ್ಟಿಯಲ್ಲಿ 101ನೇ ರ್‍ಯಾಂಕ್‌), ಮಹಿಳೆಯರು ಮತ್ತು ಮಕ್ಕಳಲ್ಲಿ ವ್ಯಾಪಕವಾಗಿರುವ ಅಪೌಷ್ಟಿಕತೆ ಮುಂತಾದ ವಿಚಾರಗಳತ್ತ ತಕ್ಷಣ ಗಮನ ಹರಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ಗೋಧಿ ರಫ್ತು ನಿಷೇಧಕ್ಕೆ ವಿರೋಧ:

ಗೋಧಿ ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರದ ಕ್ರಮವು ರೈತ ವಿರೋಧಿ ಎಂದು ಕಾಂಗ್ರೆಸ್‌ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT